ನಾವಿಲ್ಲದಿದ್ದರೆ ನಾಶಿ ಎನ್‌‌ಕೌಂಟರ್ ಆಗುತ್ತಿದ್ದರು: ಎಚ್.ಡಿ.ಕುಮಾರಸ್ವಾಮಿ

H D Kumaraswamy

ಬೆಂಗಳೂರು, ನ.29-ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್‌ ನಾಶಿ ಅವರಿಗೆ ದೇವೇಗೌಡರ ಹಾಗೂ ತಮ್ಮ ಬೆಂಬಲ ಇಲ್ಲದೇ ಹೋಗಿದ್ದಲ್ಲಿ ಅವರು ಯಾವಾಗಲೋ ಎನ್‌ಕೌಂಟರ್ ಆಗಿಬಿಡುತ್ತಿದ್ದರು ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾಶುಕ್ರವಾರ ನಾಶಿ ಪರ ಕ್ಷೇತ್ರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪೊಲೀಸರು ಹಾಗೂ ರೌಡಿಗಳು ಪಕ್ಷದ ಕಾರ್ಯಕರ್ತರು ಹಾಗೂ ನಾಶಿ ಮೇಲೆ ಹಲ್ಲೆ ದಬ್ಬಾಳಿಕೆ ಮಾಡುತ್ತಿದ್ದು, ತಾವಿಲ್ಲದಿದ್ದರೆ ನಾಶಿ ಪೊಲೀಸರಿಂದಷ್ಟೆ ಅಲ್ಲ ರೌಡಿಗಳಿಂದಲೂ ಎನ್‌‌ಕೌಂಟರ್ ಆಗಿಬಿಡುತ್ತಿದ್ದರು ಎಂದು ಅನರ್ಹ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧ ಪರೋಕ್ಷವಾಗಿ ಕುಮಾರಸ್ವಾಮಿ ಆರೋಪ ಮಾಡಿದರು.

ಗೋಪಾಲಯ್ಯ ಹಿಂದೊಮ್ಮೆ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದರು. ತಪ್ಪಿಗಾಗಿ ದೇವೇಗೌಡರ ಬಳಿ ಬಂದು ಕ್ಷಮೆಯಾಚಿಸುವಂತೆ ನಾಟಕವಾಡಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಅವರು ಬದಲಾಗುತ್ತಾರೆ ಎಂಬ ಕಾರಣಕ್ಕಾಗಿ 2013 ರಲ್ಲಿ ಒಂದು ಅವಕಾಶಕೊಟ್ಟೆವು. ಹಾಗೆಯೇ 2018ರಲ್ಲಿಯೂ ಪಕ್ಷದಿಂದ ಗೆದ್ದು ಈಗ ಹಣಕ್ಕಾಗಿ ತಮ್ಮನ್ನು ಮಾರಿಕೊಂಡು ದೊಡ್ಡವರಿಗೆ ಮೋಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ಸರ್ಕಾರದಲ್ಲಿ ಒಂದು ವರ್ಷಕ್ಕೆ 200 ಕೋಟಿ ಅಭಿವೃದ್ಧಿಗೆ ನೀಡಿದ್ದರೆ ಮೈತ್ರಿ ಸರ್ಕಾರದ ಒಂದು ವರ್ಷದಲ್ಲಿ ತಾವು ಅದಕ್ಕಿಂತಲೂ ದುಪ್ಪಟ್ಟು ಅಂದರೆ 472 ಕೋಟಿ ರೂ. ಕೊಟ್ಟಿದ್ದೇನೆ. ಕಾಂಗ್ರೆಸ್‌ನವರ ಸ್ಥಿತಿ ಈಗ ನಾಯಿಗಳಿಗೆ ಬಿಸ್ಕೆಟ್ ಹಾಕಿದಂತಾಗಿದೆ ಎಂದು ಲೇವಡಿ ಮಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ.ಸದಾನಂದ ಗೌಡ ವಿರುದ್ಧ ವ್ಯಂಗ್ಯವಾಡಿದ ಅವರು, ಸದಾನಂದ ಗೌಡರು ಸತ್ತ ಮನೆಗೂ ಹೋಗಿ ನಗುತ್ತಾರೆ. ಹೀ ಎನ್ನುತ್ತಾರೆ ಎಂದು ಅಣಕವಾಡಿದರು.

ಸದಾನಂದಗೌಡರನ್ನು ಸತ್ತವರ ಮನೆಗೆ ಕರೆದುಕೊಂಡು ಹೋಗಬೇಡಿ.ಅವರು ಸತ್ತವರ ಮನೆಗೂ ಹೋಗಿ ಸತ್ತಿದ್ದಾರಾ ಎಂದು ನಗುತ್ತಲೇ ಕೇಳುತ್ತಾರೆ ಎಂದು ವ್ಯಂಗ್ಯವಾಡಿದರು.