ಮಾನವನೆದೆಯಲ್ಲಿ ಮಾನವೀಯತೆಯ ಬಿತ್ತುವ ಮಾಧ್ಯಮ ರಂಗಭೂಮಿ : ವಿಶ್ವನಾಥ
ಗದಗ 17 :ನಾಟಕಗಳು ಜನರಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿ ಬಿತ್ತುತ್ತವೆ ಬರೀ ಮನೋರಂಜನೆಯನ್ನು ಮಾತ್ರವಲ್ಲ. ಜಾತ್ಯಾತೀತತೆ, ಧರ್ಮಾತೀತ ಮೌಲ್ಯಗಳನ್ನು ಸಾರುವಲ್ಲಿ ರಂಗಭೂಮಿಯ ಪಾತ್ರ ಮಹತ್ವರವಾದದ್ದೆಂದು ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಶ್ವನಾಥ ಜಿ ತಿಳಿಸಿದರು.ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಮತ್ತು ನಟರಂಗ ಸಂಸ್ಥೆಯ ಸಹಭಾಗಿತ್ವದಲ್ಲಿ 21 ದಿನಗಳ ಕಾಲ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿರಂಗ ತರಬೇತಿ ಕಾರ್ಯಗಾರ’ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಮುಂದುವರೆದು ಮಾತನಾಡಿದ ಎಲ್ಲ ಭೇದಗಳನ್ನು ಅಳಿಸಿ ಸಮತೆಯ ಕಣ್ಣಲ್ಲಿ ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವ ಜನತೆಯನ್ನು ರೂಪಿಸುವ ತುರ್ತುಇದೆ.ಈ ಹೊತ್ತು ರಂಗಭೂಮಿ ಕೂಡಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆ ಪಡೆದುಕೊಂಡಿದೆ. ರಂಗಭೂಮಿ ಎಂದ ತಕ್ಷಣ ನಾಟಕ, ಅಭಿನಯ ಸನ್ನಿವೇಶಗಳು ಎದುರಾಗುತ್ತವೆ. ನಾಟಕ ಪ್ರಕಾರವನ್ನು ಕೇವಲ ಹವ್ಯಾಸ ಹಾಗೂ ಮನರಂಜನೆಯ ಮಾಧ್ಯಮವಾಗಿ ಸ್ವೀಕರಿಸದೇ.ಆ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಸಾಮಾನ್ಯ ಜನತೆಗೆ ಅರಿವು ಮೂಡಿಸುವ ಮಾಧ್ಯಮವಾಗಿ ರಂಗಭೂಮಿ ಗುರುತಿಸಿಕೊಂಡಿದೆ ಎಂದರು.ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಕಾರ್ಯಾಗಾರದ ಸಂಚಾಲಕರಾದ ಡಾ.ಅಂದಯ್ಯ ಅರವಟಗಿ ಮಠ ಸಮಾಜದ ಅನೇಕ ಸ್ಥಿತ್ಯಂತರಗಳಿಗೆ ರಂಗಭೂಮಿ ಕಾರಣವಾಗಿದೆ. ಉತ್ತಮ ಸಮಾಜ ನಿರ್ಮಾಣಗೊಳ್ಳಲು ಆಳುವ ವ್ಯವಸ್ಥೆಯ ಲೋಪದೋಷಗಳನ್ನು ಜನರಿಗೆ ತಲುಪಿಸುವಾಗ, ಸಮಾಜದ ದುಷ್ಟ ವ್ಯಕ್ತಿಗಳ ದಬ್ಬಾಳಿಕೆಯನ್ನು ಎಚ್ಚರಿಸುವಾಗ, ವೈಜ್ಞಾನಿಕ ಸತ್ಯಗಳನ್ನು ತಿಳಿಸುವಾಗ, ಮೌಢ್ಯತೆಗಳನ್ನು ಧಿಕ್ಕರಿಸುವಾಗ, ಶಿಕ್ಷಣ ಪದ್ಧತಿಯನ್ನು ಸಾರ್ವತ್ರೀಕರಿಸುವಾಗ, ಜಾತಿ ಪದ್ಧತಿ-ಧಮಾಂರ್ಧತೆಯ ದುಷ್ಪರಿಣಾಮ ತಿಳಿಸುವಾಗ, ಯುದ್ಧದ ಭೀಕರತೆಯ ಬಗ್ಗೆ ಎಚ್ಚರಿಸುವಾಗ ಪಾತ್ರಗಳ ಮೂಲಕ ಸಮಾಜವನ್ನು ಕಟ್ಟಿಕೊಡುವ ರಂಗಭೂಮಿಯ ಕೊಡುಗೆ ಅಪಾರವಾಗಿದೆನಾಟಕ ಶಿಬಿರದ ಸಂಚಾಲಕರಾದ ಮಹೇಶ್ ಮಾತನಾಡಿ ರಂಗದಲ್ಲಿ ಇದ್ದಷ್ಟು ಹೊತ್ತು ವೈಯಕ್ತಿಕ ಬದುಕಿನ ಪಾತ್ರ ಮರೆತು ಹೋಗುತ್ತದೆ.ವೈಯಕ್ತಿಕ ಜೀವನದಲ್ಲಿ ಬಡವನಾಗಿರುವವನು ಕೂಡ, ರಂಗದಲ್ಲಿ ಆಗರ್ಭ ಶ್ರೀಮಂತನಾಗುತ್ತಾನೆ. ಅದೇರಂಗದ ಶಕ್ತಿ.ಬಣ್ಣ ಕಳಚಿದ ಮೇಲಷ್ಟೇಆತನ ವೈಯಕ್ತಿಕ ಬದುಕು ಅದರೊಳಗಿನ ಸಮಸ್ಯೆಗಳ ನೆನಪಾಗುತ್ತದೆ.ಇಲ್ಲಿ ಸಿಗುವ ಆತ್ಮತೃಪ್ತಿ ಮತ್ತೆಲ್ಲೂ ಸಿಗಲಾರದು ಎನ್ನುವಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯರಾದಡಾ. ಎ. ಕೆ. ಮಠ ನಮಗೇ ಕನ್ನಡಿಯಾಗಿ, ಸ್ವವಿಮರ್ಶೆಯ ಮಾರ್ಗವಾಗಿ ರಂಗಭೂಮಿ ಇದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ದೃಷ್ಟಿಯಿಂದ ರಂಗಭೂಮಿ ಉತ್ತಮ ಆಯ್ಕೆ. ಇವತ್ತಿನ ಮಕ್ಕಳು ಹತ್ತು- ಹನ್ನೆರಡು ವರ್ಷಗಳವರೆಗೂ ವಿಶ್ವಮಾನವ ರಾಗಿಯೇ ಇರುತ್ತಾರೆ. ಆನಂತರವಷ್ಟೇ ಸಾಮಾಜಿಕ ವ್ಯವಸ್ಥೆಯ ಕೈಗೆ ಸಿಕ್ಕು ವಾತಾವರಣದ ಕೈ ಗೊಂಬೆಗಳಾಗಿ ಬಿಡುತ್ತಾರೆ.ಇಂತಹ ಅಪಾಯವನ್ನು ಮೀರಬೇಕಾದರೆ ರಂಗಭೂಮಿಯ ಸಂಪರ್ಕ ಅನಿವಾರ್ಯವೆಂದರು.ಕಾರ್ಯಕ್ರಮದ ನಿರೂಪಣೆಯನ್ನು ಕು.ಸಹನಾ ನಿರ್ವಹಿಸಿದರು, ಕು.ಭೂಮಿಕಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರಸಿಬ್ಬಂದಿ ಹಾಜರಿದ್ದು ಯಶಸ್ವಿಗೊಳಿಸಿದರು.