ಶಿಕ್ಷಣ ಕ್ಷೇತ್ರದ ಸೇವೆ ಸ್ಮರಣೀಯ: ಪ್ರೊ. ಗುರುರಾಜ ಬಿ. ಕಲಕೋಟಿ ಅವರಿಗೆ ನುಡಿನಮನ

ಶಿಕ್ಷಣ ಕ್ಷೇತ್ರದ ಸೇವೆ ಸ್ಮರಣೀಯ: ಪ್ರೊ. ಗುರುರಾಜ ಬಿ. ಕಲಕೋಟಿ ಅವರಿಗೆ ನುಡಿನಮನ  Service to Education Sector Memorable: Prof. Gururaj B. Kudos to Kalakoti

ಹುಬ್ಬಳ್ಳಿ 31: ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಎನ್ಸಿಸಿ ಮೇಜರ್ ಪ್ರೊ. ಗುರುರಾಜ ಬಿ. ಕಲಕೋಟಿ ಅವರ ಸೇವೆಯನ್ನು ಸ್ಮರಿಸಿ ನುಡಿನಮನ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಾವೇರಿ ಜಿಲ್ಲೆಯ ನೆಗಳೂರು ಸಂಸ್ಥಾನ ಹಿರೇಮಠದ ಷಟ್ಸ್ಥಳ ಬ್ರಹ್ಮ ಗುರುಶಾಂತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ವ್ಯಕ್ತಿಗಳ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ಅವರ ಆದರ್ಶಗಳು ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.  

ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಪ್ರೊ. ಕಲಕೋಟಿ ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ ನಮನ ಸಲ್ಲಿಸಲಾಯಿತು. ಇದೇ ವೇಳೆ ಶ್ರೀಗಳ ಆಶೀರ್ವಾದ ಪಡೆಯಲಾಯಿತು.  

ಕಾರ್ಯಕ್ರಮದಲ್ಲಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷರು, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರು, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ಸುರೇಶ್ ಡಿ. ಹೊರಕೇರಿ, ಉಪನ್ಯಾಸಕ ವೀರೇಶ್ ಚಂದ್ರಕಾಂತ ಬಳಿಗಾರ್, ಡಾ. ಲಿಂಗರಾಜ ಡಿ. ಹೊರಕೇರಿ, ಡಾ. ಮಹೇಶ್ ಡಿ. ಹೊರಕೇರಿ, ಡಾ. ಲಿಂಗರಾಜ ಅಂಗಡಿ, ಸಿ.ಜಿ. ಧಾರವಾಡಶೆಟ್ಟರ, ಪ್ರೊ. ಕೆ.ಎಸ್‌. ಕೌಜಲಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.