ಇಸ್ರೇಲ್; ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಜಾಥಾ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ತೆಲ್ ಅವೀವ್, ಡಿ 1- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಜನರು ಕೇಂದ್ರ ತೆಲ್ ಅವೀವ್ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. 

  ನೇತನ್ಯಾಹು ವಿರುದ್ಧ  ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ಅವುಗಳು ವಿಚಾರಣೆ ಹಂತದಲ್ಲಿರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

  ನೇತನ್ಯಾಹು ವಿರುದ್ಧ ಅಧಿಕಾರ ದುರುಪಯೋಗಪಡಿಸಿಕೊಂಡು ಇತರರ ಮೇಲೆ ಪ್ರಭಾವ ಬೀರಿದ ಹಾಗೂ ದುಬಾರಿ ಕೊಡುಗೆಗಳನ್ನು ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸುದೀರ್ಘ ತನಿಖೆಯ ನಂತರ  ಅಲ್ಲಿನ ಅಟಾರ್ನಿ ಜನರಲ್ ಭ್ರಷ್ಟಾಚಾರ ಪ್ರಕರಣ ದಾಖಲಿಸಿದ್ದಾರೆ. 

  ಜಾಥಾದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ನೇತನ್ಯಾಹು ಸರ್ಕಾರ ಸಂಕಷ್ಟದಲ್ಲಿದ್ದು, ಡಿಸೆಂರಬ್ 11ರೊಳಗೆ ಬಲಪಂಥೀಯ ಆಡಳಿತ ಪಕ್ಷ ಲಿಕೂಡ್, ವಿಪಕ್ಷಗಳಾದ ಬ್ಲೂ ಮತ್ತು ವೈಟ್ ಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ವಿಫಲವಾದಲ್ಲಿ ಸರ್ಕಾರ ಪತನವಾಗುವ ಸಾಧ್ಯತೆಯಿದೆ. ಹಾಗಾದಲ್ಲಿ ಇದು ಒಂದೇ ಅವಧಿಯಲ್ಲಿ ನಡೆಯಲಿರುವ ಮೂರನೇ ಅಧ್ಯಕ್ಷೀಯ ಚುನಾವಣೆಯಾಗಲಿದೆ.