ಜಿಂದಾಲ್ಗೆ ಭೂಮಿ ಮಾರಾಟದಲ್ಲಿ ಸಚಿವರ ಹಿತಾಸಕ್ತಿ: ಶೋಭಾ

ಬೆಂಗಳೂರು 7: ಕೋಟ್ಯಂತರ ರೂಪಾಯಿ  ಬೆಲೆ ಬಾಳುವ 3,600 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡಲು ಸರ್ಕಾರ  ಮುಂದಾಗಿದೆ, ಇದರ ಹಿಂದೆ ಕೈಗಾರಿಕಾ ಸಚಿವ ಕೆ ಜೆ ಜಾರ್ಜ್  ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರ ಸ್ವ ಹಿತಾಸಕ್ತಿ ಅಡಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

  ಜಿಂದಾಲ್ ಸಂಸ್ಥೆ ಎಂಎಸ್ ಐಎಲ್ ಮತ್ತು ಸರಕಾರಕ್ಕೆ 10,000 ಕೋಟಿ ರೂಪಾಯಿ ಬಾಕಿ  ಉಳಿಸಿಕೊಂಡಿದೆ.ಸರ್ಕಾರ  ಮಾಡಿಕೊಂಡಿರುವ ಒಪ್ಪಂದದ ಯಾವುದೇ ಷರತ್ತುಗಳನ್ನು ಜಿಂದಾಲ್  ಸಂಸ್ಥೆ ಪಾಲಿಸಿಲ್ಲ. 

  ಈಗ 3,600 ಎಕರೆಯನ್ನು ಮಾರಾಟ ಮಾಡಲು ಸರ್ಕಾರ  ಹೊರಟಿದೆ. ಈ  ಭೂಮಿಯಲ್ಲಿ ಅತ್ಯಂತ ಬೆಲೆಬಾಳುವ ಕಬ್ಬಿಣದ ಅದಿರಿನ ನಿಕ್ಷೇಪವಿದೆ, ಇದಕ್ಕಾಗಿಯೇ ಡಿ ಕೆ ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಆರೋಪಿಸಿದರು. ಅಂದು ಬಳ್ಳಾರಿ ಗಣಿ ಭೂಮಿ ಉಳಿಸುತ್ತೇನೆ  ಎಂದು ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏಕೆ ಮೌನವಾಗಿದ್ದಾರೆ. ಮಾಜಿ ಪ್ರಧಾನಿ  ದೇವೇಗೌಡ ಅವರು ಯಾಕಾಗಿ ಮೌನಕ್ಕೆ ಶರಣಾಗಿದ್ದಾರೆ. ಹೆಚ್.ಕೆ.ಪಾಟೀಲ್, ವಿಶ್ವನಾಥ್  ವಿರೋಧದ ನಡುವೆಯೂ ಜಿಂದಾಲ್ ಗೆ ಭೂಮಿ ಕ್ರಯ ಏಕೆ ಮಾಡಿಕೊಡಬೇಕು. 

   ಬಳ್ಳಾರಿಯಲ್ಲಿ ನೀರಿನ  ಹಾಹಾಕಾರವಿದೆ. ಆದರೆ ಸರ್ಕಾರ ಜಿಂದಾಲ್ ಜತೆ 2 ಟಿಎಂಸಿ ನೀರು ಕೊಡುವ ಒಪ್ಪಂದ  ಮಾಡಿಕೊಂಡಿದೆ, ಆದರೆ ಅಕ್ರಮವಾಗಿ 5 ಟಿಎಂಸಿ ನೀರು ಕೊಡಲಾಗುತ್ತಿದೆ. ಇದರ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಜಿಂದಾಲ್  ಕಂಪೆನಿಗೆ ಸರ್ಕಾರ ಕಡಿಮೆ ದರದಲ್ಲಿ 3,666 ಎಕರೆ ಭೂಮಿ ಕೊಡುತ್ತಿದೆ, ಯಾವ ಆಧಾರದಲ್ಲಿ  ಶುದ್ಧ ಕ್ರಯಪತ್ರ ಮಾಡಿ ಭೂಮಿ ಕೊಟ್ಟಿದ್ದಾರೆ,  ಶುದ್ಧ ಕ್ರಯಪತ್ರ ಮಾಡಿದ ಮೇಲೆ ಸರ್ಕಾರಕ್ಕೆ ಭೂಮಿ ಮೇಲೆ ಒಡೆತನ ಇರುವುದಿಲ್ಲ, ಈ ಭೂಮಿಯಲ್ಲಿ ಕಬ್ಬಿಣದ ನಿಕ್ಷೇಪ ಇದೆ,  ಇದಕ್ಕಾಗಿ ಈ ಬೆಲೆಬಾಳುವ ಭೂಮಿಯನ್ನು ಜಿಂದಾಲ್ಗೆ ಕೊಡಲಾಗುತ್ತಿದೆ ಎಂದು ಶೋಭಾ ಆರೋಪಿಸಿದರು. ಸಿದ್ದರಾಮಯ್ಯ ಹಿಂದೆ ವಿಧಾನಸಭಾ ಚುನಾವಣೆಯ ವೇಳೆ ಬಳ್ಳಾರಿ  ಪಾದಯಾತ್ರೆ ಮಾಡಿದ್ದರು, ತೊಡೆ ತಟ್ಟಿಕೊಂಡು ಪಾದಯಾತ್ರೆ ಮಾಡಿದ್ದರು, ಸಿದ್ದರಾಮಯ್ಯ  ತೊಡೆ, ಭುಜ ತಟ್ಟಿದ್ದು ಇವತ್ತು ಎಲ್ಲಿ ಹೋಯಿತು? ಎಂದು ಸಿದ್ದರಾಮಯ್ಯರನ್ನು ಶೋಭಾ ಕರಂದ್ಲಾಜೆ ಕೆಣಕಿದರು. 

   ಸರ್ಕಾರದಲ್ಲಿ ಕಿತ್ತಾಟ ನಡೆಯುತ್ತಿದೆ, ಕಾಂಗ್ರೆಸ್ ಜೆಡಿಎಸ್ ಮಧ್ಯೆ ಆಂತರಿಕ ಕಚ್ಚಾಟ ನಡೆಯುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿದೆ ಎಂದು ಆರೋಪಿಸಿದರು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಸುಮಾರು 7,000 ಕೋಟಿ ರೂಪಾಯಿ ಅನುದಾನ ರಾಜ್ಯಕ್ಕೆ ಬಂದಿದೆ. ಆದರೆ ರಾಜ್ಯ ಸರ್ಕಾರ ಆ ಹಣವನ್ನು ಸದುಪಯೋಗ ಮಾಡಿಲ್ಲ. ಎನ್ಡಿಆರ್ಎಫ್ ಮತ್ತು ಯುಡಿಆರ್ಎಫ್ ನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಏನು ಮಾಡಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. 

   ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಮುಖ್ಯಮಂತ್ರಿಯವರು 40,000 ಕೋಟಿ ರೂ.ಸಾಲ ಮನ್ನಾ ಮಾಡಿರುವುದಾಗಿ ಹೇಳಿದ್ದರು. ಆದರೆ ಈಗ ಬಂಡೆಪ್ಪ ಕಾಶಂಪೂರ ಅವರು 6,000 ಕೋಟಿ ರೂ.ಸಾಲ ಮನ್ನಾ ಆಗಿದೆ ಎನ್ನುತ್ತಾರೆ, ಹಾಗಾದರೆ ಉಳಿದ ಹಣ ಏನಾಯಿತು ಎಂದು ಅವರು ಪ್ರಶ್ನಿಸಿದರು. ಬಜ್ಪೆ ಅಣೆಕಟ್ಟೆ ಪೂರ್ತಿ  ಖಾಲಿಯಾಗಿದೆ, ಉಡುಪಿ ಚಿಕ್ಕಮಂಗಳೂರಿನಲ್ಲಿ ಖಾಸಗಿಯವರು ಮತ್ತು ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.ಸರ್ಕಾರದ ವತಿಯಿಂದ ಎಲ್ಲೂ ಟ್ಯಾಂಕರ್ ನೀರು ಪೂರೈಕೆ ಆಗುತ್ತಿಲ್ಲ. 

   ಉತ್ತರ ಕರ್ನಾಟಕದಲ್ಲಿ ಒಂದು ಲಕ್ಷ ರೂ ಬೆಲೆ ಬಾಳುವ ಜೋಡಿ ಎತ್ತುಗಳು ಮೂವತ್ತು ಸಾವಿರ ರೂ.ಗಳಿಗೆ ಬಿಕರಿಯಾಗುತ್ತಿವೆ. ಕಸಾಯಿ ಖಾನೆಗಳಿಗೆ ದನ-ಕರುಗಳು ಹೋಗುತ್ತಿವೆ, ಭಾರಿ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಜನ ಗುಳೆ ಹೋಗುತ್ತಿದ್ದಾರೆ, ಆದರೆ ಸರ್ಕಾರ  ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು. ಹಿಂದೆ ಮುಖ್ಯಮಂತ್ರಿ ಎಚ್ ಡಿ  ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದಾಗ ಆ ಹಳ್ಳಿಗಳಿಗೆ ಕೃತಕ ಶೌಚಾಲಯ, ಹಾಸಿಗೆ ದಿಂಬು ತೆಗೆದುಕೊಂಡು ಹೋಗಿದ್ದರು, ವಾಪಸ್ ಬರುತ್ತಿದ್ದಂತೆಯೇ ಅಧಿಕಾರಿಗಳು ಶೌಚಾಲಯ, ಹಾಸಿಗೆ ದಿಂಬು ವಾಪಸ್ ತಂದರು. 

    ಮುಖ್ಯಮಂತ್ರಿ ಗ್ರಾಮವಾಸ್ತವ್ಯದ ವೇಳೆ ಎಷ್ಟು ಗ್ರಾಮಗಳು ಅಭಿವೃದ್ಧಿಯಾಗಿವೆ ಎಂಬುದನ್ನು ವಿವರಿಸಲಿ ಎಂದು ಅವರು ಸವಾಲು ಹಾಕಿದರು. ಈಗ ಕುಮಾರಸ್ವಾಮಿ ಶಾಲಾ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ, ಸರ್ಕಾರಿ  ಶಾಲೆಗಳು ಎಲ್ಲಿವೆ? ಕನ್ನಡ ಶಾಲೆಗಳು ಮುಚ್ಚಿಹೋಗಿವೆ, ಗ್ರಾಮವಾಸ್ತವ್ಯ ಎಂಬುದು ಕೇವಲ ನಾಟಕ ಎಂದು ಟೀಕಿಸಿದರು.  ಕೃಷಿ ಹೊಂಡಗಳ ಮೂಲಕ ಸಕರ್ಾರ ಲೂಟಿ ಹೊಡೆಯುತ್ತಿದೆ, ಕಡತಗಳಲ್ಲಿ ಮಾತ್ರ ಕೃಷಿ ಹೊಂಡಗಳ ಲೆಕ್ಕ ಕಾಣುತ್ತಿದೆ, ಆದರೆ ವಾಸ್ತವದಲ್ಲಿ ಕೃಷಿ ಹೊಂಡಗಳೇ ನಿರ್ಮಾಣವಾಗಿಲ್ಲ ಎಂದು ಆರೋಪಿಸಿದ ಅವರು, ಜಾನುವಾರುಗಳಿಗೆ ಸರಕಾರ  ಮೇವು ಕೊಡುತ್ತಿಲ್ಲ, ಕಸಾಯಿಖಾನೆಗಳಿಗೆ ದನ, ಕರು,ಎತ್ತುಗಳು ಹೋಗುತ್ತಿವೆ ಎಂದು ಹೇಳಿದರು. ಸಾಲಮನ್ನಾ ವಿಚಾರದಲ್ಲಿ ಸರ್ಕಾರ ಬೊಗಳೆ ಬಿಡುತ್ತಿದೆ, ರೈತರ ಮೇಲೆ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲ ಹೇಳಿದ ಅವರು,ಸರ್ಕಾರಿ  ಅಧಿಕಾರಿಗಳ ವರ್ಗಾವಣೆಯಲ್ಲೂ ಸರ್ಕಾರದಿಂದ ದಂಧೆ ನಡೆಯುತ್ತಿದೆ. 

  ನಮ್ಮ ಜಿಲ್ಲೆಗೆ ಎಷ್ಟು ಜನ ಜಿಲ್ಲಾಧಿಕಾರಿ ಬಂದು ಹೋದರು! ಒಬ್ಬರು ಜಿಲ್ಲಾಧಿಕಾರಿ ಬಂದಾಗ ಅವರ ಜೊತೆ ಮಾತನಾಡುವಷ್ಟರಲ್ಲಿ ಅವರ ವರ್ಗಾ  ಆಗಿರುತ್ತದೆ, ಇದರಿಂದ ಅಧಿಕಾರಿಗಳು ಸಹ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ ಎಂದು ಹೇಳಿದರು. ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಸಿದ್ದರಾಮಯ್ಯ ಅವರಿಗೆ ಈ ಮೈತ್ರಿ ಸಕರ್ಾರ ಉಳಿಯುವುದು ಇಷ್ಟ ಇಲ್ಲ. ಆದ್ದರಿಂದ ಅವರೇ ಶಾಸಕರನ್ನು ಛೂಬಿಟ್ಟು ಆಪರೇಷನ್ ಕಮಲದ ಹೆಸರಿನಲ್ಲಿ ಆಟವಾಡುತ್ತಿದ್ದಾರೆ. 

   ನಾವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರೇ ನಾಲ್ಕು ಶಾಸಕರನ್ನು ಅಲ್ಲಿಗೆ ಕಳಿಸುವುದು, ಇಲ್ಲಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ, ಇದರ ಹಿಂದೆ ಸಿದ್ದರಾಮಯ್ಯ ಅವರ ಸೂಚನೆ ಇದೆ. ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಅದಕ್ಕಾಗಿ ಹೀಗೆ ಮಾಡಿಸುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗಬೇಕಿದ್ದರೆ  ಆವತ್ತೇ ವರಿಷ್ಠರಿಗೆ ಹೇಳಬೇಕಿತ್ತು ಎಂದು ಹೇಳಿದ ಶೋಭಾ, ನಾವು ಯಾರನ್ನೂ ಭೇಟಿ ಮಾಡಿಲ್ಲ. ಈಗ ರಿವರ್ಸ್  ಆಪರೇಷನ್ ಎಂದು ಹೇಳುತ್ತಿದ್ದಾರೆ.ರಿವರ್ಸ್ ಆಪರೇಷನ್ ಕೂಡಾ ಒಂದು ವದಂತಿ ಸ್ಪಷ್ಟಪಡಿಸಿದರು.