ಭಾಷೆ ಅನ್ನೋದು ಕೇವಲ ವರ್ಣಮಾಲೆಯಲ್ಲ, ಮನುಷ್ಯರೊಳಗಿನ ಆಳವಾದ ಭಾವನೆ : ಶಂಕರ ಹಲಗತ್ತಿ

ಭಾಷೆ ಅನ್ನೋದು ಕೇವಲ ವರ್ಣಮಾಲೆಯಲ್ಲ, ಮನುಷ್ಯರೊಳಗಿನ ಆಳವಾದ ಭಾವನೆ : ಶಂಕರ ಹಲಗತ್ತಿ  Language is not just an alphabet, it is a deep feeling within humans: Shankar Halagatti

ಗದಗ 27: ಭಾಷೆ ಎನ್ನುವುದು ಕೇವಲ ವರ್ಣಮಾಲೆಯಲ್ಲ, ಅದು ಕೇವಲ ಶಬ್ದ-ವಾಕ್ಯಗಳ ಸಂಯೋಜನೆಯಲ್ಲ, ಪ್ರತಿ ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆಯಿರುತ್ತದೆ. ಭಾಷೆ ಎಂದರೆ ಒಂದು ಪ್ರದೇಶದ, ಜನಾಂಗದ ಸಂಸ್ಕೃತಿ ಕೂಡಾ ಆಗಿರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಕನ್ನಡಿಗನ ಭೌದ್ಧಿಕತೆಯ ಉಸಿರೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ ತಿಳಿಸಿದರು. 

ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕೆ.ಎಲ್‌.ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯಗಳ ಕನ್ನಡ ವಿಭಾಗಗಳು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್ತು, ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ಕನ್ನಡಿಗ ಕರ್ನಾಟಕ’ ವಿಷಯದ ಕುರಿತಾದ ನುಡಿ ಜಾಗೃತಿಯ ಗೀತಗಾಯನ ಮತ್ತು ಉಪನ್ಯಾಸ ಕಾರ‌್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಮುಂದುವರೆದು ಮಾತನಾಡಿದ ಶ್ರೀ ಶಂಕರ ಹಲಗತ್ತಿ ಅವರು ಕನ್ನಡ-ಕನ್ನಡಿಗ-ಕರ್ನಾಟಕತ್ವ ಎಂಬ ಧ್ಯೇಯದೊಂದಿಗೆ, ನಾಡು ನುಡಿಯ ಹಿರಿಮೆ, ಗರಿಮೆ ಎತ್ತಿ ಹಿಡಿಯುವಲ್ಲಿ ಕನ್ನಡ ಸಾಕ್ಷಿಪ್ರಜ್ಞೆಯಾಗಿ ವಿದ್ಯಾವರ್ಧಕ ಸಂಘ ನಿಂತಿದೆ. ಆಡುವವರಿಗಿಂತ, ಆಡಿದಂತೆ ನಡೆಯುವವರೇ ಲೇಸು ಎಂಬಂತೆ ಕನ್ನಡದ ಅಳಿವು ಉಳಿವಿಗಾಗಿ ಕೇವಲ ಮಾತನಾಡುವುದು ಮುಖ್ಯವಲ್ಲ, ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಗಳ ನಿಜವಾದ ರಕ್ಷಣೆ ನಡೆಯಬೇಕಿದೆ ಈ ಕಾರ್ಯವನ್ನು ವಿದ್ಯಾವರ್ಧಕ ಸಂಘ ಹಲವು ದಶಕಗಳಿಂದ ಮಾಡುತ್ತಾ ಬಂದಿದೆ. ಅದರ ಭಾಗವಾಗಿ ಪದವಿ ಕಾಲೇಜುಗಳತ್ತ ವಿದ್ಯಾವರ್ಧಕ ಸಂಘ ನೆಡದಿದೆ ಎಂದರು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಮಾತನಾಡಿ ಕರ್ನಾಟಕದ ಭಾಷಾ ವೈವಿಧ್ಯತೆಗೆ ದೀರ್ಘಕಾಲದ ಇತಿಹಾಸ ಇದೆ. ಕ್ರಿ.ಶ. ಪ್ರಾರಂಭವಾದಾಗಿನಿಂದ ಮೌರ್ಯರಿಂದ ಹಿಡಿದು ಕದಂಬ, ಗಂಗ, ರಾಷ್ಟ್ರಕೂಟ ಚಾಲುಕ್ಯರು ಮತ್ತು ಹೊಯ್ಸಳರ ವಿಭಿನ್ನ ಆಡಳಿತ ಶೈಲಿ ಹಾಗೂ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗ್ರಸ್ಥಾನ. ಇದು ನಮ್ಮ ರಾಜ್ಯಭಾಷೆಯೂ ಹೌದು, ಮಾತೃಭಾಷೆಯೂ ಹೌದು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಈ ಹೊತ್ತಿನ ತುರ್ತು. ಶೇಕಡಾ 80ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಭಾರತದಲ್ಲಿ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸದಿದ್ದರೆ ದೇಶದ ಬೆಳವಣಿಗೆ ಅಸಾಧ್ಯ ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ ಎಂದರು. 

ಕಾರ್ಯಕ್ರಮದಲ್ಲಿ ‘ಕನ್ನಡ ಕನ್ನಡಿಗ ಕರ್ನಾಟಕತ್ವ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಪ್ರೊ. ಸುಧಾ ಕೌಜಗೇರಿ ಅವರು ಮಾತನಾಡಿ ಕನ್ನಡ ನಾಡನ್ನು ಕಪ್ಪು ಭೂಮಿ ಹೊಂದಿದ ಕರುನಾಡು, ಶ್ರೀಗಂಧದ ನಾಡು ಎಂದು ಕರೆಯುತ್ತಿದ್ದರು. ಕನ್ನಡ ನಾಡಿಗೆ, ಕನ್ನಡ ಭಾಷೆಗೆ ತನ್ನದೇ ಆದ ಘನತೆ, ಗೌರವ ಹಾಗೂ ಸ್ಥಾನಮಾನವಿದೆ, ಜತೆಗೆ 2,000 ವರ್ಷಗಳ ಇತಿಹಾಸ ಹೊಂದಿದೆ. ಕನ್ನಡ ನಾಡಿಗೆ ಬಂದ ಕರ್ನಾಟಕ ಎಂಬ ಹೆಸರು ಇಂದು ಉಸಿರಾಗಬೇಕಿದೆ. ಕನ್ನಡದ ಜ್ಞಾನ ಸಂಪತ್ತು, ಶಬ್ದ ಸಂಪತ್ತು ಬೆಳೆಯಬೇಕು. ಇದು ಸಾಧ್ಯವಾಗಬೇಕಾದರೆ ಕೇವಲ ಶಿಕ್ಷಕರು, ಸಾಹಿತಿಗಳಷ್ಟೇ ಕನ್ನಡದಲ್ಲಿ ಬರೆದರೆ ಸಾಲದು ವೈದ್ಯರು, ವಕೀಲರ, ವಿಜ್ಞಾನಿಗಳು ಹೀಗೆ ಸಮಾಜದ ವಿವಿಧ ವರ್ಗಗಳು ಕನ್ನಡವನ್ನು ಬಳಸಬೇಕು, ಕನ್ನಡದಲ್ಲಿಯೇ ಬರೆಯಬೇಕು ಮತ್ತು ವ್ಯವಹರಿಸಬೇಕು. ನಮ್ಮಲ್ಲಿ ಒಂದಷ್ಟು ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ, ಉಳಿದ ವೃತ್ತಿಯವರು ಕನ್ನಡದಲ್ಲಿ ಬರೆಯಲು ಹಿಂದೇಟು ಹಾಕುತ್ತಾರೆ. ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲಿಕ್ಕೆ ಬರುವುದಿಲ್ಲ ಎನ್ನುವುದು ಸುಳ್ಳು. ಕನ್ನಡ ಅಪಾರ ಚೈತನ್ಯವುಳ್ಳ ಭಾಷೆ. ಕನ್ನಡದಲ್ಲಿ ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಅವರು ಹೊರಬರಬೇಕೆಂದು ಕರೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್‌. ಪಿ. ಸಂಶಿಮಠ ಮಾತನಾಡಿ ಭಾರತದಲ್ಲಿಯೇ ನಮ್ಮ ಸಂಸ್ಕೃತಿ ಉತ್ಕೃಷ್ಟ. ಭಾಷೆ, ನಡೆ, ನುಡಿ ಹೊಂದಿರುವ ನಾಡು ನಮ್ಮದು. ಕನ್ನಡ ನುಡಿ ನಮ್ಮೆಲ್ಲರ ಜೀವಾಳ. ಮಾತೃ ಭಾಷೆ ಕನ್ನಡದ ಜತೆಗೆ ಇಂಗ್ಲಿಷ್ ಕಲಿಯಲು ಯಾವುದೇ ಅಭ್ಯಂತರವಿಲ್ಲ. ಆದರೆ, ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು.  

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಎಲ್ಲರನ್ನೂ  ಸ್ವಾಗತಿಸಿದರು. ಕೊತಬಾಳದ ಶಂಕ್ರಣ್ಣ ಸಂಕಣ್ಣವರ ತಂಡದಿಂದ ಕನ್ನಡ ನಾಡು ನುಡಿ ಕುರಿತಾದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಡಾ. ರಾಮಚಂದ್ರ ಪಡೇಸೂರ, ಪ್ರೊ. ಸಂಗೀತಾ ವಣಗೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಪಿ. ಜಿ. ಪಾಟೀಲ , ಡಾ. ನಾಗರಾಜ ಬಳಿಗೇರ, ಪ್ರೊ. ವಿಶ್ವನಾಥ ಜಿ, ಡಾ. ಅಂದಯ್ಯ ಅರವಟಗಿಮಠ ಒಳಗೊಂಡಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.  

ವೀರಣ್ಣ ಒಡ್ಡಿನ ಎಲ್ಲರಿಗೂ ವಂದಿಸಿದರು.  ಪ್ರೊ. ಪಿ. ಜಿ. ಪಾಟೀಲ, ಡಾ. ಎ. ಕೆ. ಮಠ, ಪ್ರೊ. ವಿಶ್ವನಾಥ ಜಿ, ಡಾ. ನಾಗರಾಜ ಬಳಿಗೇರ ಉಪಸ್ಥಿತರಿರುವರೆಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅಂದಯ್ಯ ಅರವಟಗಿಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.