ದೇವದಾಸಿ ಪದ್ಧತಿ ನಿರ್ಮೂಲನೆಗೆ ಪಣತೋಡೋಣ: ಸಿಡಿಪಿಒ ಬೆಟ್ಟದೇಶ ಮಾಳೇಕೊಪ್ಪ

Let's work towards the abolition of the Devadasi system: CDPO Bettadesh Malekoppa

ದೇವದಾಸಿ ಪದ್ಧತಿ ನಿರ್ಮೂಲನೆಗೆ ಪಣತೋಡೋಣ: ಸಿಡಿಪಿಒ ಬೆಟ್ಟದೇಶ ಮಾಳೇಕೊಪ್ಪ 

ಕೊಪ್ಪಳ 13: ಯಲಬುರ್ಗಾ ತಾಲ್ಲೂಕನ್ನು ದೇವದಾಸಿ ಪದ್ಧತಿ ಮುಕ್ತ ತಾಲ್ಲೂಕನ್ನಾಗಿ ಮಾಡಲು ಪಣ ತೊಡೋಣ, ಇಂತಹ ಪ್ರಕರಣ ಕಂಡುಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತನ್ನಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದೇಶ ಮಾಳೇಕೊಪ್ಪ ಹೇಳಿದರು.  ಅವರು ಗುರುವಾರ ಯಲಬುರ್ಗಾ ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಏರಿ​‍್ಡಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾಡಿದರು.  ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಿ.ನಾಗೇಶ ಅವರು ಮಾತನಾಡಿ, ನಿವೇಶನ ಇಲ್ಲದ ಒಬ್ಬ ಮಾಜಿ ದೇವದಾಸಿ ಮಹಿಳೆಗೆ 15 ದಿನಗಳಲ್ಲಿ ನಿವೇಶನ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.  ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಯೋಳಬಾವಿ ಅವರು ಮಾಜಿ ದೇವದಾಸಿ ಮಹಿಳೆಯರಿಗೆ  ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಅಪರ ಸರ್ಕಾರಿ ವಕೀಲರಾದ ಮಲ್ಲನಗೌಡ ಎಸ್‌.ಪಾಟೀಲ್ ಅವರು ಮಾತನಾಡಿ, ದೇವದಾಸಿ ಪದ್ಧತಿ ಈ ತಲೆಮಾರಿಗೆ ನಿರ್ನಾಮವಾಗಬೇಕು. ಈ ಪದ್ಧತಿ ಆಚರಿಸಿದರೆ ಶಿಕ್ಷೆ ಖಚಿತವೆಂದು ಹೇಳಿದರು.  ವಕೀಲರಾದ ಸಾವಿತ್ರಿ ಗೊಲ್ಲರ ಅವರು ಬಾಲ್ಯವಿವಾಹ, ಪೋಕ್ಸೋ ಕಾಯ್ದೆಯ ಬಗ್ಗೆ ತಿಳಿಸಿದರು. ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಯಮುನಾ ಬೆಸ್ತರ್ ಅವರು ಮಹಿಳೆಯರ ಸುರಕ್ಷತೆಗೆ ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ನೊಂದ ಮಹಿಳೆಯರ ಸರ್ಕಾರಿ ಸೇವಾ ಸೌಲಭ್ಯಗಳ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ಯಲಬುರ್ಗಾ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಂದಯ್ಯ ಕಳ್ಳಿಮಠ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ವಿಜಯಕುಮಾರ, ಆರೋಗ್ಯಾಧಿಕಾರಿ ಡಾ.ಅಮರೇಶ ನಾಗರಾಳ, ಪೋಲಿಸ್ ಇಲಾಖೆಯ ಎ.ಎಸ್‌.ಐ ಪ್ರಕಾಶ, ದೇವದಾಸಿ ಪುನರ್ವಸತಿಯ ತಾಲ್ಲೂಕು ಅನುಷ್ಟಾನಾಧಿಕಾರಿಗಳಾದ ದಾದೇಸಾಬ, ಸಕ್ಕುಬಾಯಿ ಹಾಗೂ ರೇಣುಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.