ಗ್ರಾಹಕರ ಹಕ್ಕುಗಳ ಸಂರಕ್ಷಣೆಗೆ ಸಂಚಾರಿ ಪೀಠ ಅಗತ್ಯ: ಸಚಿವ ಕೆ. ಎಚ್ ಮುನಿಯಪ್ಪ
ಬೆಳಗಾವಿ 05: ಅಧಿಕ ಬೆಲೆ ನಿಗದಿ, ಸೇವೆಗಳಲ್ಲಿನ ಕೊರತೆ, ಉತ್ಪನ್ನಗಳ ಗುಣಮಟ್ಟ, ದಾರಿತಪ್ಪಿಸುವ ಜಾಹೀರಾತುಗಳು ಅಥವಾ ಮಾರಾಟಗಾರ ವ್ಯಾಪಾರಿಯ ಅನ್ಯಾಯದ ಕುರಿತು ಗ್ರಾಹಕರ ದೂರುಗಳನ್ನು ಪರಿಹರಿಸಲು ಜಿಲ್ಲೆಯಲ್ಲಿ "ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ" ಪ್ರಾರಂಭವಾಗಿರುವುದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ. ಎಚ್ ಮುನಿಯಪ್ಪ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬೆಂಗಳೂರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಟೋ ನಗರದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ ಕಟ್ಟಡದ 3ನೇ ಮಹಡಿಯ ಕೆ.ಎಚ್.ಪಾಟೀಲ ಸಭಾ ಭವನದಲ್ಲಿ ಬುಧವಾರ (ಫೆ.05) ನಡೆದ ನೂತನ “ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ”ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ಬಾರಿಯೂ ನ್ಯಾಯಕ್ಕಾಗಿ ಗ್ರಾಹಕರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಜಿಲ್ಲೆಯಲ್ಲಿ ಗ್ರಾಹಕರ ಪ್ರಕರಣ ಬಾಕಿ ಇವೆ ಇವುಗಳ ತುರ್ತು ವಿಲೇವಾರಿಗಾಗಿ ಪ್ರತ್ಯೇಕ ಸಂಚಾರಿ ಪೀಠ ಅಗತ್ಯವಿತ್ತು. ಅದರಂತೆ ಕಡಿಮೆ ವೆಚ್ಚದಲ್ಲಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಗ್ರಾಹಕ ಆಯೋಗಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಕಾರ್ಯನಿರ್ವಹಿಸಲಿದೆ ಎಂದರು.
ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ವ್ಯಾಪಾರದ ಪ್ರಕ್ರಿಯೆಯಲ್ಲಿ ಸಂಘರ್ಷದ ಪಕ್ಷಗಳ ನಡುವಿನ ಪರ್ಯಾಯ ವಿವಾದ ಪರಿಹಾರದ ವ್ಯವಸ್ಥೆಯಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ. ಎಚ್ ಮುನಿಯಪ್ಪ ತಿಳಿಸಿದರು.
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ: ಎಚ್. ಕೆ ಪಾಟೀಲ ಮಾತನಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಅಗತ್ಯವಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಪ್ರಾರಂಭವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರಂತರ ಪ್ರಯತ್ನದಿಂದ ಇಂದು ಖಾಯಂ ಸಂಚಾರಿ ಪೀಠ ಉದ್ಘಾಟನೆಯಾಗುತ್ತಿದೆ.
ಗ್ರಾಹಕರ ಆಯೋಗ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಹಕರ ಪ್ರಕರಣಗಳು ಬಹಳ ದಿನಗಳನ್ನು ತೆಗೆದುಕೊಳ್ಳದೆ ಶೀಘ್ರ ವಿಲೇವಾರಿಯಾಗುವ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಮೇಲ್ಪಟ್ಟು ಗ್ರಾಹಕರ ಪ್ರಕರಣಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಪ್ರಕರಣ ಬಾಕಿ ಉಳಿಯದಂತೆ ಗ್ರಾಹಕರು ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು.
ಗ್ರಾಹಕರ ಸಮಸ್ಯೆ ಬಹು ಬೇಗನೆ ಇತ್ಯರ್ಥಗೊಳಿಸಲು ಕೆಲವು ತಿದ್ದುಪಡಿಯಾಗಬೇಕು. ಗ್ರಾಹಕರಿಗೆ ತಮ್ಮ ಹಕ್ಕು ಸಮೇತ ಸೇವೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೀಠ ನೆರವಾಗಬೇಕು. ಗ್ರಾಹಕರ ಸಂರಕ್ಷಣೆ ಕ್ರಮವಾಗಿ ಯಾವುದೇ ಪ್ರಕರಣಗಳು ಬಾಕಿ ಉಳಿಯಬಾರದು. ಜನಪರ, ಜನೋಪಯೋಗಿ ಸಂಚಾರಿ ಪೀಠವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಎಚ್. ಕೆ. ಪಾಟೀಲ ತಿಳಿಸಿದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಬಹಳ ದಿನಗಳಿಂದ ಸ್ಥಳದ ಕೊರತೆಯಿತ್ತು ಹಾಗಾಗಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಪ್ರಾರಂಭ ವಿಳಂಬವಾಗುತಿತ್ತು. ಈಗ ಪ್ರಾರಂಭವಾದ ಸಂಚಾರಿ ಪೀಠದ ಕಚೇರಿಗೆ ಬೇಕಾಗುವ ಅವಶ್ಯಕ ಪೀಠೋಪಕರಣ, ಸಿಬ್ಬಂದಿ ನೇಮಕ, ಅಗತ್ಯ ಸವಲತ್ತುಗಳನ್ನು ಒದಗಿಸಲಾಗುವುದು.
ಇಲ್ಲಿನ ಗ್ರಾಹಕರು ನ್ಯಾಯಕ್ಕಾಗಿ ಬೆಂಗಳೂರಿಗೆ ಹೋಗುವ ಸಂದರ್ಭ ಇತ್ತು. ಈ ಖಾಯಂ ಸಂಚಾರಿ ಪೀಠ ಆರಂಭ ಗ್ರಾಹಕರಿಗೆ ಸಂತಸದ ವಿಷಯವಾಗಿದೆ. ಕಳೆದ 4 ವರ್ಷಗಳಿಂದ ಖಾಯಂ ಪೀಠ ಪ್ರಾರಂಭಿಸುವ ಬಗ್ಗೆ ಹೋರಾಟವಿತ್ತು ಅದರಂತೆ ಇಂದು ಸಂಚಾರಿ ಪೀಠ ಉದ್ಘಾಟನೆಗೊಳ್ಳುತ್ತಿದೆ.
ಬೆಂಗಳೂರು ಮಾದರಿಯಲ್ಲಿ ಬೆಳಗಾವಿ ಜಿಲ್ಲೆ ದೊಡ್ಡದಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಇನ್ನಷ್ಟು ಅಭಿವೃದ್ಧಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ಕಲ್ಪಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಜಿಲ್ಲೆಯಲ್ಲಿ ಖಾಯಂ ಸಂಚಾರಿ ಪೀಠ 4 ವರ್ಷಗಳ ಹಿಂದೆಯೇ ಆಗಬೇಕಿತ್ತು. ಬಹಳ ದಿನಗಳಿಂದ ನ್ಯಾಯವಾದಿಗಳು ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯಲ್ಲಿ ಸಂಚಾರಿ ಪೀಠ ಲೋಕಾರೆ್ಣಗೊಳಿಸಲು ಕಾರಣರಾಗಿದ್ದಾರೆ. ಸಂಚಾರಿ ಪೀಠಕ್ಕೆ ನ್ಯಾಯಾಧೀಶರ ನೇಮಕವಾದರೆ ಮಾತ್ರ ಸೂಕ್ತ ವ್ಯವಸ್ಥೆ ಕಲ್ಪಿಸಿದಂತೆ ಎಂದು ಲೋಕಾಸಭಾ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಗ್ರಾಹಕರ ಪ್ರಕರಣಗಳು ಬಾಕಿ ಉಳಿಯಬಾರದು. ಗ್ರಾಹಕರಿಗೆ ಅತೀ ತ್ವರಿತವಾಗಿ ನ್ಯಾಯ ಸಿಗಬೇಕು. ಬಹಳ ಪ್ರಕರಣಗಳು 10 ವರ್ಷಗಳವರೆಗೆ ಬಾಕಿ ಇವೆ ಈ ರೀತಿ ಪರಿಸ್ಥಿತಿ ಮುಂದಿನ ದಿನಗಳ ನಿರ್ಮಾಣವಾಗಬಾರದು. ನ್ಯಾಯಾಲಯದಲ್ಲಿ ತ್ವರಿತವಾಗಿ ನ್ಯಾಯ ದೊರೆಯುತ್ತದೆ ಎಂದು ಗ್ರಾಹಕರು ವಿಶ್ವಾಸ ವ್ಯಕ್ತ ಪಡಿಸುವಂತಾಗಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಮೋಸ ಹೋದ ಗ್ರಾಹಕರಿಗೆ ಸ್ವಲ್ಪ ದಿನಗಳ ಕಾಲಾವಕಾಶದೊಳಗೆ ಕಾನೂನು ರೀತಿಯಲ್ಲಿ ಪ್ರಕರಣಗಳು ಇತ್ಯರ್ಥವಾಗಿ ನ್ಯಾಯ ಸಿಗುವಂತಾಗಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ ಕುಲಕರ್ಣಿ, ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ (ಹೆಚ್ಚುವರಿ ಪೀಠ) ಅಧ್ಯಕ್ಷ ಮಹಾಂತೇಶ ಶಿಗ್ಗಿ, ಬೆಂಗಳೂರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಸುನೀತಾ ಬಾಗೇವಾಡಿ, ಬೆಂಗಳೂರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಕಮತಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಪ್ಪ ಕಿವುಡಸಣ್ಣವರ ಸೇರಿದಂತೆ ಜಿಲ್ಲಾ ವಕೀಲರ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.