ಗುರುಲಿಂಗ ಕಾಪಸೆ ಜನ್ಮದಿನದಂದು ಸಾಹಿತ್ಯ ಪ್ರಶಸ್ತಿ
ಧಾರವಾಡ 26: ಕನ್ನಡ ಶಾಲಾ ಶಿಕ್ಷಕರಾಗಿ, ಆದರ್ಶ ಪ್ರಾಧ್ಯಾಪಕರಾಗಿ, ಉತ್ತಮ ವಾಗ್ಮಿಗಳಾಗಿ, ವಿಮರ್ಶಕರಾಗಿ, ಸಮರ್ಥ ಆಡಳಿತಗಾರರಾಗಿ ಕನ್ನಡದ ಶ್ರೇಷ್ಠ ವಿದ್ವಾಂಸಕರಾಗಿ ಸರಳತೆ ಮತ್ತು ಸಹಜತೆಗಳನ್ನು ಮೈಗೂಡಿಸಿಕೊಂಡ ಡಾ. ಗುರುಲಿಂಗ ಕಾಪಸೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅವರ ಸಾಧನೆ ಅಮೋಘವಾದದ್ದು ಮತ್ತು ಅನುಪಮವಾದದ್ದು. ಇಂಥ ಮಹಾನ ವ್ಯಕ್ತಿಯ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಅವರ ಶಿಷ್ಯರು ಸೇರಿ ಸಂಘದಲ್ಲಿ ದತ್ತಿ ಸ್ಥಾಪಿಸಿದ್ದಾರೆ. ದತ್ತಿ ಅಂಗವಾಗಿ ಸಂಘವು ಪ್ರತಿ ವರುಷ ಏಪ್ರಿಲ್ 2 ಡಾ. ಕಾಪಸೆ ಅವರ ಜನ್ಮದಿನದಂದು ಇಬ್ಬರು ಉತ್ತಮ ಸಾಹಿತಿಗಳಿಗೆ ‘ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ’ಯನ್ನು ನೀಡಲು ನಿರ್ಧರಿಸಿದೆ. ಈ ವರ್ಷ ದತ್ತಿ ಉದ್ಘಾಟನೆಯೊಂದಿಗೆ ಧಾರವಾಡದ ಪ್ರಾಧ್ಯಾಪಕರು, ಕವಿಯತ್ರಿ, ಲೇಖಕಿ, ಚಿಂತಕಿ ಮಕ್ಕಳ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮತ್ತು ಬೆಂಗಳೂರಿನ ಪ್ರಸಿದ್ಧ ಸಾಹಿತಿ, ಕವಿ, ನಾಟಕಕಾರ, ವಿಮರ್ಶಕ, ಚಿಂತಕ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ದಿ. 02 ರಂದು ಸಾಯಂಕಾಲ 5-30 ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಮಾರಂಭ ಜರುಗುವುದು. ಪ್ರಶಸ್ತಿ ಮೊತ್ತ ತಲಾ 25.000/- ರೂಪಾಯಿಗಳು ಇದ್ದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.