ರಾಜ್ಯದಲ್ಲಿ ಅರ್ಹ ಐಟಿಐ ಅಭ್ಯರ್ಥಿಗಳಿಗೆ ನೇಮಕಾತಿಗಳ ಕೊರತೆ

ರಾಜ್ಯದಲ್ಲಿ ಅರ್ಹ ಐಟಿಐ  ಅಭ್ಯರ್ಥಿಗಳಿಗೆ ನೇಮಕಾತಿಗಳ ಕೊರತೆ Lack of recruitment for qualified ITI candidates in the state

                ವಿಜಯಪುರ 23:  ದೇಶದ ಎಲ್ಲ ರಾಜ್ಯಗಳು ಇಂದು ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ ’ಡಿ’ ದರ್ಜೆ ಹುದ್ದೆಗಳನ್ನು ಕೊಡುತ್ತಿದ್ದರೂ ನಮ್ಮ ರಾಜ್ಯದಲ್ಲಿ ಇಂಧನ ಇಲಾಖೆಯು  ಜ್ಯೂನಿಯರ್ ಪವರ್ ಮ್ಯಾನ್ (ಜೆಪಿಎಂ) ಹಾಗೂ ಜ್ಯೂನಿಯರ್ ಸ್ಟೇಷನ್ ಅಟೆಂಡೆಂಟ್(ಜೆಎಸ್‌ಎ) ಎಂಬ "ಸಿ" ದರ್ಜೆ ತಾಂತ್ರಿಕ  ಹುದ್ದೆಗಳನ್ನು  ಕೊಡುತ್ತಿದೆ.  ಇವೇ ಉದ್ಯೋಗಕ್ಕಾಗಿ ಚಾತಕ ಪಕ್ಷಿಯಂತೆ ಕಾದಿರುವ ಐಟಿಐ/ಐಟಿಸಿ ಅಭ್ಯರ್ಥಿಗಳನ್ನು ಈ ಕ್ರಮ ಚಿಂತಾಕ್ರಾಂತರನ್ನಾಗಿಸಿದೆ. ಏಕೆಂದರೆ  ಕೆಪಿಟಿಸಿಎಲ್ 2006ರಲ್ಲಿ  ಐಟಿಐದವರಿಗೆ ನೇಮಕಾತಿ ನಿಯಮಗಳನ್ನು ರೂಪಿಸಿ ಮೊಟ್ಟಮೊದಲು  ಅಸಿಷ್ಟಂಟ್ ಲೈನ್ಮನ್ (ಎಎಲ್‌ಎಂ) ಹಾಗೂ ಅಸಿಷ್ಟಂಟ್ ಸ್ಟೇಶನ್ ಅಟೆಂಡೆಂಟ್(ಎಎಸ್‌ಎ) ಎನ್ನುವ ಹುದ್ದೆಗಳಿಗೆ  2007 ರಿಂದ 2015ರವರೆಗೂ ಸತತವಾಗಿ ಇವರನ್ನು  ನೇಮಕ ಮಾಡಿಕೊಂಡಿದ್ದು ಈ ಹುದ್ದೆಗಳ ಆಯ್ಕೆಗೆ ಐಟಿಐ ಅಂಕಗಳ ಜೇಷ್ಠತೆಯೇ ಪ್ರಮುಖ ಮಾನದಂಡವಾಗಿದ್ದು ಇದುವೇ ಮುಂದೆ ಇವರಿಗೆ ಮುಳುವಾಯಿತೆಂದರೆ ಅತಿಶೋಕ್ತಿಯೇನಲ್ಲ.   ಇನ್ನು ಇವರ ಕೊನೆ ನೇಮಕಾತಿ 2015ರಲ್ಲಿ ನಡೆದಿದ್ದು,   ಅದರಲ್ಲಿ 1500 ಎಎಲ್‌ಎಂ ಹಾಗೂ ಎಎಸ್‌ಎ ಹುದ್ದೆಗಳ ನೇಮಕಾತಿ ಪಟ್ಟಿ ನೋಡಿದರೆ   ಕೆಲವೇ ಕೆಲವು ಜಿಲ್ಲೆಗಳ ಅಭ್ಯರ್ಥಿಗಳು ಆಯ್ಕೆಯಾಗಿದ್ದರು! ಅದು ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ ರವರ ತೀವ್ರ  ಅಸಮಾಧಾನಕ್ಕೆ ಕಾರಣವಾಗಿ ಮುಂದೆ ಇವರ ನೇಮಕಾತಿ ಸ್ಥಗಿತಗೊಳಿಸಿತೆಂದರೆ ತಪ್ಪೇನಿಲ್ಲ.

                ಆದರೆ ಅಂದು ಇಂಧನ ಸಚಿವರು ಸಾರಿಗೆ ಇಲಾಖೆಯಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕಾತಿ ಮುಂದುವರೆಸಿದ್ದರೆ ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ಜೊತೆಗೆ ವಾಮಮಾರ್ಗದ ಹಾದಿ ಹಿಡಿದಿದ್ದ  ಖಾಸಗಿ ಐಟಿಐಗಳ ಕೆಲವು  ಅಭ್ಯರ್ಥಿಗಳಿಗೆ, ಸಂಸ್ಥೆಗಳಿಗೆ ಚೆನ್ನಾಗಿ ಬುದ್ದಿ ಕಲಿಸಬಹುದಿತ್ತು. ಹಾಗೆ ಮಾಡದೇ ಜೆಪಿಎಂ, ಜೆಎಸ್‌ಎ ಎಂಬ ಹೊಸ ಹುದ್ದೆಗಳನ್ನು ಹುಟ್ಟುಹಾಕಿ ಎಸ್ಸ್ಸೆಸ್ಸೆಲ್ಸಿ ವಿದ್ಯೆಯನ್ನೇ  ಸೂಕ್ತವೆಂದು ಪರಿಗಣಿಸಿ 3ವರ್ಷದ ತರಬೇತಿ ಪೂರೈಸಬೇಕೆಂಬ ಷರತ್ತಿನೊಂದಿಗೆ 2015 ರಿಂದ 2018ರವರೆಗೆ ಸುಮಾರು 18ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಐಟಿಐ ಅಭ್ಯರ್ಥಿಗಳನ್ನು ಬೀದಿಗೆ ತಳ್ಳಿದರು. ಇಲ್ಲಿ ಗಮನಿಸಬೇಕಿರುವ ಸಂಗತಿಯೆಂದರೆ  ರಾಜ್ಯದಲ್ಲಿ ಅರ್ಹ ಐಟಿಐ  ಅಭ್ಯರ್ಥಿಗಳಿಗೆ ಕೊರತೆ ಇದ್ದ ಪಕ್ಷದಲ್ಲಿ, ಇಲಾಖೆಯು ಬೇರೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಬಹುದು.  ಆದರೆ ಕೊರತೆ ಎಂಬ ಮಾತೇ ಇಲ್ಲ. ರಾಜ್ಯದಲ್ಲಿ ಪ್ರತಿವರ್ಷ ಸುಮಾರು 18ಸಾವಿರದಂತೆ ಐಟಿಐ ಇಲೇಕ್ಟ್ರೀಷಿಯನ್ ಅಭ್ಯರ್ಥಿಗಳು ಉತ್ತೀರ್ಣರಾಗಿ ಹೊರ ಬಂದಿದ್ದಾರೆ. ಕಳೆದ 10ವರ್ಷದಲ್ಲಿ ಇವರ ಸಂಖ್ಯೆಯೇ ಸುಮಾರು 1.86ಲಕ್ಷವನ್ನೂ ದಾಟಿದೆ. ಹೀಗಿದ್ದೂ ಕೆಪಿಟಿಸಿಎಲ್ ಲೈನ್ ಮ್ಯಾನ್ ಹುದ್ದೆಗಳಿಗೆ ಅನರ್ಹವಾದ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದೇಕೆ ? ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ. ಇನ್ನು ಕೆಪಿಟಿಸಿಎಲ್ನ ಈ ನೇಮಕಾತಿ ನಿಯಮಗಳು ದೋಷದಿಂದ ಕೂಡಿವೆಯೆಂದು  ಘಂಟಾಘೋಷವಾಗಿ ಹೇಳಬಹುದು.

                ಹೇಗೆಂದರೆ ಈ ಜೆಪಿಎಂ, ಜೆಎಸ್‌ಎ ಎಂಬ ತಾಂತ್ರಿಕ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳು ಬರೀ 3ವರ್ಷ ತರಬೇತಿ ಪಡೆದರೆ ಸಾಕಾಗದು. ಜೊತೆಗೆ ಎಸ್ ಸಿವಿಟಿ/ಎನ್ಸಿವಿಟಿ ಬೋರ್ಡ್‌ ಪರೀಕ್ಷೆ ಪಾಸು ಮಾಡಬೇಕು. ಆದರೆ ಇಲ್ಲಿ ಅಂಥ ಯಾವ ಬೆಳವಣಿಗೆಗಳು  ನಡೆದಿರುವದಿಲ್ಲ.  ಇನ್ನು ಕೆಪಿಟಿಸಿಎಲ್ಗೆ ಪರೀಕ್ಷೆ ನಡೆಸಿ ಪ್ರಮಾಣಪತ್ರ ಕೊಡುವ ಅಧಿಕಾರವೂ ಇಲ್ಲ.  ಹಾಗಾಗಿ ಏನಿದ್ದರೂ 2ವರ್ಷದ ಐಟಿಐ ಇಲೇಕ್ಟ್ರೀಷಿಯನ್ ಅಭ್ಯರ್ಥಿಗಳು ಅರ್ಹರಾಗುವರು. ಹಾಗೆ ನೋಡಿದರೆ,  ಎಎಲ್‌ಎಂ, ಎಎಸ್‌ಎ ಹುದ್ದೆಗಳಿಗೆ ಇವರು ಸಹ ಅರ್ಹರಲ್ಲ. ಇವರ ಬದಲಿಗೆ 3ವರ್ಷದ ಇಲೇಕ್ಟ್ರೀಷಿಯನ್‌/ಲೈನ್ಮ್ಯಾನ್ ನಲ್ಲಿ ಅಪ್ರೇಂಟಿಸ್  ಪಾಸಾದ ಅಭ್ಯರ್ಥಿಗಳು ಅರ್ಹರಾಗುವರು. ಆದರೆ  ಆಶ್ಚರ್ಯದ ಸಂಗತಿಯೆಂದರೆ, ಕೆಪಿಟಿಸಿಎಲ್ ಇದುವರೆಗೂ ಇವರಿಗೆ ನೇಮಕಾತಿ ನಿಯಮಗಳನ್ನೇ ರೂಪಿಸಿರುವುದಿಲ್ಲ. ಇವರಿಗೆ ನೀಡಬೇಕಿರುವ ಹುದ್ದೆಗಳನ್ನು ಐಟಿಐ ಅಭ್ಯರ್ಥಿಗಳಿಗೆ ನೀಡಲಾಗಿದೆ. ಇನ್ನು ನಮ್ಮ ನೆರೆಹೊರೆ ರಾಜ್ಯಗಳಾದ ತೆಲಂಗಾಣ, ಆಂದ್ರ​‍್ರದೇಶ, ತಮಿಳುನಾಡು, ಮಹಾರಾಷ್ಟ್ರ ಮಂತಾದ ರಾಜ್ಯಗಳಲ್ಲಿ ಐಟಿಐ ಇಲೇಕ್ಟ್ರೀಷಿಯನ್‌/ವೈರ್ ಮ್ಯಾನ್  ಟ್ರೇಡ್ನ ಅಭ್ಯರ್ಥಿಗಳನ್ನು ಜೆಪಿಎಂ, ಜೆಎಸ್‌ಎ ಹುದ್ದೆಗಳಿಗೆ ಮತ್ತು  ಅಪ್ರೇಂಟಿಸ್ ಅಭ್ಯರ್ಥಿಗಳನ್ನು ಎಪಿಎಂ, ಎಎಸ್‌ಎ ಹುದ್ದೆಗಳಿಗೆ ಅರ್ಹರೆಂದು ಪರಿಗಣಿಸಿ ನೇಮಕಾತಿ ಮಾಡಲಾಗುತ್ತಿದೆ. ಹಾಗಾಗಿ  ಇದೇ ಮಾದರಿಯನ್ನು ಅನುಸರಿಸಲು ಜತೆಗೆ ಐಟಿಐ ಅಭ್ಯರ್ಥಿಗಳ ಉದ್ಯೋಗದ ಹಕ್ಕನ್ನು ಸಂರಕ್ಷಿಸಲು ರಾಜ್ಯದ ಮುಖ್ಯಮಂತ್ರಿಗಳು ಸ್ವತಃ  ಗಮನ ಹರಿಸಿ ಇಂಧನ ಇಲಾಖೆಯ ಈ ನೇಮಕಾತಿ ಅವಾಂತರಗಳಿಗೆ ತೆರೆ ಎಳೆಯುವುದು ಇಂದಿನ ಅಗತ್ಯವಾಗಿದೆ.