ಮೆಣಸಿನಕಾಯಿ ಬೆಳೆಗೆ ಎಂ.ಎಸ್.ಪಿ. ಘೋಷಿಸುವಂತೆ ಆಗ್ರಹಿಸಿ ಕಂಪ್ಲಿಯಲ್ಲಿ ರೈತ ಸಂಘದಿಂದ ತಹಸಿಲ್ದಾರರಿಗೆ ಮನವಿ ಸಲ್ಲಿಕೆ
ಕಂಪ್ಲಿ 25: ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಗೆ ಎಂ.ಎಸ್.ಪಿ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಸಿಲ್ದಾರ್ ಎಂ.ಆರ್.ಷಣ್ಮುಖ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲು ದಿನೇ ದಿನೇ ಖರ್ಚು ಅಧಿಕವಾಗುತ್ತಿರುವುದು ಒಂದೆಡೆಯಾದರೆ, ಮೆಣಿಸಿನಕಾಯಿ ಬೆಳೆಗೆ ಬೆಲೆ ದಿನೇ ದಿನೇ ಕುಸಿಯುತ್ತಿದೆ. ರೈತರು ಮೆಣಸಿನಕಾಯಿ ಬೆಳೆಯುವಾದ ಹಲವಾರು ರೋಗದ ಸಮಸ್ಯೆ, ಕೂಲಿ ಕಾರ್ಮಿಕರ ಸಮಸ್ಯೆ ವಿಶೇಷವಾಗಿ ಮಾರುಕಟ್ಟೆ ಸಮಸ್ಯೆ, ಶೀತಲ ಗೋದಾಮುಗಳ ಸಮಸ್ಯೆಗಳ ನಡುವೆ ದಲ್ಲಾಲಿಗಳ ಮೋಸದ ವಂಚನೆಯ ಸಮಸ್ಯೆಗಳ ಅಧಿಕವಾಗುತ್ತಿವೆ.
ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯುವ ಮೆಣಸಿನಕಾಯಿ ಬೆಳೆಗೆ ಈ ಹಿಂದೆ ಬಹು ಬೇಡಿಕೆ ಇತ್ತು. ಇತ್ತೀಚೆಗೆ ಬೇರೆ ರಾಜ್ಯದ ಮೆಣಸಿನಕಾಯಿ ನಮ್ಮ ರಾಜ್ಯಕ್ಕೆ ಬರುತ್ತಿರುವುದರಿಂದ ಬೆಲೆಯಲ್ಲಿ ಕುಸಿತವಾಗುತ್ತಿದೆ. ರೈತರು ಬೆಳೆಯನ್ನು ಬೆಳೆಯಲು ಖಾತ್ರಿ ಇಲ್ಲದಂತಾಗಿದೆ.ಇದು ಕೇವಲ ಬಳ್ಳಾರಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ,ರಾಜ್ಯಾದ್ಯಂತ ಮೆಣಸಿನಕಾಯಿ ಬೆಳೆಯುವ ರೈತರು ಅನುಭವಿಸುವ ಸಮಸ್ಯೆಗಳಾಗಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕೂಡಲೇ ಮೆಣಸಿನಕಾಯಿ ಬೆಳೆಗೆ ಎಂ.ಎಸ್.ಪಿ. 35 ಸಾವಿರ ರೂಗಳನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.ಒಂದು ವೇಳೆ ಎಂ.ಎಸ್.ಪಿ. ವಿಚಾರವು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದರೆ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮೆಣಸಿನಕಾಯಿ ಬೆಳೆಗೆ ಎಂ.ಎಸ್.ಪಿ. ಘೋಷಣೆ ಮಾಡುವಂತೆ ಒತ್ತಾಯ ಮಾಡಬೇಕೆಂದು ಆಗ್ರಹಿಸಿದ ಅವರು ಕೂಡಲೇ ಮೆಣಸಿನಕಾಯಿ ಬೆಳೆಗೆ ಎಂ.ಎಸ್.ಪಿ. ಘೋಷಣೆ ಮಾಡದಿದ್ದರೆ, ರಾಜ್ಯ ರೈತ ಸಂಘದಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಗಳನ್ನು ಮಾಡಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ಜವುಕು ಭರಮರೆಡ್ಡಿ,ಕೊಟ್ಟೂರು ರಮೇಶ್, ಡಿ.ಮುರಾರಿ, ತಿಮ್ಮಪ್ಪ ನಾಯಕ, ಗೊರ್ತಿ ಶ್ರೀನಿವಾಸಲು ಸೇರಿದಂತೆ ಇತರರು ಇದ್ದರು.