ನಾಲತ್ತವಾಡದ ವೀರೇಶ್ವರ ಶರಣರ ಜಯಂತ್ಯುತ್ಸವ ಹಾಗೂ ಮಹಾರಥೋತ್ಸವ ಕಾರ್ಯಕ್ರಮ
Jayanthyutsava and Maharathotsava program of Veereshwara Sharanar of Nalatthawada
ಗದಗ 23 : ಆಧುನಿನ ದಿನಮಾನವು ಎಐ ತಂತ್ರಜ್ಞಾನದತ್ತ ಹೊರಳುತ್ತಿದೆ. ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ಬದುಕುವಂತಾಗಿದ್ದು, ಸಮಯ ಸಿಕ್ಕಾಗೆಲ್ಲ ಶಿವಧ್ಯಾನ, ಪ್ರಾರ್ಥನೆ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವ ಮೂಲಕ ಸಂತೃಪ್ತಿ ಜೀವನ ನಡೆಸಬೇಕು ಎಂದು ಶಿವಕುಮಾರ ಶರಣರು ಹೇಳಿದರು.
ತಾಲೂಕಿನ ನರಸಾಪೂರ ಗ್ರಾಮದ ನಾಲತವಾಡ ವೀರೇಶ್ವರ ಶರಣರ ಮಠದಲ್ಲಿ ವೀರೇಶ್ವರ ಶರಣರ ಜಯಂತ್ಯುತ್ಸವ, ಮಹಾರಥೋತ್ಸವ ಹಾಗೂ ಚಂದ್ರಶೇಖರ ಶರಣರ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಅವಶ್ಯಕತೆಗನುಸಾರವಾಗಿ ಮೊಬೈಲ್ ಬಳಸಬೇಕು. ಆದರೆ, ಅಡುಗೆ, ಊಟ ಹಾಗೂ ವ್ಯವಹಾರ ಮಾಡುವಾಗಲೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮಾಡುವ ಕಾರ್ಯಗಳೂ ಅರ್ಥಹೀನಗೊಳ್ಳುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಪಂಚಾಕ್ಷರಿ ಮಂತ್ರ ಜಪಿಸುತ್ತ ಶ್ರೇಷ್ಠ ಭಾವನೆಯಿಂದ ಅಡುಗೆ ಮಾಡಿ ಊಟ ಮಾಡಿದಾಗ ಪ್ರಸಾದ ಸೇವಿಸಿದ ಅನುಭವವಾಗುತ್ತದೆ. ಮಾಡಿದ ಕೆಲಸಗಳೂ ಸಾರ್ಥಕಗೊಳ್ಳುತ್ತವೆ ಎಂದು ಹೇಳಿದರು.
ವರ್ಷ ಕಳೆದಂತೆ ಕುಟುಂಬದಲ್ಲಿ ಸಂಬಂಧಗಳು ಹಾಳಾಗತೊಡಗಿವೆ. ಆಸ್ತಿಗಾಗಿ ತಂದೆ-ತಾಯಿಯರನ್ನು ಪೀಡಿಸುವ ಘಟನೆಗಳು ನಡೆಯುತ್ತಿವೆ. ಮಕ್ಕಳಾದವರು ತಂದೆ-ತಾಯಿಯರನ್ನು ದೇವರಂತೆ ಕಂಡು ಅವರನ್ನೇ ಆಸ್ತಿಯನ್ನಾಗಿ ಕಾಣಬೇಕು. ಅವರ ಯೋಗಕ್ಷೇಮ ನೋಡಿಕೊಂಡು ಅವರ ಮಾರ್ಗದರ್ಶನದಲ್ಲಿ ಜೀವನ ನಡೆಸಿದಾಗ ಬಾಳು ಬಂಗಾರವಾಗುತ್ತದೆ ಎಂದು ಕಿವಿಮಾತು ಹೇಳಿದರು.
ವೀರೇಶ್ವರ ಶರಣರು ತಮ್ಮ ಕಾಯಕದ ಮೂಲಕ ಬಂದ ಹಣವನ್ನು ದಾಸೋಹ ನಡೆಸುತ್ತಿದ್ದರು. ನಂತರ ವೀರೇಶ್ವರ ಶರಣರ ಪ್ರೇರಣೆಯಿಂದ ಚಂದ್ರಶೇಖರ ಶರಣರು ನರಸಾಪೂರ ಗ್ರಾಮದಲ್ಲಿ 1974ರಲ್ಲಿ ವೀರೇಶ್ವರ ಶರಣರ ಮಠವನ್ನು ಸ್ಥಾಪಿಸಿ ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸುತ್ತ, ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತ ಶ್ರೀಮಠವನ್ನು ಮುನ್ನಡೆಸಿಕೊಂಡು ಬಂದರು. ಶ್ರೀಮಠದಲ್ಲಿ ಪ್ರತಿವರ್ಷ ವೀರೇಶ್ವರ ಶರಣರ ಜಯಂತ್ಯುತ್ಸವ ಹಾಗೂ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಅಡ್ನೂರು ದಾಸೋಹ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವೀರೇಶ್ವರ ಶರಣರು ಪ್ರತಿನಿತ್ಯ ಕೇವಲ ಐದು ಮನೆಗೆ ಭಿಕ್ಷೆಗೆ ಹೋಗುತ್ತಿದ್ದರು. ಭಿಕ್ಷೆಯಲ್ಲಿ ಬಂದ ಕಾಳುಕಡಿಗಳನ್ನು ಮೊದಲು ಜಂಗಮರಿಗೆ ಪ್ರಸಾದ ವಿತರಿಸಿ ಉಳಿದರೆ ಸ್ವೀಕರಿಸುತ್ತಿದ್ದರು, ಇಲ್ಲವಾದಲ್ಲಿ ಉಪವಾಸವಿರುತ್ತಿದ್ದರು. ಅಂತಹ ಮಹಾಮಹಿಮ ಶರಣರ ಜಯಂತ್ಯುತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮನುಷ್ಯನು ಇದ್ದುದರಲ್ಲೇ ತೃಪ್ತಿ ಹೊಂದಬೇಕು. ಇಲ್ಲದ್ದನ್ನು ಚಿಂತೆ ಮಾಡುತ್ತ ಕೊರಗುತ್ತ ಹೋದರೆ ಏನು ಸಿಗುವುದಿಲ್ಲ. ಭಗವಂತನ ಕಡೆ ನಮಗೆ ಚಿಂತನೆ ಇದ್ದಾಗ ಮಾತ್ರ ಬದುಕನ್ನು ಸಂತಸದಿಂದ ಸಾಗಿಸಬಹುದು. ಭಗವಂತನನ್ನು ಶ್ರದ್ಧೆಯಿಂದ ಸ್ಮರಣೆ ಮಾಡಿದಾಗ ಮತ್ತು ದಾನ, ಧರ್ಮ, ಪರೋಪಕಾರದಿಂದ ಮುಕ್ತಿ ಮಾರ್ಗವನ್ನು ಪಡೆಯಬಹುದು ಎಂದು ಹೇಳಿದರು.
ಧರ್ಮಸಭೆಗೂ ಮುನ್ನ ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ, ವೀರೇಶ್ವರ ಶರಣರ ಹಾಗೂ ಚಂದ್ರಶೇಖರ ಶರಣರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನಂತರ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು. ನಂತರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕಳಕಮಲ್ಲಯ್ಯ ಹಿರೇಮಠ, ಕೆ.ಎಸ್. ಹಿರೇಮಠ ಸೇರಿ ಅನೇಕರು ಇದ್ದರು. ಡಾಽ ಸುಜಾತಾ ಪಾಟೀಲ ಉಚಿತ ಆರೋಗ್ಯ ಶಿಬಿರ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 