ಲೋಕದರ್ಶನ ವರದಿ
ಕೇಂದ್ರದ ಬೆಲೆ ಏರಿಕೆ ನೀತಿ ವಿರುದ್ದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ : ಸತೀಶ
ಬೆಳಗಾವಿ 22: ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಸಂವಿಧಾನ ಬಚಾವೋ ಕಾರ‌್ಯದ ಹಿನ್ನೆಲೆಯಲ್ಲಿ ಎಐಸಿಸಿ ಹಾಗೂ ಕೆಪಿಸಿಸಿ ಆದೇಶದ ಮೇರೆಗೆ ಬೆಂಗಳೂರಿನ ಮಾದರಿ ಇದೇ 28, 29ರಂದು ಕಾಂಗ್ರೆಸ್ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ರಾ್ಯಲಿ ಹಮ್ಮಿಕೊಳ್ಳಲಾಗುವ ಬಗ್ಗೆ ಸಭೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇಂದಿಲ್ಲಿ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ವತಿಯಿಂದ ಏ. 27, 28ರಂದು ಬೃಹತ್ ಪ್ರತಿಭಟನೆಯನ್ನು ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ, ಬೆಳಗಾವಿಯಲ್ಲೂ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಸುಮಾರು 30 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಕಳೆದ 11 ವರ್ಷದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಭಾರೀ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆ ಮಾಡಿರುವ ಈ ಕುರಿತು ನಮ್ಮ ಬಳಿ ದಾಖಲೆ ಇವೆ. ಈಗ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಬಿಜೆಪಿಯ ಜನಾಕ್ರೋಶ ಪ್ರತಿಭಟನೆ ಮಾಡಿದೆ. ಜನರಿಗೆ ನಿಜಾಂಶ ತಿಳಿಸುವ ಉದ್ದೇಶದಿಂದ ಕಾಂಗ್ರೆಸ್‌ನಿಂದ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಒಂದೇ ಕೆಲಸವಾಗಿದೆ. ತಮ್ಮ ತಪ್ಪನ್ನು ಮರೆಮಾಚಲು ಬೆಲೆ ಏರಿಕೆ ಹಾಗೂ ಸಂವಿಧಾನದ ಮೇಲೆ ಅಪಾದನೆ ನಿರಂತರ ನಡೆಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಬೆಳಗಾವಿ, ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿಭಟನೆಗೆ ಭಾಗವಹಿಸಲು ಈಗಾಗಲೇ ಕರೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, ಕೇಂದ್ರ ಸರ್ಕಾರ ವಿರುದ್ಧ ಬೆಲೆ ಏರಿಕೆ, ಸಂವಿಧಾನ ಬಚ್ಚಾವೋ ಆಂದೋಲನ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್, ತೈಲ, ದಿನಸಿ, ಸಿಮೆಂಟ್, ಗೊಬ್ಬರ, ಓಷದಿ ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ಬೆಲೆಗಳನ್ನು ಏರಿಕೆ ಮಾಡಿದೆ. ಈ ಬೆಲೆ ಏರಿಕೆ ಸಮಸ್ಯೆಗಳನ್ನು ನಿಗಿಸಲು ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜನ್ಮ ತಾಳಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ನೀತಿಯಿಂದ ಎಲ್ಲಾ ಬೆಲೆಗಳು ಏರಿಕೆ ಕಂಡಿವೆ. ಇದನ್ನು ಮರೆಮಾಚಲು ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಬಿಜೆಪಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಬಿಜೆಪಿಯ ಸುಳ್ಳಿನ ಸತ್ಯಾಂಶವನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಜು ಸೇಠ, ಬಾಬಾಸಾಹೇಬ ಪಾಟೀಲ, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ ದತ್ತಾ, ಪಳನಿಯಪ್ಪನ್ನ, ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಸುನೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.