ಯತ್ನಾಳರ ಉಚ್ಛಾಟನೆ ಆದೇಶ ಹಿಂಪಡೆಯದಿದ್ದರೆ ಏ. 13ರಂದು ಬೃಹತ್ ಪ್ರತಿಭಟನೆ

Massive protest on April 13 if Yatnal's eviction order is not withdrawn

ಯತ್ನಾಳರ ಉಚ್ಛಾಟನೆ ಆದೇಶ ಹಿಂಪಡೆಯದಿದ್ದರೆ ಏ. 13ರಂದು ಬೃಹತ್ ಪ್ರತಿಭಟನೆ  

ಬೆಳಗಾವಿ 27: ಏಪ್ರೀಲ್ 10ರೊಳಗೆ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಛಾಟನೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಏಪ್ರೀಲ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇರವಾಗಿ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.  

ಬಿಜೆಪಿ ಶಿಸ್ತುಪಾಲನಾ ಸಮಿತಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವ ಕ್ರಮ ಖಂಡಿಸಿ ಬೆಳಗಾವಿಯ ಗಾಂಧಿ ಭವನದಲ್ಲಿ ಇಂದು ಪಂಚಮಸಾಲಿ ಮುಖಂಡರು ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ ಬೆನ್ನಿಗೆ ಕೇವಲ ಪಂಚಮಸಾಲಿ ಅಷ್ಟೇ ಅಲ್ಲ, ಹಲವು ಸಮುದಾಯಗಳ ಜನರಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮ್ಮ ಸಮಾಜ ಬಿಟ್ಟು ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂಬುದು ನಿಮ್ಮ ಭ್ರಮೆ. ಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿತು. ಅದಕ್ಕಾಗಿ ನಮ್ಮ ಸಮಾಜ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿತ್ತು. ಆದರೆ ಈ ಸರ್ಕಾರ ನಮಗೆ ಮೀಸಲಾತಿ ನೀಡದೇ ಲಾಠಿ ಚಾರ್ಜ್‌ ಮಾಡಿಸಿತು. ಹೀಗಾಗಿ ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಆಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಕುತಂತ್ರದಿಂದ ಏಕಾಏಕಿ ಯತ್ನಾಳರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.  

  ಲಿಂಗಾಯತ ಸಮುದಾಯ ಕಡೆಗಣಿಸಿ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನಿಜಲಿಂಗಪ್ಪ, ವಿರೇಂದ್ರ ಪಾಟೀಲ ಅವರ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಜನತಾದಳ ಇಬ್ಭಾಗ ಆದಾಗ ನಮ್ಮ ಸಮಾಜ ಯಡಿಯೂರ​‍್ಪರ ಬೆನ್ನಿಗೆ ನಿಂತಿತು. ಆದರೆ ಇದೇ ಯಡಿಯೂರ​‍್ಪ ನಮ್ಮ ಸಮಾಜದ ಮೀಸಲಾತಿ ಹೋರಾಟ ಹತ್ತಿಕ್ಕಿದ್ದರು. ಈಗ ಮೀಸಲಾತಿ ಹೋರಾಟದ ರಾಷ್ಟ್ರೀಯ ಅಧ್ಯಕ್ಷ, ಹಿಂದೂ ಫೈರ್ ಬ್ರ್ಯಂಡ್ ಯತ್ನಾಳರನ್ನು ಉಚ್ಛಾಟಿಸಿದ್ದಾರೆ. ಯಡಿಯೂರ​‍್ಪ, ವಿಜಯೇಂದ್ರ ಕುತಂತ್ರದಿಂದ ಉಚ್ಛಾಟನೆ ಮಾಡಲಾಗಿದೆ. ಇದನ್ನು ಇಡೀ ಪಂಚಮಸಾಲಿ ಸಮುದಾಯ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳ ಲಿಂಗಾಯತ ನಾಯಕರಾಗಿ ಹೊಮ್ಮುತ್ತಿದ್ದರು. ಇಂಥ ಸಂದರ್ಭದಲ್ಲಿ ಕುತಂತ್ರ ಮಾಡಿ ಅವರನ್ನು ಉಚ್ಛಾಟಿಸಿದ್ದಾರೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದರು.  

ಯತ್ನಾಳಗೆ ಹಲವು ರಾಜಕೀಯ ನಾಯಕರು ನೈತಿಕ ಬೆಂಬಲ ಸೂಚಿಸಿದ್ದಾರೆ. ನಮ್ಮ ಸಮುದಾಯದ ಮತ ಪಡೆದ ಇನ್ನುಳಿದವರೂ ನೈತಿಕ ಬೆಂಬಲ ಸೂಚಿಸಬೇಕು.  

ಬಿಜೆಪಿಯಲ್ಲಿರುವ ಪಂಚಮಸಾಲಿ ಸಮುದಾಯದ ಶಾಸಕರು, ಸಂಸದರು ನಿಮ್ಮ ಪಕ್ಷದ ನಾಯಕರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ಯತ್ನಾಳ ಅಧಿಕಾರ ಇದ್ದಾಗ, ಇಲ್ಲದಾಗಲೂ ಮೀಸಲಾತಿಗೆ ಹೋರಾಟ ಮಾಡಿದ್ದರು. ಹೀಗಾಗಿ ನಮ್ಮ ಸಮಾಜ ಕಷ್ಟದಲ್ಲಿರುವ ಯತ್ನಾಳ ಬೆನ್ನಿಗೆ ನಿಲ್ಲುತ್ತದೆ. ಬಿಜೆಪಿ ವರಿಷ್ಠರು ಮಾತುಕತೆಗೆ ಕರೆದರೆ ನಾನು ಹೋಗಲು ಸಿದ್ಧ ಎಂದು ಸ್ವಾಮೀಜಿ ತಿಳಿಸಿದರು.  

ಪಂಚಮಸಾಲಿ ಮೀಸಲಾತಿ ಹೋರಾಟ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಉತ್ತರಕರ್ನಾಟಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಯತ್ನಾಳ ವಿರುದ್ಧ ಕ್ರಮವಾಗಿದೆ. ನಮ್ಮ ಸಮಾಜದ ಮೀಸಲಾತಿ ಹೋರಾಟ ಹತ್ತಿಕ್ಕಲು, ಉತ್ತರಕರ್ನಾಟಕದ ನಾಯಕತ್ವ ಕುಗ್ಗಿಸಲು ಈ ರೀತಿ ಮಾಡಿದ್ದಾರೆ. ನಮ್ಮ ಹೋರಾಟ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ವಿರುದ್ಧ ಅಲ್ಲ. ಯಡಿಯೂರ​‍್ಪ ಕುತಂತ್ರವೇ ಯತ್ನಾಳ ಉಚ್ಛಾಟನೆಗೆ ಕಾರಣವಾಗಿದೆ. ಹಾಗಾಗಿ, ಆ ಕುತಂತ್ರಿಗಳ ವಿರುದ್ಧದ ಹೋರಾಟ ನಮ್ಮದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.  

ಮೀಸಲಾತಿ ಕೊಡದಿದ್ದಕ್ಕೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಕ್ಕೆ ಕುಸಿಯಿತು. ಇನ್ನು ಪಂಚಮಸಾಲಿ ಸಮಾಜದ ನಾಯಕನನ್ನು ಉಚ್ಚಾಟನೆ ಮಾಡಿರುವ ಬಿಜೆಪಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಏಪ್ರಿಲ್ 10 ರೊಳಗೆ ಉಚ್ಚಾಟನೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ವೇಳೆ ಪಂಚಮಸಾಲಿ ಬಂಧುಗಳು, ಹಿಂದೂಪರ ಕಾರ್ಯಕರ್ತರು, ಯತ್ನಾಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸ್ವಾಮೀಜಿ ಕೋರಿದರು.  

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮುಖಂಡರಾದ ಶಶಿಕಾಂತ ಪಡಸಲಗಿ, ರಮೇಶಗೌಡ ಪಾಟೀಲ, ಆರಿ​‍್ಸ.ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕಿ ಸೇರಿ ಮತ್ತಿತರರು ಇದ್ದರು.