ನುಡಿದಂತೆ ನಡೆದ ಶಾಸಕ ರಾಜು ಕಾಗೆ ನ್ಯಾಯಾಲಯ ಕಟ್ಟಡದ ಸ್ಥಳಕ್ಕಾಗಿ ಅಧಿವೇಶನದಲ್ಲಿ ಧ್ವನಿ ನ್ಯಾಯವಾದಿಗಳಿಂದ ಅಭಿನಂದನೆ
ಕಾಗವಾಡ 11: ಪಟ್ಟಣದಲ್ಲಿರುವ ನ್ಯಾಯಾಲಯ ಕಟ್ಟಡಕ್ಕೆ ಸ್ಥಳ ನೀಡುವ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಕೇಳಿ, ಕೂಡಲೇ ನ್ಯಾಯಾಲಕ ಕಟ್ಟಡಕ್ಕೆ ಸ್ಥಳ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿರುವ ಕಾಗವಾಡ ಶಾಸಕ ರಾಜು ಕಾಗೆ ನುಡಿದಂತೆ ನಡೆದಿದ್ದು, ಕಾಗವಾಡ ನ್ಯಾಯವಾದಿಗಳು ಅವರನ್ನು ಅಭಿನಂದಿಸಿದ್ದಾರೆ.
ತಾಲೂಕಾಗಿ ದಶಕಗಳೇ ಕಳೆದಿವೆ. ಜೊತೆಗೆ ಇಲ್ಲಿ ಕಳೆದ ಮೂರಾ್ನಲ್ಕು ವರ್ಷಗಳ ಹಿಂದೆ ನ್ಯಾಯಾಲಯ ಕಾರ್ಯಾರಂಭ ಮಾಡಿದ್ದು, ಅದಕ್ಕೆ ಸ್ವಂತ ಕಟ್ಟಡ ಇಲ್ಲದೇ ಎಪಿಎಂಸಿಯ ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ನ್ಯಾಯವಾದಿಗಳು ಮತ್ತು ಕಕ್ಷಿದಾರರು ಪರದಾಡುವಂತ ಸ್ಥಿತಿ ಇದ್ದು, ಈ ಕುರಿತು ನ್ಯಾಯಾಲಯ ಕಟ್ಟಡಕ್ಕೆ ಸ್ಥಳ ನೀಡುವಂತೆ ಆಗ್ರಹಿಸಿ, ಕಾಗವಾಡ ನ್ಯಾಯವಾದಿಗಳ ಸಂಘದ ವತಿಯಿಂದ ಕಳೆದ ತಿಂಗಳು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಆಗ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಅಥಣಿ ಶಾಸಕರು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನ್ಯಾಯವಾದಿಗಳ ಧರಣಿ ನಿರತ ಸ್ಥಳಕ್ಕೆ ಭೇಟ್ಟಿ ನೀಡಿ, ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿ, ಕೊಟ್ಟು, ತಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಬಳಿಗೆ ನ್ಯಾಯವಾದಿಗಳು ತಮ್ಮ ಧರಣಿಯನ್ನು ಹಿಂದಕ್ಕೆ ಪಡೆದುಕೊಂಡಿದ್ದರು.
ಈಗ ಅಧಿವೇಶನದಲ್ಲಿ ಶಾಸಕ ರಾಜು ಕಾಗೆ ಮತ್ತು ಲಕ್ಷ್ಮಣ ಸವದಿ ತಮ್ಮ ಪರ ಧ್ವನಿಯೆತ್ತಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ತಾಲೂಕಿನ ನ್ಯಾಯವಾದಿಗಳ ಹೋರಾಟಕ್ಕೆ ಬಲ ದೊರಕಿದ್ದು, ಅವರ ಬೇಡಿಕೆಗೆ ಸರ್ಕಾರ ಯೋಗ್ಯ ಕ್ರಮ ಕೈಗೊಳ್ಳುವ ಭರವಸೆ ದೊರಕಿದೆ. ಇದರಿಂದ ತಾಲೂಕಾ ನ್ಯಾಯಾವಾದಿಗಳು ಸಂತಸ ವ್ಯಕ್ತ ಪಡಿಸಿ, ಉಭಯ ಶಾಸಕರಿಗೆ ಅಭಿನಂದನೆ ತಿಳಿಸಿದ್ದಾರೆ.
ಕಾಗವಾಡ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಎ. ಮಾನೆ ಮಾತನಾಡಿ, ಕೊಟ್ಟ ಮಾತಿನಂತೆ ಶಾಸಕ ರಾಜು ಕಾಗೆ ಅವರು ಸೋಮವಾರ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚಿಸಿ, ಆದಷ್ಟು ಬೇಗ ನ್ಯಾಯಾಲಯದ ಸ್ಥಳ ಮಂಜೂರು ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸಚಿವರೂ ಕೂಡಾ ನ್ಯಾಯಾಲಯಕ್ಕೆ ಸ್ವಂತ ಜಾಗ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿರುವುದು ನಮಗೆ ಸಂತಸ ತಂದಿದೆ. ಅದಕ್ಕಾಗಿ ಕೊಟ್ಟ ಮಾತಿನಂತೆ ನಡೆದ ಶಾಸಕ ರಾಜು ಕಾಗೆ ಹಾಗೂ ಲಕ್ಷ್ಮಣ ಸವದಿ ಅವರಿಗೆ ಕಾಗವಾಡ ನ್ಯಾಯವಾದಿಗಳ ಸಂಘದ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತೆವೆ. ಇದೇ ರೀತಿಯ ನಮಗೆ ಆದಷ್ಟು ಬೇಗ ಜಾಗ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಗಳಾದ ಪಿ.ಬಿ. ದೇಶಿಂಗೆ, ಎಂ.ಕೆ. ಕುಂಬಾರ, ಎಸ್.ಆರ್. ನಿಂಬಾಳಕರ, ಆರ್.ಎಂ. ಕಟಗೇರಿ, ಎ.ಎಸ್. ಕಮತೆ, ಎಸ್. ಕಾಳೆ, ವ್ಹಿ.ಕೆ. ಪಾಟೀಲ ಸೇರಿದಂತೆ ನ್ಯಾಯವಾದಿಗಳ ಸಂಘದ ಸದಸ್ಯರು ಉಪಸ್ಥಿತರಿದ್ದರು.