ಕುಂಭದ್ರೋಣ ಮಳೆ: ಮನೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಕುಂಭದ್ರೋಣ ಮಳೆ: ಮನೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ Kumbhadrona rains: Houses flooded, public life disrupted

ಕುಂಭದ್ರೋಣ ಮಳೆ: ಮನೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ 

ದೇವರಹಿಪ್ಪರಗಿ 15: ಪಟ್ಟಣದಲ್ಲಿ ರವಿವಾರ ರಾತ್ರಿ ಸುರಿದ ಕುಂಭದ್ರೋಣ ಮಳೆ ಸಾಕಷ್ಟು ಅವಾಂತರ ಸಷ್ಟಿಸಿದೆ. ಅದರಲ್ಲಿಯೂ ವಿಶೇಷವಾಗಿ ತಗ್ಗು ಪ್ರದೇಶಕ್ಕೆ ನೀರು ನುಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.  

ಪಟ್ಟಣದಲ್ಲಿ ಹಾಯ್ದುಹೋಗಿರುವ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲಿ ಮೇನ್ ಬಜಾರ್ ಸಮೀಪದ ಸದಯ್ಯನ ಮಠದ ಹತ್ತಿರ ವಸತಿ ಗೃಹಗಳಿಗೆ ರಸ್ತೆ ಮತ್ತು ಚರಂಡಿ ನೀರು ಭೋರ್ಗರೆಯುತ್ತ ನುಗ್ಗಿದೆ. ಇದರಿಂದ ಎಲ್ಲ ಮನೆಗಳು ಜಲಾವತಗೊಂಡಿದ್ದವು. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಮರುಕಳಿಸುತ್ತದೆ. ಅನೇಕ ಸಲ ಮನೆಗಳಿಗೂ ನೀರು ನುಗ್ಗಿದ್ದು ಅದನ್ನು ಹೊರಹಾಕುವುದೇ ಅಲ್ಲಿನ ನಿವಾಸಿಗಳಿಗೆ ಒಂದು ದೊಡ್ಡ ಕೆಲಸವಾಗಿದೆ. ಹಗಲಿಡಿ ಕೆಲಸ ಮಾಡಿ ದಣಿದು ಬಂದು ನೆಮ್ಮದಿಯ ನಿದ್ದೆ ಮಾಡಲು ಮಳೆ ಮತ್ತಷ್ಟು ಸಂಕಷ್ಟ ತಂದಿಡುತ್ತಿದೆ.  

ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದಿರುವುದೇ ಇದಕ್ಕೆ ಮೂಲ ಕಾರಣ, ಮಳೆಯ ಅವಾಂತರದಿಂದ ಮನೆಯಲ್ಲಿರುವ ಫ್ರಿಡ್ಜ್‌, ಟಿವಿ, ಮಿಟಾಯಿ ವಸ್ತುಗಳು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನೀರು ಪಾಲಾಗಿವೆ ಎಂದು ಅಲ್ಲಿನ ನಿವಾಸಿಗಳಾದ ಆನಂದ ಸದಯ್ಯನಮಠ ದೂರುತ್ತಾರೆ. ಮೇಲ್ಭಾಗದ ಮಲ್ಲಯ್ಯನ ಗುಡಿಯಿಂದ ಬಜಾರ್ ಮಾರ್ಗವಾಗಿ ರಭಸವಾಗಿ ಹರಿದು ಬರುವ ನೀರು ನೇರವಾಗಿ ವಸತಿ ಗೃಹದ ಕಂಪೌಂಡ್‌ಗೆ ನುಗ್ಗುತ್ತದೆ. ಆದರೆ ಒಳನುಗ್ಗಿದ ನೀರು ಹೊರಗೆ ಹೋಗಲು ಆಸ್ಪದವಿಲ್ಲದ ಕಾರಣ ಮನೆಗಳು ದ್ವೀಪದಂತಾಗುತ್ತವೆ. ಇದಲ್ಲದೆ ಪಕ್ಕದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯಗೂ ಸಾಕಷ್ಟು ನೀರು ಹರಿದು ಬಂದು ಶಾಲೆಯ ಆವರಣದಲ್ಲಿಯೂ ಸಾಕಷ್ಟು ನೀರು ಸಂಗ್ರಹವಾಗಿತ್ತು. ಆದ್ದರಿಂದ ಈ ನಿಟ್ಟಿನಲ್ಲಿ ಪ.ಪಂ ಆಡಳಿತ ಮಂಡಳಿ ತುರ್ತಾಗಿ ನೀರು ಸರಾಗವಾಗಿ ಮುಂದಕ್ಕೆ ಹರಿಯುವಂತೆ ಮಾಡಬೇಕು ಎಂದು ಅಲ್ಲಿನ ಮುಖಂಡರಾದ ಸೋಮು ದೇವೂರ, ಶಿವರಾಜ ತಳವಾರ,ಕಲ್ಮೇಶ ಬುದ್ನಿ,ಪಿಂಟೂ ಬಾಸುತ್ಕರ್ ಸೇರಿದಂತೆ ಹಲವಾರು ಜನ ಮುಖಂಡರು ಆಗ್ರಹಿಸಿದ್ದಾರೆ.