ಕಾರವಾರ: ಅರಬ್ಬೀ ಸಮುದ್ರದ ದೇವಗಡ ಲೈಟ್ ಹೌಸ್ ದ್ವೀಪದಲ್ಲಿ ಕೋರಲ್ ಪತ್ತೆ

ನಾಗರಾಜ್ ಹರಪನಹಳ್ಳಿ

ಕಾರವಾರ 14: ನಗರದಿಂದ ಐದು ಕಿ.ಮೀ. ಅರಬ್ಬೀ ಸಮುದ್ರದಲ್ಲಿ ಪಶ್ಚಿಮಕ್ಕೆ ಪಯಣಿಸಿದರೆ ಸಿಗುವ ದ್ವೀಪ ದೇವಗಡ ಲೈಟ್ಹೌಸ್ನ ಸಮೀಪ ಮುಳುಗಿದ ಹಡಗಿನ ಅವಶೇಷದಲ್ಲಿ ಹವಳ ಬೆಳದಿರುವುದು ಸ್ಕೂಬ್ ಡೈವಿಂಗ್ ಮಾಡುವಾಗ ಪತ್ತೆಯಾಗಿದೆ. ನೇತ್ರಾಣಿ ಸ್ಕೂಬ್ ಟೀಮ್ನ ಮುಳುಗು ತಜ್ಞರು ಸ್ಕೂಬಾ ಮಾಡುವಾಗ 4 ಪ್ರಬೇಧದ  ಕೋರಲ್ (ಹವಳ) ಪ್ರಬೇಧ ಬೆಳೆಯುತ್ತಿರುವುದು ಗಮನಿಸಿ ಸಮುದ್ರದಾಳದಿ ಬಳಸುವ ಕ್ಯಾಮಾರ ಬಳಸಿ, ಹವಳದ ಚಿತ್ರಗಳನ್ನು ತೆಗೆದಿದ್ದಾರೆ. 

ನೇತ್ರಾಣಿ ದ್ವೀಪದ ಸುತ್ತು ಇರುವ ಅಪರೂಪದ ಬಣ್ಣಬಣ್ಣದ ಮೀನಿನ ಪ್ರಬೇಧ ಕಾರವಾರ ಬಳಿ ಸಮುದ್ರದ ದ್ವೀಪದಲ್ಲಿ ಇಲ್ಲವಾದರೂ ಹವಳ ಪ್ರಬೇಧ ಬೆಳೆಯುವ ಸಮುದ್ರ ತಳದ ವಾತಾವರಣ ಇರುವುದು ಸ್ಪಷ್ಟವಾಗಿದೆ. 2 ಜೂನ್  2006ರಲ್ಲಿ ದೇವಗಡ ಲೈಟ್ ಹೌಸ್ ಬಂಡೆಗೆ ಬಡಿದು ವಾಣಿಜ್ಯ ಹಡಗು ಓಶಿಯನ್ ಸೆರಾಯ್ ಮುಳುಗಿತ್ತು. ಅದರ ಅವಶೇಷಗಳನ್ನು ಕತ್ತರಿಸಿ ತೆಗೆಯಲಾಯಿತಾದರೂ, ಅಳಿದುಳಿದ ಹಡಗಿನ ಅವಶೇಷಗಳಲ್ಲಿ ನಾಲ್ಕು ಪ್ರಬೇಧದ ಕೋರಲ್ ಬೆಳೆದಿವೆ. ಮುತ್ತು ಹವಳ ಪ್ರಬೇಧ ಉತ್ಪಾದಿಸುವ ಸಮುದ್ರ ಜೀವಿಗಳು ಇಲ್ಲಿ ಇಲ್ಲ. ನೇತ್ರಾಣಿ ದ್ವೀಪದಲ್ಲಿ ಇರುವಂತೆ ಆಳ ಮತ್ತು ಪ್ರಶಾಂತ ಸಮುದ್ರದಾಳ ಲೈಟ್ ಹೌಸ್ ದ್ವೀಪದ ಬಳಿ ಇಲ್ಲ. ಕಾರವಾರ ವಾಣಿಜ್ಯ ಬಂದರಿಗೆ ಬರುವ ಬೃಹತ್ ವಾಣಿಜ್ಯ ಹಡಗುಗಳು ದೇವಗಡ ದ್ವೀಪದ ಪಕ್ಕದಲ್ಲೇ ಹಾದು ಬರುತ್ತವೆ. ಅಲ್ಲದೇ ಕಾಳಿ ನದಿಯಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೀರಿನ ಜೊತೆ ಬರುವ ಗಟ್ಟಿ ಮತ್ತು ಭಾರದ ಮಣ್ಣು ಲೈಟ್ ಹೌಸ್ ಇರುವ ದ್ವೀಪದ ಸುತ್ತ ಉಳಿದುಕೊಳ್ಳುತ್ತದೆ. 

ಹಗುರ ಮಣ್ಣು ದೇವಗಡ ದ್ವೀಪದಿಂದ ಮುಂದೆ ಹೋಗುತ್ತದೆ. ಹಾಗಾಗಿ ಹತ್ತು ವರ್ಷಗಳಿಗೆ ಒಮ್ಮೆ ಬಂದರು ಇಲಾಖೆ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಡ್ರಜ್ಜಿಂಗ್ ಸಹ ಮಾಡುತ್ತದೆ. ವಾಸ್ತವವಾಗಿ ಕೋರಲ್ ಸಮುದ್ರದಾಳದಲ್ಲಿ ಬೆಳೆಯುತ್ತದೆ. ಅದಕ್ಕೆ ಕಲ್ಲು ಬಂಡೆಯ ಆಳ ಪ್ರದೇಶ ಇರುವ ದ್ವೀಪಗಳು ಬೇಕು. ಕೋರಲ್ ನಲ್ಲಿ ನೂರಾರು ಪ್ರಬೇಧಗಳಿವೆ. ನೇತ್ರಾಣಿಯಲ್ಲಿ 16 ರಿಂದ 17 ಪ್ರಬೇಧದ ಕೋರಲ್ಗಳು ಬೆಳೆದಿವೆ. ಮತ್ತು ಅಲ್ಲಿ ಮೀನಿನ ಜೀವ ವೈವಿಧ್ಯವೇ ಹೇರಳವಾಗಿ ಕಾಣಸಿಗುತ್ತದೆ. ಇಲ್ಲಿ ಡಾಲ್ಫಿನ್ ನಿಂದ ಹಿಡಿದು ಕಿಂಗ್ ಫಿಶ್ ಸೇರಿದಂತೆ ಹಲವು ದೊಡ್ಡ ದೊಡ್ಡ ಮೀನುಗಳು ಆಹಾರ ಅರಸಿ ಬರುತ್ತವೆ. ಹಾಗಾಗಿ ಕೋರಲ್ ಬೆಳೆಯುವ ಪ್ರದೇಶ ಸಮದ್ರದಾಳದ ಅತ್ಯಂತ ಸೂಕ್ಷ್ಮ ಜೀವವೈವಿಧ್ಯತಾ ತಾಣವಾಗಿದೆ ಎಂದು ಕಾರವಾರದಲ್ಲಿನ ಕನರ್ಾಟಕ ವಿ.ವಿ.ಸಾಗರ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ವಿಜ್ಞಾನಿ ಡಾ.ಶಿವಕುಮಾರ್ ಹರಗಿ ವಿವರಿಸಿದರು. 

ಕೋರಲ್ ಬೆಳೆಯುವುದು ಹೀಗೆ:

ಕೋರಲ್ಗಳು ತಾಣವನ್ನು ಕನ್ನಡದಲ್ಲಿ ಹವಳದ ದಿಬ್ಬಗಳು ಎಂದು ಕರೆಯಲಾಗುತ್ತದೆ. ಕೋರಲ್ಸ  ಸಮುದ್ರದಾಳದಲ್ಲಿ ಬಂಡೆಗಲ್ಲು ಹಾಗೂ ದ್ವೀಪದ ಸುತ್ತಮುತ್ತ ಪ್ರಶಾಂತ ವಾತಾವರಣದಲ್ಲಿ ಬೆಳೆಯುವ ಸಮುದ್ರ ಜೀವಿಗಳು. ಸಮುದ್ರದಲ್ಲಿನ ಕ್ಯಾಲ್ಸಿಯಂ ಕಾಬರ್ೋನೇಟ್ ಬಳಸಿಕೊಂಡು ಬೆಳೆಯುವ ಜೀವಿಯೇ ಕೋರಲ್ . ನದಿಯ ಆಳ, ಕಾಂಡ್ಲಾ ಬುಡದಲ್ಲಿ ಚಿಪ್ಪೆ, ಚಿಪ್ಪೆ ಕಲ್ಲಿನ ಜೀವಿಯ ತರಹ ಆಳ ಸಮುದ್ರದ ದ್ವೀಪ ಬಂಡೆಗಳಲ್ಲಿ ಕೋರಲ್ಸ ಬೆಳೆಯುತ್ತವೆ. ಕೋರಲ್ ಅತ್ಯಂತ ಸೂಕ್ಷ್ಮ ಜೀವಿ. ಇವು ಗುಂಪು ಗುಂಪಾಗಿ ವಾಸಿಸುತ್ತವೆ ಮತ್ತು ಬೆಳೆಯುತ್ತವೆ. ಇಂತಹ ಅಪರೂಪದ ಕೋರಲ್ಸ್ ಕಾರವಾರದ ದೇವಗಡ ದ್ವೀಪದ ಬಳಿ ಮುಳುಗಿದ ಹಡಗಿನ ಅವಶೇಷಗಳಲ್ಲಿ ಬೆಳೆದಿರುವುದು ಉತ್ತಮ ಬೆಳವಣಿಗೆ. 

ಪ್ರವಾಸಿಗರ ಅಚ್ಚು ಮೆಚ್ಚು:

ಸ್ಕೂಬ್ ಡೈವಿಂಗ್ ಇವೆಂಟ್ ಸಾಹಸಿ ಪ್ರವಾಸಿಗರನ್ನು ಆಕಷರ್ಿಸುತ್ತಿದ್ದು, ಇದು ಈಗ ಕಾರವಾರದ ದೇವಗಡ ದ್ವೀಪ ಲೈಟ್ ಹೌಸ್ ಬಳಿ ಸಹ ಪ್ರಾರಂಭವಾಗಿದೆ. ನೇತ್ರಾಣಿ ಅಡ್ವೆಂಚರ್ಸ ಸ್ಕೂಬ್ ಇವೆಂಟ್ನ್ನು ಪ್ರವಾಸಿಗರಿಗೆ ಮಾಡಿಸುತ್ತಿದ್ದಾರೆ. ಸ್ಕೂಬಾ ಮಾಡುವ ಪ್ರವಾಸಿಗರಿಗೆ ಸಮುದ್ರದಾಳದ ಹವಳ ಜೀವಿಗಳನ್ನು ನೋಡುವ ಅವಕಾಶ ದಕ್ಕಿದೆ. ಹಾಗಾಗಿ ನೇತ್ರಾಣಿಯಂತೆ ಇಲ್ಲಿಗೂ ಸಹ ಪ್ರವಾಸಿಗರು ಆಗಮಿಸತೊಡಗಿದ್ದಾರೆ. ಇಲ್ಲಿನ ದ್ವಿಪದ ಸುತ್ತ 9 ಮೀಟರ್ ನಿಂದ 12 ಮೀಟರ್ ಆಳದ ಸಮುದ್ರವಿದ್ದು, ಇಷ್ಟು ಆಳಕ್ಕೆ ಆಕ್ಸಿಜನ್ ಸಿಲೆಂಡರ್ ಕಟ್ಟಿಕೊಂಡು ಸ್ಕೂಬಾ ಮಾಡಿ ಸಸ್ಯ ರೂಪದ ಕೋರಲ್ ನೋಡಿ ಬರತೊಡಗಿದ್ದಾರೆ.