ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

International Women's Day celebration program at Sri Krishnadevaraya University, Vijayanagar

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ 

ಬಳ್ಳಾರಿ 13: ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಓದ್ಯೋಗಿಕವಾಗಿ ಅವಕಾಶಗಳನ್ನು ಸೃಷ್ಟಿಸಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ ಅವರು ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿರಿಸಿದ್ದರೂ, ಅವರನ್ನು ಹತ್ತಿಕ್ಕುವುದು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು. ಶಿಕ್ಷಣ ವಂಚಿತ ಪೋಷಕರ ಮಕ್ಕಳ ಶಿಕ್ಷಣಕ್ಕಾಗಿ ಶೇ.10 ಮೀಸಲಾತಿ ಸರ್ಕಾರ ಕಲ್ಪಿಸಿದೆ. ಇದರ ಸದುಪಯೋಗವಾಗಬೇಕು. ಮಹಿಳೆಯರು ಪ್ರಶ್ನಿಸುವ ಮನೋಭಾವ ಬೆಳಸಿಕೊಂಡಲ್ಲಿ ವೈಚಾರಿಕವಾಗಿ ಮುಂದೆ ಬರುತ್ತಾರೆ ಎಂದರು. ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್‌.ಎನ್‌.ರುದ್ರೇಶ್ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಗೆ ಸೀಮಿತವಾಗದೇ ಸಮಾಜಮುಖಿಯಾಗಿ ಬೆಳೆಯಬೇಕು. ಸಾವಿತ್ರಿಬಾಯಿ ಫುಲೆ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಮದರ್ ಥೆರೇಸಾ, ಅಕ್ಕಮಹಾದೇವಿಯವರ ಚಿಂತನೆಗಳು ಇಂದಿನ ಮಹಿಳೆಯರಿಗೆ ಅದರ್ಶವಾಗಬೇಕು ಎಂದು ಅಭಿಪ್ರಾಯಪಟ್ಟರು. ಸಮಾಜದ ವಿಜ್ಞಾನ ನಿಕಾಯದ ಡೀನರಾದ ಗೌರಿ ಮಾಣಿಕ್ ಮಾನಸ ಅವರು ಮಾತನಾಡಿ, ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪದಕ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಂತರದಲ್ಲಿ ಜನಪದ ಸಂಗೀತ, ಹಾಸ್ಯ ಕಾರ್ಯಕ್ರಮ ಜರುಗಿದವು. ಡಾ.ಹೆಚ್‌.ತಿಪ್ಪೇಸ್ವಾಮಿ ನಿರೂಪಿಸಿದರು. ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಡಾ.ಎನ್‌.ಎಂ. ಸಾಲಿ, ಡಾ.ಅಂಶುಮಾಲಿ, ಡಾ.ಗೋಪಾಲ್‌.ಎನ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.