ಇಂದು ಸಂಗೀತ ಬೈಠಕಗಳು ಅವಶ್ಯಕವಾಗಿವೆ: ಜಿ.ಎಸ್.ಹೆಗಡೆ
Music studios are necessary today: G.S. Hegde
ಲೋಕದರ್ಶನ ವರದಿ
ಧಾರವಾಡ 20: ಇಂದು ಮನೆಯಲ್ಲಿ ನಡೆದಂಥ ಪ್ರತಿಭಾನ್ವಿತ ಯುವ ಕಲಾವಿದರ ಸಂಗೀತದ ಬೈಠಕ್ ಇಂದಿನ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಇಂಥ ಬೆಳೆಯುವ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಬೆಂಗಳೂರಿನ ಸಪ್ತಕ ಸಂಸ್ಥೆಯ ಸಂಸ್ಥಾಪಕ ಜಿ.ಎಸ್. ಹೆಗಡೆ ಅವರು ಅಭಿಪ್ರಾಯಪಟ್ಟರು.
ಧಾರವಾಡದ ಕಲ್ಯಾಣನಗರದ ರವಿ ಕಟ್ಟಿ ಅವರ ನಿವಾಸದಲ್ಲಿ ಬೆಂಗಳೂರಿನ ಸಪ್ತಕ ಹಾಗೂ ಧಾರವಾಡದ ಶ್ರುತಿನಂದನ ಸಂಸ್ಥೆ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಒಂದು ಕಾಲದಲ್ಲಿ ಇಂಥ ಬೈಠಕ್‌ಗಳಲ್ಲಿ ಪಾಲ್ಗೊಂಡು, ಪ್ರತಿಭೆ ಪ್ರದರ್ಶನಗೈದವರು ಮಹಾನ್ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಇಂಥ ಭರವಸೆಯ ಕಲಾವಿದರೇ ಮುಂದಿನ ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಹೀಗಾಗಿ ಮನೆ-ಮನೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮುಂದಿನ ಪೀಳಿಗೆಯ ಕಲಾವಿದರ ನಿರ್ಮಾಣದಲ್ಲಿ ನೆರವಾಗೋಣ' ಎಂದು ಕರೆಕೊಟ್ಟರು.
ನಂತರ ಮಾತನಾಡಿದ ಖ್ಯಾತ ಸಿತಾರ ವಾದಕರಾದ ಉಸ್ತಾದ್ ಶಫೀಕಖಾನ್ ‘ಇಂಥ ಯುವ ಭರವಸೆಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಇಂಥ ಬೈಠಕ್‌ಗಳು ಯುವ ಪ್ರತಿಭೆಗಳ ಕಲಾವಂತಿಕೆಯನ್ನು ಮುನ್ನೆಲೆ ತಂದು ಗುರುತಿಸುವಂತೆ ಮಾಡುತ್ತವೆ' ಎಂದರು.
ಕಿರಾನಾ ಘರಾಣೆಯ ವಿದುಷಿ ಶುಭಾಂಗಿ ಜಾಧವ ಅವರ ಶಿಷ್ಯೆ ಶಿವಾನಿ ಕವಠೇಕರ ಅವರ ಗಾಯನ ಪ್ರಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಶಿವಾನಿ ಮಧುವಂತಿ ರಾಗ ಹಾಗೂ ಮರಾಠಿ ಅಭಂಗವನ್ನು ಪ್ರಸ್ತುತಪಡಿಸಿದರು. ನಂತರ ಉಸ್ತಾದ್ ಶಫೀಕಖಾನ್ ಹಾಗೂ ಶ್ರುತಿ ದಿಗ್ಗಾವಿ ಅವರ ಶಿಷ್ಯೆ ಸಮನ್ವಿತಾ ಕಟ್ಟಿ ಅವರು ಮನಮೋಹಕ ರಾಗೇಶ್ರೀ ರಾಗವನ್ನು ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಿಷ್ಯೆ ದೀಪ್ತಿ ಪಾಟೀಲ ಅವರು ಮಾರುಬಿಹಾಗ ರಾಗವನ್ನು ಸಾದರಪಡಿಸಿದರು. ಬೈರವಿ ರಾಗ ಪ್ರಸ್ತುತಿಯೊಂದಿಗೆ ಸಂಗೀತ ಬೈಠಕ್‌ಗೆ ತೆರೆ ಎಳೆದರು.
ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ, ಜಯತೀರ್ಥ ಪಂಚಮುಖಿ ಸಹಕಾರ ನೀಡಿದರೆ, ಬಸವರಾಜ ಹಿರೇಮಠ ಸಂವಾದಿನಿಯಲ್ಲಿ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಸಪ್ತಕ ಸಂಸ್ಥಾಪಕ ಜಿ.ಎಸ್. ಹೆಗಡೆ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಂಗೀತಗಾರ ಪಂ.ಹನುಮಂತ ಬುರ್ಲಿ, ರಾಧಾ ದೇಸಾಯಿ, ಜೆ.ನಿರಂಜನ, ಪ್ರವೀಣ ಹೂಗಾರ, ವೇಣುಗೋಪಾಲ ಜೋಶಿ, ಕೃಷ್ಣ ಜೋಶಿ, ಶ್ರುತಿ ದಿಗ್ಗಾವಿ, ರಮೇಶ ಭಟ್ಟ, ನೂರಜಹಾನ್ ನದಾಫ್, ಲತಾ ಪಾಟೀಲ ಇನ್ನಿತರರು ಇದ್ದರು. ರವಿ ಕಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 