ಹಾರೂಗೇರಿಯಲ್ಲಿ ಇಂದಿನಿಂದ ಏಳು ದಿನಗಳವರೆಗೆ ಮಹಾಶಿವರಾತ್ರಿ ಸಪ್ತಾಹ ಪ್ರಾರಂಭ ಮಹಾದೇವ ಅರಕೇರಿ
ಹಾರೂಗೇರಿ : 1926ರಲ್ಲಿ ಚನ್ನವೃಷಭೇಂದ್ರ ದೇವರಕೊಂಡಜ್ಜನವರು ತಮ್ಮ ತಪಸ್ಸ್ಯೆಕ್ತಿಯನ್ನೆಲ್ಲಾ ಅಗ್ನಿಕುಂಡಕ್ಕೆ ಧಾರೆಯೆರೆದು ಉರಿಸಿದ ಅಗ್ನಿಕುಂಡ 99 ವರ್ಷಗಳಾದರೂ ಇನ್ನೂ ನಿರಂತರವಾಗಿ ಉರಿಯುತ್ತಿದೆ.
ನೌಕರಿ ಸಿಗಲೆಂದು, ಉದ್ಯೋಗದಲ್ಲಿ ಯಶಸ್ಸು, ಹೊಲಗದ್ದೆಗಳಲ್ಲಿ ಸಮೃದ್ಧ ಬೆಳೆ ಬರಲೆಂದು, ಶೈಕ್ಷಣಿಕವಾಗಿ ಪ್ರಗತಿಯಾಗಲೆಂದು, ಮನೆಯಲ್ಲಿ ನೆಮ್ಮದಿ, ಸುಖ, ಸಂತೋಷ ನೆಲೆಸಲೆಂದು, ಅನೇಕ ಹೆಣ್ಣು ಮಕ್ಕಳು ತಮ್ಮ ಬಂಜೆತನ ನಿವಾರಣೆಯಾಗಲೆಂದು, ಮಕ್ಕಳು ರಾತ್ರಿ ಹೊತ್ತು ಅಂಜದಿರಲು, ಮಕ್ಕಳಿಗೆ ದುಷ್ಟಶಕ್ತಿಗಳ ಕಾಟ ತಪ್ಪಿಸಲು, ಮಾಟಮಂತ್ರಗಳಿಂದ ಮುಕ್ತಿ ಹೊಂದಲು, ಮಕ್ಕಳಾಗಲೆಂದು, ಮಕ್ಕಳು ಶಕ್ತಿವಂತರಾಗಿ ಹಾಗೂ ಆರೋಗ್ಯವಾಗಿ ಬೆಳೆಯಲೆಂದು ಹೀಗೆ ತಾವು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲೆಂದು ಈ ದೇವರಕೊಂಡಜ್ಜನ ಅಗ್ನಿಕುಂಡಕ್ಕೆ ಭಕ್ತಿಯಿಂದ ಬೇಡಿಕೊಂಡು ಪ್ರದಕ್ಷಿಣೆ ಹಾಕಿದರೆ ನೇರವೇರುವುದೆಂಬ ಬಲವಾದ ನಂಬಿಕೆಯಿದೆ. ಅದರಂತೆ ಯಶಸ್ಸು ಕಂಡವರಿದ್ದಾರೆ.
ಅಗ್ನಿಕುಂಡಕ್ಕೆ ಜ್ಞಾನಯಜ್ಞ, ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯನ್ನೆಲ್ಲಾ ಧಾರೆಯೆರೆಯುವುದರೊಂದಿಗೆ 1926ರಲ್ಲಿಯೇ ಮಹಾಶಿವರಾತ್ರಿ ಸಪ್ತಾಹವನ್ನು ದೇವರಕೊಂಡಜ್ಜನವರು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಏಳು ದಿನಗಳವರೆಗೆ ಹಗಲು-ರಾತ್ರಿ ನಿರಂತರ ಓಂ ನಮಃ ಶಿವಾಯ ಮಂತ್ರದ ಘೋಷಣೆ ಮೊಳಗುತ್ತಿದೆ.
18-19ನೇ ಶತಮಾನದ ಸಿದ್ಧಾರೂಡರು, ಗರಗದ ಮಡಿವಾಳೇಶ್ವರರು, ನಾಗಲಿಂಗ ಅಜ್ಜನವರು, ಬಂತನಾಳ ಶಿವಯೋಗಿಗಳು, ಅಥಣಿಯ ಶಿವಯೋಗಿಗಳು, ಕಲಬುರ್ಗಿಯ ಶರಣಬಸವರು, ಬಬಲಾದಿಯ ಸದಾಶಿವಪ್ಪನವರು, ಸೊಗಲದ ಶಿವಯೋಗಿಗಳು, ಶಿಶುನಾಳ ಶರೀಫರು, ಸೇರಿದಂತೆ ಅನೇಕರ ಸಮಕಾಲಿನವರಾದ ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಪವಾಡ ಪುರುಷರು. 1906ರಲ್ಲಿ ಲೋಕ ಸಂಚಾರಗೈಯುತ್ತ ಹಾರೂಗೇರಿಗೆ ಪಾದಾರೆ್ಣ ಮಾಡಿದ ಶ್ರೀಗಳು ಡುರ್ ಅಲಕ್ ನಿರಂಜನ್ ಎಂಬ ಮಂತ್ರಘೋಷದಿಂದ ಹಾರೂಗೇರಿಯನ್ನು ಉದ್ಧಾರ ಮಾಡಿದ ಪುಣ್ಯಪುರುಷರು.
ಹಾರೂಗೇರಿಯನ್ನು ಹರನಗಿರಿ ಎಂದು ಕರೆದ ಶ್ರೀ ಚನ್ನವೃಷಭೇಂದ್ರರು ಹಾಳು ಮಣ್ಣಿನ ಕೊಂಪೆಯಂತಿದ್ದ ಹಾರೂಗೇರಿಯಲ್ಲಿ ಸರಸ್ವತಿ ನೆಲೆಸುತ್ತಾಳೆ, ಆರ್ಥಿಕ, ವಾಣಿಜ್ಯ, ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಮುಂಬಯಿ ಮರಿಯಾಗುತ್ತದೆಂದು ಅಂದು ಭವಿಷ್ಯ ವಾಣಿ ನುಡಿದಿದ್ದ ದೇವರಕೊಂಡಜ್ಜನವರು ಇಂದು ಹಾರೂಗೇರಿ ತಾಲೂಕು ಮಟ್ಟಕ್ಕೆ ಬೆಳೆದು ನಿಂತಿದೆ. ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕ, ವಾಣಿಜ್ಯ, ವ್ಯಾಪಾರ ಕೇಂದ್ರವಾಗಿ ಬೆಳೆದು ನಿಂತಿದೆ.
ಜಾತಿ, ಮತ ಭೇದವಿಲ್ಲದೇ ಜಾತ್ಯಾತೀತ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದ ಚನ್ನವೃಷಭೇಂದ್ರ ಲೀಲಾಮಠವು ಬೈಲಹೊಂಗಲ ತಾಲೂಕಿನ ಇಂಚಲದ ಶ್ರೀ ಸಿದ್ಧಿಸಂಸ್ಥಾನ ಮಠದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಶ್ರೀಮಠವು ಸದ್ಭಕ್ತರ ನೆರವಿನಿಂದ ಆಧುನೀಕರಣಗೊಂಡು ದೇಶದ ನಾನಾ ಭಾಗದ ಸಾಧು ಸತ್ಪುರುಷರು ಹಾಗೂ ಲಕ್ಷ್ಯಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ಫೆ.21 ರಂದು ಶುಕ್ರವಾರದಿಂದ ಫೆ.27ರವರೆಗೆ ನಡೆಯಲಿರುವ 99ನೇ ಮಹಾಶಿವರಾತ್ರಿ ಸಪ್ತಾಹಕ್ಕೆ ಶುಕ್ರವಾರ ಬೆಳಿಗ್ಗೆ ಮೂರ್ತಿಗಳಿಗೆ ಮಹಾಭಿಷೇಕ, ಮಹಾಪೂಜೆ, ಶ್ರೀಗಳ ಪಾದಪೂಜೆ, ಗುರುಸ್ತೋತ್ರ ಪೂಜಾದಿಗಳ ನಂತರ ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ. ಏಳು ದಿನಗಳವರೆಗೆ ನಿರಂತರ ಓಂ ನಮಃ ಶಿವಾಯ ಮಹಾಮಂತ್ರದ ಪಠಣ, ಮಹಾಪೂಜೆ, ಅನ್ನಸಂತರೆ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಸದ್ಭಕ್ತ ಮಂಡಳಿ ತಿಳಿಸಿದೆ.
ಚನ್ನವೃಷಭೇಂದ್ರ ಲೀಲಾಮಠದ ಮಣ್ಣಿನಲ್ಲಿ ದೈವಿಕ ಶಕ್ತಿ ಅಡಗಿದೆ. ಇಲ್ಲಿ ಹಲವಾರು ಪವಾಡ, ಲೀಲೆಗಳು ನಡೆದಿದ್ದು, ಭಕ್ತಿಯಿಂದ ಬೇಡಿಕೊಂಡ ಲಕ್ಷ್ಯಾಂತರ ಭಕ್ತರ ಬೇಡಿಕೆಗಳನ್ನು ಈಡೇರಿಸಿದೆ.