ಪತ್ರಿಕೋದ್ಯಮದ ಮೂಲಕ ರಾಷ್ಟ್ರದ ಪ್ರಗತಿ ಸಾಧ್ಯ: ಪಾಟೀಲ

Nation's progress is possible through journalism: Patil

ಪತ್ರಿಕೋದ್ಯಮದ ಮೂಲಕ ರಾಷ್ಟ್ರದ ಪ್ರಗತಿ ಸಾಧ್ಯ: ಪಾಟೀಲ 

ಬೆಳಗಾವಿ: ಪತ್ರಿಕೋದ್ಯಮ ವೃತ್ತಿಯ ಮೂಲಕ ರಾಷ್ಟ್ರದ ಪ್ರಗತಿ ಸಾಧ್ಯ ಆದ್ದರಿಂದ ಸಮಾಜ ಶಾಸ್ತ್ರ, ಭಾಷೆಗಳು ಸೇರಿದಂತೆ ಅನೇಕ ಶಾಸ್ತ್ರಗಳ ಶಿಕ್ಷಣಕ್ಕಿಂತ ಸಮಾಜದಲ್ಲಿ ಪ್ರತಿಕೋದ್ಯಮ ಶಿಕ್ಷಣವು ಬಹಳಷ್ಟು ಮಹತ್ವ ಪಡೆದಿದೆ ಎಂದು ಆರ್‌ಸಿಯು ಕಲಾ ನಿಕಾಯದ ಡೀನ್ ಪ್ರೊ. ಡಿ. ಎನ್‌. ಪಾಟೀಲ ಅವರು ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಜರುಗಿದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುನಃಶ್ಚೇತನ ಮತ್ತು ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ವೈದ್ಯ, ಇಂಜಿನಿಯರ್, ಆಡಳಿತ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತಪ್ಪು ಜರುಗಿದರೆ ಅದರ ನಷ್ಟ ಕೇವಲ ಆ ಒಂದು ಸೀಮಿತ ಅವಧಿಗೆ ಮತ್ತು ನಿರ್ದಿಷ್ಟ ಸಂಬಂಧಿತ ವ್ಯಕ್ತಿಗಳಿಗೆ ಮಾತ್ರ ಉಂಟಾಗುತ್ತದೆ. ಆದರೆ ಪತ್ರಿಕೋದ್ಯಮ ಮತ್ತು ಮಾಧ್ಯಮ ತನ್ನ ಜವಾಬ್ದಾರಿ ಮತ್ತು ವೃತ್ತಿಪರತೆ ಕಡೆಗಣಿಸಿ ತಪ್ಪು ಮಾರ್ಗ ಹಿಡಿದರೆ, ಸಮಸ್ತ ಸಮಾಜ ಮತ್ತು ಅನೇಕ ವರ್ಷ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಪತ್ರಕರ್ತರು ಮತ್ತು ಮಾಧ್ಯಮವು ಪಕ್ಷಾತೀತ, ಜಾತ್ಯಾತೀತ ಮತ್ತು ಧರ್ಮ ನಿರಪೇಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಸಂಯೋಜಕಿ ಡಾ. ಸುಷ್ಮಾ. ಆರ್ ಮಾತನಾಡಿ, ಉತ್ತರ ಕರ್ನಾಟಕದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಆರ್‌ಸಿಯುದಲ್ಲಿ ಪತ್ರಿಕೋದ್ಯಮ ವಿಭಾಗವನ್ನು ಪ್ರಾರಂಭಿಸಲಾಗಿದೆ. ಉತ್ತರ ಕರ್ನಾಟಕ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆ ಅಡಗಿದ್ದರು, ನಾಚಿಕೆ ಸ್ವಭಾವ ಮತ್ತು ಪ್ರಸ್ತುತತೆಯ ಕೌಶಲದ ಕೊರತೆಯಿಂದ ಆ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಬಾಚಿಕೊಳ್ಳಲು ಹಿಂದುಳಿಯುತ್ತಾರೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಮಾಧ್ಯಮ ಸಂಸ್ಥೆಗೆ ಅವಶ್ಯವಿರುವ ಕೌಶಲಗಳನ್ನು ಶ್ರದ್ಧೆಯಿಂದ ಕಲಿತು ಮಾಧ್ಯಮರಂಗದಲ್ಲಿ ಮಿಂಚಬೇಕು ಎಂದು ಸಲಹೆ ನೀಡಿದರು.  

ಇದೆ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯಕ್ರಮ, ಪ್ರಾಯೋಗಿಕ ತರಗತಿ, ಪಠ್ಯೇತರ ಚಟುವಟಿಕೆ ಮತ್ತು ವಿವಿಯಲ್ಲಿನ ವಿವಿಧ ಸವಲತ್ತುಗಳ ಕುರಿತಾದ ಸಮಗ್ರ ಮಾಹಿತಿಯನ್ನು ನೀಡಲಾಯಿತು. ರಮೇಶ ಕಂಬಾರ, ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.  

ಅತಿಥಿ ಉಪನ್ಯಾಸಕ ಆನಂದ ತುಳಸಿಕಟ್ಟಿ ಸ್ವಾಗತಿಸಿದರು. ವಿದ್ಯಾಶ್ರೀ ಹಾಲಕೇರಿಮಠ ಪರಿಚಯಿಸಿದರು. ಪ್ರೀತಿ ಮಾಳವದೆ ನಿರೂಪಿಸಿದರು. ಅರುಣ ಹೊಸಮಠ ವಂದಿಸಿದರು.