ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಸಮಾವೇಶ: ಶಾಸಕ ಯತ್ನಾಳ್ ಸೇರಿದಂತೆ ಹಲವು ಮುಖಂಡರು ಭಾಗಿ

Mass rally demanding 2A reservation for Panchmasali Society

ಬೆಳಗಾವಿ 10: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಸುವರ್ಣ ವಿಧಾನಸೌಧದ ಬಳಿ ಬೃಹತ್ ಸಮಾವೇಶದ ಸ್ಟಳಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗಮಿಸುತ್ತಿದ್ದಂತೆ ‘ಹುಲಿ ಬಂತು ಹುಲಿ...’ ಎಂದು ಜ‌ನ ಘೋಷಣೆ ಮೊಳಗಿಸಿದರು. 

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರಾದ ರಾಜು ಕಾಗೆ, ಅರವಿಂದ ಬೆಲ್ಲದ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಪಂಚಸೇನೆ ರಾಷ್ಟ್ರೀಯ ಅಧ್ಯಕ್ಷ ನಾಗರಾಜ‌ ಹುಲಿ, ಮಾಜಿ‌ ಸಚಿವ ಎ.ಬಿ.ಪಾಟೀಲ, ಸಿ.ಸಿ.ಪಾಟೀಲ, ರೋಹಿಣಿ ಪಾಟೀಲ, ಡಾ.ಮಹಾಂತೇಶ ಕಡಾಡಿ, ಮಾಜಿ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕಿ ಶಶಿಕಲಾ ಜೊಲ್ಲೆ ಮುಂತಾದವರ ಮುಂದಾಳತ್ವದಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು.

ರಾಜ್ಯದ ಬೇರೆ ಬೇರೆ ಕಡೆಯಿಂದ ಅಪಾರ ಸಂಖ್ಯೆಯ ಹೋರಾಟಗಾರರು ಸೇರಿದರು.

ಜೈ ಲಿಂಗಾಯತ, ಜೈ ಪಂಚಮಸಾಲಿ, ಜೈ ಬಸವೇಶ ಎಂಬ ಘೋಷಣೆಗಳು ನಿರಂತರ ಮೊಳಗಿದವು. ಕೇಸರಿ‌ ಧ್ವಜ ಹಿಡಿದು, ಕೇಸರಿ ಶಲ್ಯ, ಹಸಿರು ಟವಲುಗಳನ್ನು ಹಾರಾಡಿಸಿ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ವಿರುದ್ಧ‌ ಆಕ್ರೋಶ ಹೊರಹಾಕಿದರು.

ಬೈಲಹೊಂಗಲ, ಹಿರೇಬಾಗೇವಾಡಿ, ಬಸ್ತವಾಡ, ಹಲಗಾ ಮುಂತಾದ ಕಡೆಗಳಲ್ಲಿ ಧಾವಿಸಿ ಬಂದ ಜನರನ್ನು ಪೊಲೀಸರು ಅಲ್ಲಲ್ಲಿ ತಡೆದರು. ಇದರಿಂದ ವೇದಿಕೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ವೇದಿಕೆ ಮೇಲಿದ್ದ ಸ್ವಾಮೀಜಿ‌ ಗುಡುಗಿದರು. ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡದೇ ಇದ್ದರೆ ಸುವರ್ಣ ಸೌಧಕ್ಕೆ‌ ನುಗ್ಗುತ್ತೇವೆ ಎಂದು ಎಚ್ಚರಿಕೆ‌ ನೀಡಿದರು. ನಂತರ ಹೋರಾಟಗಾರರನ್ನು ಬಿಡುಗಡೆ ಮಾಡಲಾಯಿತು.