ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ - ಜಿಲ್ಲಾಧಿಕಾರಿ ನಲಿನ್ ಅತುಲ್

Let's celebrate Holi festival peacefully - District Collector Nalin Atul

 ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ - ಜಿಲ್ಲಾಧಿಕಾರಿ ನಲಿನ್ ಅತುಲ್ 

ಕೊಪ್ಪಳ 12: ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬವನ್ನು ಕೊಪ್ಪಳ ಜಿಲ್ಲೆಯಲ್ಲಿ ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು. ಅವರು ಬುಧವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಹೋಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಬ್ಬಗಳನ್ನು ನಾವು ಸಂಭ್ರಮಿಸುವದಕ್ಕಾಗಿ ಮಾಡುತ್ತೆವೆ. ನಮ್ಮ ಸಂಭ್ರಮಾಚರಣೆ ಇನ್ನೊಬ್ಬರಿಗೆ ತೊಂದರೆಯಾಗುವಂತೆ ಇರಬಾರದು. ಹೋಳಿ ಹಬ್ಬದ ಇದೇ ಸಂದರ್ಭದಲ್ಲಿ ಮುಸ್ಲಿಂ ಭಾಂದವರು ರಂಜಾನ್ ಹಬ್ಬದ ಆಚರಣೆ ಮಾಡುತ್ತಿದ್ದಾರೆ ಹಾಗೂ ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಡಿ.ಜೆ. ಹಚ್ಚಿ ಹೆಚ್ಚು ಶಬ್ದವನ್ನು ಉಂಟುಮಾಡಿ ಇತರರಿಗೆ ತೊಂದರೆ ಮಾಡುವದಾಗಲಿ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಪೋಸ್ಟ್‌ಗಳನ್ನು ಹಾಕುವದಾಗಲಿ ಮಾಡಬಾರದು ಎಂದರು. ನಮ್ಮ ಸಂಪ್ರದಾಯ ಪರಂಪರೆ ಈ ಹಿಂದೆ ಹೇಗೆ ನಡೆಯುತ್ತಾ ಬರುತ್ತಿದೆ ಅದನ್ನೆ ನಾವೆಲ್ಲರೂ ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ ಮಾರ್ಚ್‌ 13 ಹಾಗೂ 15 ರವರೆಗೆ ಹೋಳಿ ಹಬ್ಬ ಆಚರಣೆ ಜಿಲ್ಲೆಯ ವಿವಿಧ ಕಡೆ ಮಾಡುತ್ತಿರುವುದರಿಂದ ಶಾಂತಿಯುತವಾಗಿ ಆಚರಿಸಬೇಕು. ಆಯಾ ಸಮಾಜದ ಹಿರಿಯರು ತಮ್ಮ ಯುವಕರಿಗೆ ಈ ಕುರಿತು ತಿಳಿಹೇಳಬೇಕು. ತಮಗೆಲ್ಲರಿಗೂ ಮುಂಚಿತವಾಗಿ ಹೋಳಿ ಹಬ್ಬದ ಶುಭಾಶಯಗಳು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್‌. ಅರಸಿದ್ದಿ ಅವರು ಮಾತನಾಡಿ, ಹೋಳಿ ಹಬ್ಬ ಶುಕ್ರವಾರ ಬಂದಿರುವುದರಿಂದ ರಂಜಾನ್ ಪ್ರಾರ್ಥನೆ ಇರುತ್ತದೆ. ಹಾಗಾಗಿ ಎಲ್ಲರೂ ಸೌಹಾರ್ದತೆಯಿಂದ ಹೋಳಿ ಹಬ್ಬದ ಆಚರಣೆ ಮಾಡಬೇಕು. ಇತರರ ಭಾವನೆಗಳಿಗೆ ಧಕ್ಕೆ ತರದಂತೆ ಹಬ್ಬದ ಆಚರಣೆ ಯಾಗಬೇಕು. ಡಿ.ಜೆ ಗಳಿಗೆ ಅನುಮತಿ ಇಲ್ಲ. ತಾವು ಹಾಗೇನಾದರೂ ಬೇಕಾದರೆ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಇಲ್ಲದವುಗಳನ್ನು ಸೀಜ್ ಮಾಡಲಾಗುತ್ತದೆ ಎಂದರು. ಕಾಮದಹನ ರಸ್ತೆಯ ಮಧ್ಯದಲ್ಲಿ ಮಾಡಿದರೆ ಟ್ರಾಫಿಕ್ ಸಮಸ್ಯೆಗಳಾಗುತ್ತದೆ. ಹಾಗಾಗಿ ಒಂದು ಕಡೆ ಪಕ್ಕದಲ್ಲಿ ಕಾಮದಹನಕ್ಕೆ ವ್ಯವಸ್ಥೆಮಾಡಿ. ಎಲ್ಲಾ ಕಡೆ ನಮ್ಮ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಹೋಳಿ ಹಬ್ಬವನ್ನು ಆಚರಿಸಿ. ಕೆಮಿಕಲ್ ಮಿಶ್ರಿತ ಬಣ್ಣವನ್ನು ಉಪಯೋಗಿಸಿದಲ್ಲಿ ಅದು ನಮ್ಮ ದೇಹದ ಮೇಲೆ ಚರ್ಮ ಸಮಸ್ಯೆ ಸೇರಿದಂತೆ ಇತರೆ ಪರಿಣಾಮಗಳಾಗುತ್ತವೆ ಎಂದು ಹೇಳಿದರು. ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷರಾದ ಪೀರಾಹುಸೇನ ಹೊಸಳ್ಳಿ ಅವರು ಮಾತನಾಡಿ, ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಹಿಂದು ಹಾಗೂ ಮುಸ್ಲಿಮರು ಸೌಹಾರ್ದಯುತವಾಗಿ ಜಿಲ್ಲೆಯಲ್ಲಿ ಆಚರಿಸುತ್ತಾ ಬರುತ್ತಿದ್ದೆವೆ. ಇವುಗಳು ಎಲ್ಲಾ ಜನರ ಅಭಿವೃದ್ಧಿಗಾಗಿ ಮಾಡುವ ಹಬ್ಬಗಳು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆಯನ್ನು ಮಾಡುತ್ತಿದ್ದಾರೆ. ಈ ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಸ್ನೇಹ ಭಾಂದವ್ಯದಿಂದ ಹಬ್ಬಗಳ ಆಚರಣೆ ಮಾಡುತ್ತೆವೆ ಎಂದು ಹೇಳಿದರು. ವಿವಿಧ ಸಮುದಾಯಗಳ ಮುಖಂಡರು ಈ ಹಬ್ಬಗಳ ಆಚರಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ರೇಷ್ಮಾ ಹಾನಗಲ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ವಿವಿಧ ಸಮಾಜದ ಮುಖಂಡರಾದ ಮುತ್ತೂರ ಸ್ವಾಮಿ ನರೇಗಲ್, ಉಮೇಶ ಕುರುಡೇಕರ್, ಮಾನ್ವಿ ಪಾಷಾ, ಎಸ್ಬಿ ಖಾದ್ರಿಸಾಬ ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.