ವಿಶ್ವ ಆರೋಗ್ಯ ದಿನ ಕುರಿತು ನೇರ ಫೋನ್‌-ಇನ್ ಜಾಗೃತಿ ಕಾರ್ಯಕ್ರಮ

ವಿಶ್ವ ಆರೋಗ್ಯ ದಿನ ಕುರಿತು ನೇರ ಫೋನ್‌-ಇನ್ ಜಾಗೃತಿ ಕಾರ್ಯಕ್ರಮ Live phone-in awareness program on World Health Day

ಲೋಕದರ್ಶನ ವರದಿ 

ಬೆಳಗಾವಿ 07 : ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಮಂಗಳವಾರ ದಿನಾಂಕ 7ನೆ ಎಪ್ರೀಲ್ 2026 ರಂದು ವಿಶ್ವ ಆರೋಗ್ಯ ದಿನದ ಕುರಿತು ನೇರ ಫೋನ್‌-ಇನ್ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ..

ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಜಯಪ್ರಕಾಶ ಅಪ್ಪಾಜಿಗೋಳ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷ ಏಪ್ರೀಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಜನರ ಆರೋಗ್ಯದ ಕುರಿತು ಕಾಳಜಿ ಮತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಮಹತ್ವದ ಬಗ್ಗೆ ಜಾಗೃತಿಗೊಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ ಎಂದರು. 

ಈ ವರ್ಷ “ಎಲ್ಲರಿಗೂ ಸಮಾನ ಆರೋಗ್ಯ ಮತ್ತು ಶುದ್ಧ ಪರಿಸರಕ್ಕಾಗಿ” ಎಂಬ ಘೋಷವಾಕ್ಯದಡಿಯಲ್ಲಿ  ಆಚರಿಸಲಾಗುತ್ತದೆ. ವಿಜ್ಞಾನದ ಮಹತ್ವ ಮತ್ತು ಅದರ ಮೇಲಿನ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವರ್ಷವಿಡಿ ಆಂದೋಲವಾಗಿ ಆಚರಿಸಲಾಗುತ್ತದೆ ಎಂದರು.  

ಈ ಬೇಸಿಗೆಯ ಸಮಯ ದೇಹದ ನಿರ್ಜಲೀಕರಣದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಅವೆಲ್ಲದಕ್ಕೂ ಹೊಂದೊಕೊಂಡು ಆರೋಗ್ಯ ಕೇಡದಂತೆ ಕಾಪಾಡಿಕೊಳ್ಳುವುದು ಇಂದು ಅತ್ಯವಶ್ಯಕವಾಗಿದೆ. ಬೇಸಿಗೆಯಲ್ಲಿ ಹೆಚ್ಚು ನೀರು ಅಥವಾ ದ್ರವ ಪದಾರ್ಥ ಸೇವನೆ ಮಾಡಬೇಕು, ತರಕಾರಿ ಮತ್ತು ಹಣ್ಣುಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು, ಮಸಾಲೆಯುಕ್ತ ಪದಾರ್ಥಗಳ ಸೇವನೆ ತಪ್ಪಿಸಬೇಕು, ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು,

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಉತ್ತಮ ನಿದ್ರೆಯನ್ನು ರೂಡಿಸಿಕೊಳ್ಳಬೇಕು, ನವಜಾತ ಶಿಶುಗಳ ಆರೋಗ್ಯ ಬಗ್ಗೆ ತಾಯಂದಿರು ಕಾಳಜಿವಹಿಸಬೇಕು ಎಂದರು ಮತ್ತು ಆರೋಗ್ಯಕರ ಎಂದರೆ ಕೇವಲ ದೈಹಿಕ ಆರೋಗ್ಯವಲ್ಲ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಸಹ ಅರ್ಥೈಸುತ್ತದೆ ಎಂದು ತಿಳಿಸಿದರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್‌. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.