ಕರ್ನಾಟಕ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳ ಭೇಟಿ
ಹಾವೇರಿ 12: ಕರ್ನಾಟಕ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವೀರ್ಪ ಅವರು ಹಾವೇರಿ ನಗರದ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಬುಧವಾರ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ಮಾಡಿದರು, ಬಯೋಮೆಟ್ರಿಕ್ ಹಾಜರಾತಿ, ಕ್ಯಾಶ್ ರಿಜಿಸ್ಟರ್ ಹಾಗೂ ಹಿಂದಿನ 3 ತಿಂಗಳ ಬಯೋಮೇಟ್ರಿಕ್ ಹಾಜರಾತಿ ನೀಡುವಂತೆ ಸೂಚಿಸಿದರು. ಆಸ್ಪತ್ರೆಯ ಶೌಚಾಲಯಗಳು ತುಂಬಾನೇ ಗಲೀಜಾಗಿರುವುದನ್ನು ಕಂಡು ಅಸಮಧಾನ ವ್ಯಕ್ತಪಡಿಸಿದರು. ರೋಗಿಗಳಿಗೆ ನೀಡಿರುವ ಮೆಡಿಸಿನ್ ಪರೀಶೀಲನೆ ಮಾಡಿ, ಇದು ಆಸ್ಪತ್ರೆಯವರು ನೀಡಿರುವುದಾ ಅಥವಾ ನೀವೇ ತೆಗೆದುಕೊಂಡು ಬಂದಿರುವಿರಾ ಎಂದು ರೋಗಿಗಳಿಗೆ ಕೇಳಿ ಮಾಹಿತಿ ಪಡೆದುಕೊಂಡರು. ರೋಗಿಗಳೊಂದಿಗೆ ಸಮಾಲೋಚನೆ ಮಾಡಿ ಆರೋಗ್ಯ ಕಾಯ್ದುಕೊಳ್ಳುವಂತೆ ತಿಳಿ ಹೇಳಿದರು. ಜಿಲ್ಲಾ ಆಸ್ಪತ್ರೆ ಹೋರ ರೋಗಿಗಳ ವಿಭಾಗದ ಆರ್ಥೋಪಿಡಿಕ್ ಓಪಿಡಿ, ಸರ್ಜಿಕಲ್, ಫಿಜಿಯೋಥೆರಫಿ, ಮಹಿಳಾ ಹಾಗೂ ಪುರುಷರ ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಮಾನಸಿಕ ಹೊರ ರೋಗಿಗಳ ವಿಭಾಗ, ನೇತ್ರ ಹೊರರೋಗಿಗಳ ವಿಭಾಗ, ಸಾರ್ವಜನಿಕ ಶೌಚಾಲಯ ಹಾಗೂ ಓಷಧಿ ವಿತರಣಾ ಕೊಠಡಿಗಳಿಗೆ ಭೇಟಿ ನೀಡಿ ಪರೀಶೀಲಿಸಿದರು. ಓಷಧಿ ದಾಸ್ತಾನು ಸ್ವೀಕಾರ, ಓಷಧಿ ವಿತರಣೆ ವಿವರಣೆಯನ್ನು ಸಂಬಂಧಿಸಿದ ವಹಿಯಲ್ಲಿ ಸಮಪರ್ಕವಾಗಿ ನಮೂದಿಸಬೇಕು. ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇರುವ ಓಷಧಿಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ಪೂರೈಕೆ ಮಾಡಲು ಸೂಚಿಸಿದರು. ಓಷಧಿಗಳ ಸಂಗ್ರಹಣೆ ಪರೀಶೀಲನೆ, ಅವಧಿ ಮೀರಿರುವ ಓಷಧಿಗಳನ್ನು ತೆಗೆದುಹಾಕಬೇಕು, ಆಗಾಗ ಓಷಧಿಗಳನ್ನು ಪರೀಶೀಲಿಸುತ್ತಿರಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ವೈದ್ಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿ, ಆಸ್ಪತ್ರೆಗೆ ಬರುವಂತ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಅವರಿಗೆ ಸಹಾಯ ಮಾಡುಬೇಕು. ಅವರನ್ನು ಅನ್ಯತಾ ಭಾವದಿಂದ ನೋಡಬಾರದು, ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ಬಡವಾರಗಿದ್ದು ಅವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು. ಆ ಕಾರಣಕ್ಕಾಗಿ ತಾವೆಲ್ಲರೂ ಜವಾಬ್ದಾರಿಯಾಗಿ ಕೆಲಸ ಮಾಡುವಂತೆ ತಿಳಿಸಿದರು. ರಕ್ತ ಸಂಗ್ರಹಣೆ ವಿಭಾಕ್ಕೆ ಭೇಟಿ ನೀಡಿ, ರಕ್ತ ಸಂಸ್ಕರಣ ಘಟಕದ ಯಂತ್ರಗಳ ಖುದ್ದು ಪರೀಶೀಲನೆ ಮಾಡಿದರು. ಡಯಾಲಿಸಿಸ್ ಚಿಕಿತ್ಸಾ ವಿಭಾಗ, ಹೊರ ರೋಗಿಗಳ ವಿಭಾಗ, ಕ್ಷ ಕಿರಣ್ ವಿಭಾಕ್ಕೆ ಭೇಟಿ ನೀಡಿದರು. ಹೊರ ರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಕಡತ ಪರೀಶೀಲಿಸಿ ಕಳೆದ ಮೂರು ತಿಂಗಳಿಂದ ಯಾವುದೇ ಮಾಹಿತಿ ನಮೂದಿಸದೆ ಇರುವುದನ್ನು ಕಂಡು ಅಸಮಧಾನ ವ್ಯಕ್ತ ಪಡಿಸಿದರು. ತಹಶೀಲ್ದಾರ ಕಚೇರಿಗೆ ಭೇಟಿ: ತಹಶಿಲ್ದಾರ ಕಚೇರಿಗೆ ಭೇಟಿ ನೀಡಿ, ಅಲ್ಲಿನ ನೊಂದಣಿ ಮತ್ತು ಮುದ್ರಾಂಕ ಇಲಾಖೆ, ಭೂಮಾಪನ ಇಲಾಖೆ, ನಗರ ಮಾಪನ ಇಲಾಖೆ, ಭೂಮಿ ಶಾಖೆ ಹಾಗೂ ಸಿಬ್ಬಂದಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಕ್ಯಾಶ್ ರಿಜಿಸ್ಟರ್, ಹಾಜರಾತಿ, ಮೊಮೆಂಟ್ ರಿಜಿಸ್ಟರ್ ಹಾಗೂ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳು, ವಿಲೇವಾರಿ ಆಗದೆ ಇರುವ ಅರ್ಜಿಗಳು ಮತ್ತು ವಿಲೇವಾರಿಯಾದ ಅರ್ಜಿಗಳ ಮಾಹಿತಿಯನ್ನು ಸಿಬ್ಬಂದಿಗಳಿಂದ ಪಡೆದು ಪರೀಶೀಲಿಸಿದರು. ಉಪ ನೋಂದಣಾಧಿಕಾರಿ ಕಚೇರಿ ಪರೀಶೀಲನೆ ವೇಳೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಬ್ಬಿಣದ ಲಾಕರ್ ಕೀಲಿ ತೆರೆದು ಅನಧೀಕೃತ ನಗದು ದೊರೆತರೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟೀಸ್ ನೀಡುವಂತೆ ಸೂಚಿಸಿದರು. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಎಲ್ಲವೂ ಆನ್‌ಲೈನ್ ವಹಿವಾಟು ಇರುವುದರಿಂದ ಯಾವುದೇ ನಗದು ವ್ಯವಹಾರ ನಡೆಯುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಗದು ರಿಜಿಸ್ಟರನಲ್ಲಿ ಸಿಬ್ಬಂದಿಗಳು ಕಚೇರಿಗೆ ಬೆಳಿಗ್ಗೆ ಬಂದಾಗ ಅವರ ಬಳಿ ಇರುವ ಹಣದ ಮಾಹಿತಿಯನ್ನು ನಗದುವಹಿ ರಿಜಿಸ್ಟರನಲ್ಲಿ(ಕ್ಯಾಶ ರಜಿಸ್ಟರ್) ನಮೂದಿಸಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಸಿಬ್ಬಂದಿಗಳ ಬಳಿ ಇರುವ ಹಣದ ಮಾಹಿತಿ ನಮೂದಿಸಿರುವುದಿಲ್ಲ. ಬೆಳಿಗ್ಗೆ ಇದ್ದಷ್ಟೇ ಹಣ ಸಂಜೆ ಕರ್ತವ್ಯ ಮುಗಿಸಿ ತೆರಳುವಾಗಲು ಅದೇ ಮೊತ್ತವನ್ನು ರಿಜಿಸ್ಟರನಲ್ಲಿ ನೋಂದಾಯಿಸಿದ್ದು ಉಪ ಲೋಕಾಯುಕ್ತರ ಸಂಶಯಕ್ಕೆ ಕಾರಣವಾಯಿತು. ಹಾಜರಾತಿ ಬುಕ್‌ನಲ್ಲಿ ಸರಿಯಾಗಿ ಹಾಜರಾತಿ ಹಾಕದಿರುವುದು ಕಂಡುಬಂತು, ಸಿಬ್ಬಂದಿಗಳಿಗೆ ರಜೆ ನೀಡುವಾಗ ಕಡ್ಡಾಯವಾಗಿ ರಜೆ ಅರ್ಜಿ ಪಡೆದು ನೀಡಬೇಕು ಎಂದು ತಹಶೀಲ್ದಾರರಿಗೆ ತಿಳಿಸಿದರು. ತಹಶೀಲ್ದಾರ ಕಾರ್ಯಲಯದಲ್ಲಿ ಖರೀದಿ ಪತ್ರ, ಕ್ರಾಪ್ ಲೋನ್ ಮುಂತಾದ ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡಲು ದುಡ್ಡು ಕೊಡಲೇ ಬೇಕು ಎಂದು ಸಾರ್ವಜನಿಕರಿಂದ ದೂರು ವ್ಯಕ್ತವಾಗಿದೆ. ಹಾಗೂ ಏಜೆಂಟರ ಮೂಲಕ ಕೆಲಸ ಮಾಡಿಕೊಡುವ ಪದ್ಧತಿ ಇದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.