ಕನಕದಾಸ :ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಹರಿದಾಸರಾಗಿ ತಮ್ಮ ಕೀರ್ತನೆಗಳ ಮೂಲಕ ಅಂಕುಡೊಂಕುಗಳನ್ನು ತಿದ್ದಿದ ಒಬ್ಬ ಮಹಾನ ಸಂತರಾಗಿದ್ದಾರೆ
ಕನಕದಾಸ :ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಹರಿದಾಸರಾಗಿ ತಮ್ಮ ಕೀರ್ತನೆಗಳ ಮೂಲಕ ಅಂಕುಡೊಂಕುಗಳನ್ನು ತಿದ್ದಿದ ಒಬ್ಬ ಮಹಾನ ಸಂತರಾಗಿದ್ದಾರೆ
ಕೊಪ್ಪಳ16: ಕರ್ನಾಟಕವು ವೈವಿದ್ಯತೆಗಳಿಂದ ಕೂಡಿದ ನಾಡಾಗಿದ್ದು ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಹಲವಾರು ಸಾಮ್ರಾಜ್ಯಗಳು, ರಾಜವಂಶಸ್ಥರು, ಸಂತ ಶರಣರು ಮತ್ತು ದಾರ್ಶನಿಕರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದಾಗಿದೆ. ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿಯೂ ತನ್ನದೇಯಾದ ರೀತಿಯಲ್ಲಿ ಹೆಸರು ಮಾಡಿದ ನಾಡು ನಮ್ಮದಾಗಿದೆ. ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ ಶರಣರು ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಹರಿದಾಸರಾಗಿ ತಮ್ಮ ಕೀರ್ತನೆಗಳ ಮೂಲಕ ಅಂದಿನ ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದಿದ ಒಬ್ಬ ಮಹಾನ ಸಂತರಾಗಿದ್ದಾರೆ.
ಕನಕದಾಸರ ತಂದೆಯವರು ಅಂದಿನ ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶ 78 ಗ್ರಾಮಗಳ ಹೋಬಳಿ. ಈ ಪ್ರದೇಶ ಈಗ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಬಂಕಾಪುರ ಪ್ರದೇಶದಲ್ಲಿದೆ. ಇದರ ನಾಡಗೌಡಿಕೆ ಮತ್ತು ದಂಡನಾಯಕ (ಸೈನ್ಯದ ದಳಪತಿ) ಅಧಿಕಾರ ಬೀರ್ಪನಿಗೆ ಇತ್ತು. ಬಚ್ಚಮ್ಮ ಇವರ ಧರ್ಮಪತ್ನಿಯಾಗಿದ್ದರು. ಈ ದಂಪತಿಗೆ ಹಲವಾರು ವರ್ಷಗಳವರೆಗೆ ಸಂತಾನ ಭಾಗ್ಯ ಇರದ ಕಾರಣ ಇವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಂತರ ಅವನ ವರ್ರಸಾದದಿಂದ ಜನಿಸಿದ ಮಗುವಿಗೆ ತಿಮ್ಮಪ್ಪನೆಂದು ನಾಮಕರಣ ಮಾಡಿದ್ದರು.
ಬೀರ್ಪ ತನ್ನ ಮಗನ ವಿದ್ಯಾಭ್ಯಾಸಕ್ಕೆ ಸಕಲ ಸೌಕರ್ಯಗಳನ್ನು ಒದಗಿಸಿ ಕತ್ತಿವರಸೆ, ಕುಸ್ತಿ, ಅಶ್ವವಿದ್ಯೆ, ಭೇಟೆಯಾಡುವುದು ಹೀಗೆ ಹಲವಾರು ಯುದ್ಧ ಕೌಶಲ್ಯಗಳ ತರಬೇತಿಯನ್ನು ಕಲಿಸಿದ್ದನು. ಆಕಸ್ಮಿಕವಾಗಿ ನಡೆದ ಯುದ್ಧದಲ್ಲಿ ಬೀರ್ಪನು ಮೃತನಾದಾಗ ತನ್ನ ಚಿಕ್ಕವಯಸ್ಸಿನಲ್ಲಿಯೆ ದಂಡನಾಯಕನ ಅಧಿಕಾರವನ್ನು ತಿಮ್ಮಪ್ಪ ವಹಿಸಿ ಕೊಳ್ಳಬೇಕಾಯಿತು.
ಒಮ್ಮೆ ತಿಮ್ಮಪ್ಪನ ಕನಸಿನಲ್ಲಿ ಆದಿಕೇಶವನು ಬಂದು ಹೇಳಿದ ವಾಣಿಯಂತೆ ತನ್ನ ಊರಿನ ನಿರ್ಲಕ್ಷಿತ ಸ್ಥಳವೊಂದರಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ಆದಿಕೇಶವನ ವಿಗ್ರಹವನ್ನು ಕಾಗಿನೆಲೆಯಲ್ಲಿ ಪ್ರತಿಷ್ಠಾಪಿಸಿದನು. ಇದರಿಂದ ತಿಮ್ಮಪ್ಪನ ಕೀರ್ತಿ ಮತ್ತಷ್ಟು ಹೆಚ್ಚಾಯಿತು. ಇದನ್ನು ತಿಳಿದ ಅಂದಿನ ವಿಜಯನಗರ ಸಾಮ್ರಾಜ್ಯದ ಅರಸ ವೀರನರಸಿಂಹನು ತಿಮ್ಮಪ್ಪನಿಗೆ ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕ( ಸೈನ್ಯದ ದಳಪತಿ)ನ್ನಾಗಿ ನೇಮಿಸಿದ್ದನು.
ಒಮ್ಮೆ ಭೂಮಿ ಅಗೆಯುತ್ತಿದ್ದಾಗ ತಿಮ್ಮಪ್ಪನಿಗೆ ನಿಧಿ (ಕನಕ) ಸಿಗುತ್ತದೆ. ಅದನ್ನು ದೀನ, ದುರ್ಬಲ ಮತ್ತು ಬಡ ಜನರಿಗೆ ಹಂಚಿ ಜನಾನುರಾಗಿಯಾಗಿದ್ದರಿಂದ ತಿಮ್ಮಪ್ಪ ಮುಂದೆ ಕನಕನಾಯಕನೆಂದು ಪ್ರಚುರಗೊಂಡನೆಂದು ಹೇಳಲಾಗುತ್ತದೆ. ಕಾಗಿನೆಲೆಯಲ್ಲಿ ಪ್ರತಿಷ್ಠಾಪಿತವಾದ ಆದಿಕೇಶವನ ಇಚ್ಚೆಯಂತೆ ದಾಸನಾಗಲು ಕನಕನು ಹಿಂಜರಿಯುತ್ತಿದ್ದನು. ಆದರೆ ಕನಕನು ಕದನವೊಂದರಲ್ಲಿ ಶತೃವಿನ ಹೊಡೆತಕ್ಕೆ ಸಿಕ್ಕು ಅರೆಜೀವವಾಗಿ ಬಿದ್ದ ಸಮಯದಲ್ಲಿ ಆದಿಕೇಶವನ ದೈವವಾಣಿಯಾಗಿ ನನ್ನ ಬಳಿ ಬಾ ಎಂದಾಗ ಆ ಆದೇಶವನ್ನು ಸ್ವೀಕರಿಸಿ, ದಾಸನಾಗಲು ಸಮ್ಮತಿಸಿ ಮುಂದೆ ಕನಕನಾಯಕ ಕನಕದಾಸನಾದನು.
ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಯರ ಮಹಿಮೆಯನ್ನು ಕೇಳಿದ್ದ ಕನಕದಾಸರು ಅವರ ಶಿಷ್ಯತ್ವವನ್ನು ಪಡೆದು ಗುರುಮಂತ್ರವನ್ನು ಸ್ವೀಕರಿಸಿದ್ದರು. ತಿರುಪತಿಯಿಂದ ಉಡುಪಿಗೆ ಹೋದ ಕನಕದಾಸರು ಅಲ್ಲಿ ಅವರಿಗೆ ಕೆಳವರ್ಗದವನೆಂಬ ಕಾರಣಕ್ಕಾಗಿ ಶ್ರೀಕೃಷ್ಣನ ದೇವಾಲಯ ಪ್ರವೇಶವನ್ನು ನಿರ್ಬಂಧಿಸಿದಾಗ ಗರ್ಭ ಗೃಹದ ಹಿಂಬದಿಗೆ ಬಂದು ಕೃಷ್ಣನ ದರ್ಶನಕ್ಕಾಗಿ ಪ್ರಾರ್ಥಿಸಿದಾಗ ಅವರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನು ಹಿಂಭಾಗದ ಗೋಡೆ ಬಿರಿದು, ಪೂರ್ವಾಭಿಮುಖವಾಗಿದ್ದ ಕೃಷ್ಣನ ವಿಗ್ರಹ ಪಶ್ಚಿಮಕ್ಕೆ ತಿರುಗಿ ನಿಂತಿತಂತೆ. ಅದು ಇಂದಿಗೂ ಕನಕನಕಿಂಡಿ ಎಂದೇ ಪ್ರಸಿದ್ದವಾಗಿದೆ.
ಕನಕದಾಸರು ಅಂದು ಜಟಿಲವಾಗಿ ಬೇರೂರಿದ್ದ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಲು ಹರಿಭಕ್ತಸಾರ, ರಾಮಧ್ಯಾನಚರಿತೆ, ಕೃಷ್ಣಚರಿತೆ, ನಳಚರಿತೆ, ಮೋಹನತರಂಗಿಣಿ, ಕನಕಮುಂಡಿಗೆ, ನರಸಿಂಹ ಸ್ತೋತ್ರ ಹೀಗೆ ಹಲವಾರು ಕೃತಿಗಳನ್ನು ರಚಿಸುವ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಅವರು ಉತ್ತರ ಭಾರತದ ಪ್ರಸಿದ್ದ ಯಾತ್ರಾ ಸ್ಥಳಗಳಾದ ಗಯಾ, ಮಥುರಾ, ಕಾಶಿ, ದ್ವಾರಕಗಳ ತೀರ್ಥಯಾತ್ರೆಗೆ ಹೋದಾಗ ರಾಜಸ್ಥಾನದ ಅರಸ ರಾಣಾ ಪ್ರತಾಪಸಿಂಹನ ಅರಮನೆಯಲ್ಲಿ ತಂಗಿ ಆಧರಾತಿಥ್ಯವನ್ನು ಪಡೆಯುತ್ತಿದ್ದರು. ಇವರ ಪವಾಡವನ್ನು ಕಂಡ ಜೈಪುರದ ಅರಸ ರಾಣಾ ಪ್ರತಾಪಸಿಂಹನು ತನ್ನ ಅರಮನೆ ಆವರಣದಲ್ಲಿ ಕನಕ ಬೃಂದಾವನ ಮತ್ತು ಕನಕಕೊಳವನ್ನು ನಿರ್ಮಿಸಿ ಕನಕದಾಸರ ಆರಾಧ್ಯ ದೈವ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ.
ಕನಕದಾಸರ ಕುರಿತಾಗಿ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಅವರ ಜನ್ಮಸ್ಥಳ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿರುವ ಕನಕದಾಸರ ಸುಂದರ ಅರಮನೆ ಮತ್ತು ಕನಕ ಗುರುಪೀಠ ಕಾಗಿನೆಲೆಗಳು ಕನಕದಾಸರ ಪವಿತ್ರ ಹಾಗೂ ಐತಿಹಾಸಿಕ ಸ್ಥಳಗಳಾಗಿದ್ದು, ಇವುಗಳಿಗೆ ನಾವು ಒಮ್ಮೆಯಾದರು ಭೇಟಿ ನೀಡಲೇಬೇಕು. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಕರ್ನಾಟಕದಲ್ಲಿ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ನವೆಂಬರ್ 18 ರಂದು ಆಚರಿಸಲಾಗುತ್ತಿದೆ. ಕನಕದಾಸರ ಜಯಂತಿಯನ್ನು ಆಚರಿಸಿದರೆ ಸಾಲದು. ಅವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಮಹನೀಯರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ.