ಸಮಚಿತ್ತತೆಯಿಂದ ಬದುಕುವುದು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ: ವಾರದ

ಸಮಚಿತ್ತತೆಯಿಂದ ಬದುಕುವುದು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ: ವಾರದ  Living with equanimity is essential for good health: Weekly

ಲೋಕದರ್ಶನ ವರದಿ 

       ಸಿಂದಗಿ 02: ಇಂದಿನ ಸಮಾಜವು ಕಂಪ್ಯೂಟರ್ ಮತ್ತು ತಂತ್ರಜ್ಞಾನದ ಯುಗದಲ್ಲಿದ್ದು, ಅದರ ಸೌಲಭ್ಯಗಳ ಜೊತೆಗೆ ದುಷ್ಪರಿಣಾಮಗಳ ಬಗ್ಗೆಯೂ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಡಾ. ಸೀಮಾ ವಾರದ ಹೇಳಿದರು. 

ಪಟ್ಟಣದ ಸಾರಂಗಮಠದ ಸಾತವೀರೇಶ್ವರ ಕಾನ್ಫರೆನ್ಸ್‌ ಹಾಲ್‌ನಲ್ಲಿ ನಡೆದ 356ನೇ ಸದ್ವಿಚಾರಗೋಷ್ಠಿ ಸಮಾರಂಭದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಷಯ ಕುರಿತು ಉಪನ್ಯಾಸ ನೀಡಿ, ಜಗತ್ತಿಗೆ ಸೂರ್ಯನೇ ಮೂಲ ಶಕ್ತಿಯಾಗಿದ್ದು, ಆರೋಗ್ಯಕರ ಜೀವನಕ್ಕಾಗಿ ಯೋಗಾಸನ, ಪ್ರಾಣಾಯಾಮ ಹಾಗೂ ಸರಿಯಾದ ಉಸಿರಾಟದ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಉಸಿರಾಟವೇ ಜೀವನದ ಮೂಲಾಧಾರವಾಗಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗದೆ ಸಮಚಿತ್ತತೆಯಿಂದ ಬದುಕುವುದು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ ಎಂದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ತಪೋರತ್ನಂ ಪ್ರಶಸ್ತಿ ಪುರಸ್ಕೃತ ಕೋರವಾರ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ಮನುಷ್ಯನ ಬದುಕು ಸಾರ್ಥಕವಾಗಬೇಕಾದರೆ ಸತ್ಯ, ಧರ್ಮ, ದಯೆ, ಆತ್ಮಸಂಯಮ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಹಿಂದಿನ ಕಾಲದಲ್ಲಿ ಜನರು ಪ್ರಕೃತಿಗೆ ಹೊಂದಿಕೊಂಡ ಜೀವನಶೈಲಿ, ಶುದ್ಧ ಆಹಾರ ಪದ್ಧತಿ, ನಿಯಮಿತ ದಿನಚರಿ ಹಾಗೂ ಉತ್ತಮ ಸಂಸ್ಕಾರಗಳನ್ನು ಪಾಲಿಸುತ್ತಿದ್ದರಿಂದ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಇಂದಿನ ಸಮಾಜದಲ್ಲಿಯೂ ನೈತಿಕ ಮೌಲ್ಯಗಳು, ಉತ್ತಮ ಸಂಸ್ಕಾರಗಳು ಮತ್ತು ಸತ್ವಗುಣವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ ಎಂದರು.  

ಸಾನ್ನಿಧ್ಯವನ್ನು ವಹಿಸಿದ್ದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಆರೋಗ್ಯವಂತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. 

ಅಶೋಕ ವಾರದ, ಎಂ.ಎಸ್‌.ಹೈಯಾಳಕರ್, ಎಸ್‌.ವೈ.ಯರಲಡ್ಡಿ, ಚನ್ನಪ್ಪ ಕತ್ತಿ, ಮಲ್ಲಯ್ಯ ನಂದಿಕೋಲ, ಡಿ.ಎಂ.ಸರಶೆಟ್ಟಿ, ಎನ್‌.ಬಿ.ಪೂಜಾರಿ, ವಿ.ಪಿ.ನಂದಿಕೋಲ, ಬಸಮ್ಮ ಧರಿ, ಮಲ್ಲಮ್ಮ ವಮ್ಮಾ, ಪ್ರಶಾಂತ ಹಿರೇಮಠ, ಮಲ್ಲನಗೌಡ ಬಿರಾದಾರ, ಜಗದೀಶ ಪಟ್ಟಣಶೆಟ್ಟಿ, ವೀರೇಶ ಜೋಗೂರ, ಭೀಮಾಶಂಕರ ಪಾಸೋಡಿ ಸೇರಿದಂತೆ ಇನ್ನಿತರರು ಇದ್ದರು.  ಡಾ. ಶರಣಬಸವ ಜೋಗುರ ಸ್ವಾಗತಿಸಿದರು, ಪ್ರೇರಣಾ ಹಿರೇಮಠ ನಿರೂಪಿಸಿದರು, ವಿಜಯಲಕ್ಷ್ಮೀ ಮಂಗಲಗೀತೆ ಹಾಡಿದರು.