ಉರ್ದು ಶಾಲಾ ಕೊಠಡಿ ಬಾಗಿಲು ಒಡೆದ ಕಿಡಿಗೇಡಿಗಳು: ಕ್ರಮಕ್ಕೆ ಆಗ್ರಹ
ಕೊಪ್ಪಳ 23: ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿಯ ಬಹಾರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಬಾಗಿಲು, ಗಾಜು ಒಡೆದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹಾಗೂ ಪಾಸ್ಟರ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮುಂತಾದವರು ಆಗ್ರಹಿಸಿದ್ದಾರೆ.
ಮೇ 2022 ರಿಂದ ಇಲ್ಲಿಯವರೆಗೆ 25ಕ್ಕೂ ಹೆಚ್ಚು ಶಾಲೆಯ ಕೊಠಡಿಗಳ ಬಾಗಿಲುಗಳ ಮತ್ತು ಗೇಟಿನ ಕೀಲಿಗಳನ್ನು ಕಿಡಿಗೇಡಿಗಳು ಒಡೆದಿದ್ದಾರೆ. ದಿ,01/09/2022 ರಂದು ಗೇಟ್ ಮುರಿದು ಶಾಲೆಯ ವರ್ಗದ ಬಾಗಿಲಿಗೆ ಕಿಡಿಗೇಡಿಗಳ ಸತ್ತ ಹಾವು ನೇತು ಹಾಕಿದ್ದರು. ಹಾಗೂ ಸಹ ನಗರ ಪೊಲೀಸ್ ಠಾಣೆಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ದೂರನ್ನು ನೀಡಲಾಗಿತ್ತು, ಆಗ ಪೊಲೀಸರು ಬಂದು ಶಾಲಾ ಕೊಠಡಿ ಬಾಗಿಲಿಗೆ ಹಾಕಲಾಗಿದ್ದ ಸತ್ತ ಹಾವು ಇರುವುದನ್ನು ಪರೀಶೀಲಿಸಿ ಚಿತ್ರಗಳನ್ನು ತೆಗೆದುಕೊಂಡು ಹೋದರು, ಬಳಿಕವೂ ಪದೇಪದೇ ಕೊಠಡಿಗಳ ಬಾಗಿಲುಗಳ ಕೀಲಿಗಳನ್ನು ಹಾಗೂ ಗೇಟಿನ ಕೀಲಿಗಳನ್ನು ಒಡೆಯುವುದು ಮುಂದುವರಿಸಿ ಈಗ ಸುಮಾರು 25ಕ್ಕೂ ಹೆಚ್ಚು ಕೀಲಿಗಳ ಸಂಖ್ಯೆ ದಾಟಿದೆ.
ಶಾಲೆಯಿಂದ ಕೂಗಳತೆಯಲ್ಲಿ ನಗರ ಪೊಲೀಸ್ ಠಾಣೆ ಇದ್ದರೂ ಡಿ.22ರಂದು ರವಿವಾರ ಕಿಡಿಗೇಡಿಗಳು ಶಾಲೆಯ ಕೊಠಡಿ ಬಾಗಿಲು ಮತ್ತು ಉರ್ದು ಶಾಲಾ ಕೊಠಡಿಯ ಗಾಜು ಒಡೆದಿದ್ದಾರೆ. ಶಿಕ್ಷಣದ ಮಹತ್ವ ತಿಳಿಯದೆ ಇರುವಂತಹ ಅವಿದ್ಯಾವಂತ ಕಿಡಿಗೇಡಿಗಳು ಇಂತಹ ಕೃತ್ಯಗಳನ್ನು ಮಾಡಲು ಸಾಧ್ಯ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹಾಗೂ ಪಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಆಗ್ರಹಿಸಿದ್ದಾರೆ.