ಕನ್ನಡ ಭಾಷೆ ನಮ್ಮೆಲ್ಲರ ಉಸಿರಾಗಿರಲಿ: ದಮ್ಮೂರಮಠ

ಕನ್ನಡ ಭಾಷೆ ನಮ್ಮೆಲ್ಲರ ಉಸಿರಾಗಿರಲಿ: ದಮ್ಮೂರಮಠ  May the Kannada language be the breath of all of us: Dammooramath


ತಾಳಿಕೋಟಿ 28: ನಾಡಿನ ನೆಲ ಜಲ ಭಾಷೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಕನ್ನಡ ಪರ ಸಂಘಟನೆಗಳ ಕೊಡುಗೆ ಅಪಾರವಾಗಿದೆ ಎಂದು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಆರಿ​‍್ಬ.ದಮ್ಮೂರಮಠ ಹೇಳಿದರು.  

ಪಟ್ಟಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ತಾಳಿಕೋಟಿ ಸ್ಪೋರ್ಟ್ಸ ಮತ್ತು ರಿಕ್ರೇಶನ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಕನ್ನಡ ನಾಡು ನುಡಿ ಬಿಂಬಿಸುವ ನೃತ್ಯ ಸ್ಪರ್ಧೆ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದ ಭವಿಷ್ಯ ವಾಗಿರುವ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಿಸಲು ಕರ್ನಾಟಕ ರಕ್ಷಣಾ ವೇದಿಕೆ ಸ್ಥಳೀಯ ಘಟಕವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು. 

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಮಾತನಾಡಿ ಡಾ.ಬಾಬಾ ಸಾಹೇಬರು ಇಡೀ ವಿಶ್ವಕ್ಕೆ ಮಾದರಿ ಆಗುವ ಸಂವಿಧಾನವನ್ನು ನಮಗೆ ಕೊಟ್ಟು ಹೋಗಿದ್ದಾರೆ ಇದರ ರಚನೆಗಾಗಿ ಅವರು ಮಾಡಿದ ತ್ಯಾಗ ಪರಿಶ್ರಮವನ್ನು ನಾವು ಸದಾ ಸ್ಮರಿಸಬೇಕು. ಸಂವಿಧಾನದಿಂದಲೇ ದೇಶದ ಪ್ರಗತಿ ಮತ್ತು ಉನ್ನತಿ ಸಾಧ್ಯವಿದೆ ಇಂತಹ ಮಹತ್ವದ ದಿನದಂದು ಸಂಘಟನೆಯು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದ್ದಾಗಿದೆ ಸಂಘಟನೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು.  

ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ ಕಾರ್ಯಕ್ರಮ ಉದ್ಘಾಟಿಸಿ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ,ಇಂದಿನ ಸೋಲು ನಾಳಿನ ಗೆಲುವಿನ ಸೋಪಾನವಾಗಿದೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು. ಮಹೇಶ್ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಕರವೇ ತಾಲೂಕ ಘಟಕದ ಅಧ್ಯಕ್ಷ ರವೀಂದ್ರ ಕಟ್ಟಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ತೇಜಸ್ವಿನಿ ಡಿಸಲೆ, ಶಿಕ್ಷಕ ಸಂಜೀವ ಕುಮಾರ ಹಜೇರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಾಜೀದ ಫಾರೂಕ ತಾಳಿಕೋಟಿ ಹಾಗೂ ಪ್ರೀತಮಸಿಂಗ್ ರಾಜಪೂತ ಕ್ರೀಡಾಪಟುಗಳಿಗೆ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ವೇದಿಕೆ ಕಾರ್ಯಕ್ರಮ ನಂತರ ನಡೆದ ನೃತ್ಯ ಸ್ಪರ್ಧೆಯಲ್ಲಿ ಸ್ಥಳೀಯ ಬ್ರಿಲಿಯಂಟ್ ಪ್ರೌಢ ಶಾಲೆ ತಂಡ ಪ್ರಥಮ ರೂ.10,000 ನಗದು ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡರೆ ಎಸ್ ಕೆ ಬಾಲಕರ ಪ್ರೌಢಶಾಲೆ ತಂಡ ದ್ವಿತೀಯ ರೂ.7.500 ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ಹಾಗೂ ಎಂ ಜಿ ಎಂ ಕೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ತಂಡ ತೃತೀಯ ಸ್ಥಾನ,ರೂ.5000 ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿತು.  

ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಫಿಯೋನೆಕ್ಸ್‌ ಡೆವಲಪರ್ಸ್‌ ಮುಖ್ಯಸ್ಥ ಪರಶುರಾಮ ಕಟ್ಟಿಮನಿ, ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಅಮೀತಸಿಂಗ್ ಮನಗೂಳಿ, ಬಿಜೆಪಿ ಮುಖಂಡ ಮಂಜುನಾಥ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಸಂಗನಗೌಡ ಅಸ್ಕಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ಗುರುರಾಜ ಮಾನೆ, ಅಲ್ಲಮಪ್ರಭು ಬ್ಯಾಂಕ್ ನಿರ್ದೇಶಕ ಈಶ್ವರ ಹೂಗಾರ, ಭಾರತ ಮಂಟಪ ಮಾಲೀಕ ಸಾಹಿಲ್ ಮುರಾಳ ಹಾಗೂ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ನಿರ್ಣಾಯಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಇದ್ದರು.