ಕ್ರೀಡೆಯನ್ನು ದೈನಂದಿನ ಭಾಗವಾಗಿಸಿಕೊಳ್ಳುವಂತೆ -ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ
ವಿಜಯಪುರ 17: ಮನುಷ್ಯನ ಜೀವನದಲ್ಲಿ ಸಂತೋಷ, ಉಲ್ಲಸಿತ ಹಾಗೂ ಸದೃಢ ಮನಸ್ಸು ಹೊಂದಲು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳು ಅತ್ಯವಶ್ಯಕ. ಆರೋಗ್ಯ ದೃಷ್ಟಿಯಿಂದ, ಮನಸ್ಸು ಪ್ರಪುಲ್ಲತೆಯಿಂದ ಇರಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದಷ್ಟೇ ಅಲ್ಲದೇ ನಮ್ಮ ಬದುಕಿನ ದೈನಂದಿನ ಭಾಗವಾಗಿಸಿಕೊಳ್ಳಬೇಕು. ಕ್ರೀಡೆಗಳು ದೇಹ ಮನಸ್ಸುಗಳ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯ ಐದು ತಾಲೂಕಿನಲ್ಲಿ ವಿಕಲಚೇತನರ ಕ್ರೀಡಾಕೂಟವನ್ನು ಬಹು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ತಾಲೂಕ ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ಅತ್ಯಂತ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿ ಇದೀಗ ಜಿಲ್ಲಾ ಮಟ್ಟದಲ್ಲಿ ನಡೆಯುವ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಕ್ರೀಡಾ ಮನೋಭಾವನೆ ಮೆರೆಯಬೇಕು. ಸೋಲು-ಗೆಲವು ಮುಖ್ಯವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಿ ಎಂದು ಅವರು ಹೇಳಿದರು. ಕ್ರೀಡೆಗಳಿಂದ ಜೀವನದಲ್ಲಿ ಚೈತನ್ಯ ಹಾಗೂ ಲವಲವಿಕೆಯಿಂದಿರಲು ಸಹಾಯಕವಾಗುತ್ತವೆ. ಬೌಧ್ಧಿಕ ಮತ್ತು ಮಾನಸಿಕ ಸದೃಢತೆಗೆ ಈ ತರಹದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಚೈತನ್ಯಮಯ ಹಾಗೂ ಚಟುವಟಿಕೆಯಿಂದ ಕೂಡಿದ ಜೀವನ ನಡೆಸಿ ಎಂದು ಅವರು ಹೇಳಿದರು. ವಿಕಲಚೇತನರಿಗಾಗಿಯೇ ಅನೇಕ ಯೋಜನೆಗಳನ್ನು ಸರ್ಕಾರ ಅನುಷ್ಟಾನಗೊಳಿಸುತ್ತಿದ್ದು, ಸಮರ್ಕವಾಗಿ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಹೇಳಿದರು.
ಡಾ.ಜಾವೀದ ಎಂ. ಜಮಾದಾರ ಮಾತನಾಡಿ, ಕ್ರೀಡೆಯ ಕೌಶಲ್ಯಗಳನ್ನು ರೂಢಿಸಿಕೊಂಡು ಸಾಧನೆ ಮಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವಂತೆಯೂ, ಸಾಧಕರನ್ನು ಪ್ರೇರಣೆಯಾಗಿಟ್ಟುಕೊಂಡು ಛಲದಿಂದ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಸವಿತಾ ಕಾಳೆ, ವಾರ್ತಾಧಿಕಾರಿ ಅಮರೇಶ ದೊಡಮನಿ,ಅರವಿಂದ ಕೊಪ್ಪ ಎಸ್.ಜಿ ಲೋಣಿ ನಿಮೀಷ ಆಚಾರ್ಯ, ವಿಜಯಕುಮಾರ ಹೊಸಮನಿ ನಿವೃತ್ತ ಶಿಕ್ಷಕ ಎಚ್.ಮಮದಾಪೂರ ಇತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ 100 ಮೀ.ಓಟ, ಗುಂಡು ಎಸೆತ, ಬಕೇಟನಲ್ಲಿ ರಿಂಗ್ ಹಾಕುವುದು, ಥ್ರೋಬಾಲ್ ಎಸೆತ, 50 ಮೀ. ಅಂಧರ ಕೆನ ನಡಿಗೆ, ಮ್ಯೂಜಿಕಲ್ ಚೇರ್, ಉದ್ದಜಿಗಿತ ವಿವಿಧ ಕ್ರೀಡೆಗಳು ಜರುಗಿದವು.