ಇಂಡಸ್ ಟವರ್ಸ ಸಂಸ್ಥೆಯ ತಾಂತ್ರಿಕ ನೌಕರರ ವಜಾ: ನೌಕರರ ಧರಣಿ

ಇಂಡಸ್ ಟವರ್ಸ ಸಂಸ್ಥೆಯ ತಾಂತ್ರಿಕ ನೌಕರರ ವಜಾ: ನೌಕರರ ಧರಣಿ  Indus Towers technical employees dismissed: Employees hold sit-in

ಕಾರವಾರ 12: ಇಂಡಸ್ ಟವರ್ಸ ಸಂಸ್ಥೆ ತನ್ನ ತಾಂತ್ರಿಕ ನೌಕರರನ್ನು ವಜಾ ಮಾಡಿದ್ದನ್ನು ವಿರೋಧಿಸಿ, ಕೆಲಸ ಕಳೆದು ಕೊಂಡವರು ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧುವಾರ ಬೆಳಿಗ್ಗೆ ಯಿಂದ ಧರಣಿ ಆರಂಭಿಸಿದ್ದಾರೆ. ಭಾರತೀಯ ಪ್ರವೇಟ್ ಟೆಲಿಕಾಂ ಮಜ್ದೂರ್ ಸಂಘದ ಸದಸ್ಯರಾಗಿರುವ ಇಂಡಸ್ ಟವರ್ಸ ತಾಂತ್ರಿಕರು ಸಂಘಟನೆ ಮಾಡಿಕೊಂಡಿರುವುದನ್ನು ಇಂಡಸ್ ಟವರ್ಸ ಲಿಮಿಟೆಡ್ ವಿರೋಧ ಮಾಡುತ್ತಿದೆ. ಟೆಲಿಕಾಂ ಟವರ್ ನಲ್ಲಿ ಬಂಡವಾಳ ಹಾಕಿರುವ ಇಂಡಸ್ ಟವರ್ಸ , ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಟವರ್ಸ ಗುತ್ತಿಗೆದಾರರನ್ನು ಪ್ರತಿ ವರ್ಷ ಬದಲಿಸುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿರುವ ತಾಂತ್ರಿಕ ನೌಕರರ ಮೇಲೆ ದಬ್ಬಾಳಿಕೆ ಹೆಚ್ಚಿದೆ. ಇದನ್ನು ಪ್ರಶ್ನಿಸಿದರೆ ನೌಕರಿಯಿಂದ ವಜಾ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 280, ಉತ್ತರ ಕನ್ನಡ ಜಿಲ್ಲೆಯಲ್ಲಿ ಹದಿನೈದು ತಾಂತ್ರಿಕ ನೌಕರರು ಹಾಗೂ ಸಹಾಯಕ ಸಿಬ್ಬಂದಿ ನೌಕರಿ ಕಳೆದು ಕೊಂಡಿದ್ದು, ನ್ಯಾಯಾಯುತ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಕಾರ್ಮಿಕರ ಹಕ್ಕು ಮತ್ತು ನೌಕರಿ ಮರಳಿ ನೀಡಲು ಒತ್ತಾಯಿಸಿ ಅಧ್ಯಕ್ಷ ಮಹಮ್ಮದ್ ಜಾಫರ್ ದೊಡ್ಡವಾಡ, ಉಪಾಧ್ಯಕ್ಷ ಗಣೇಶ ನಾಯ್ಕ ಇವರ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ . ಟೆಲಿಕಾಂ ಮಜ್ದೂರ್ ಯುನಿಯನ್ ನಲ್ಲಿ ಇದ್ದ ಮಾತ್ರಕ್ಕೆ ನೌಕರಿ ಯಿಂದ ತೆಗೆಯಬಾರದು. ವಾರದ ರಜೆ, ಹಬ್ಬಗಳ ದಿನ,ರಾಷ್ಟ್ರೀಯ ದಿನಾಚರಣೆ ಗೆ ರಜೆ ನೀಡಬೇಕು. ದಿನದಲ್ಲಿ ಎಂಟು ತಾಸು ಕರ್ತವ್ಯಕ್ಕೆ ಮಿತಿ ಹಾಕಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ವೇತನ ಪರಿಷ್ಕರಣೆ ಆಗಬೇಕು. ವೈದ್ಯಕೀಯ ವೆಚ್ಚ ಹಾಗೂ ಅಪಘಾತ ವಿಮೆ ನೀಡಬೇಕು. ಕರ್ತವ್ಯದ ವೇಳೆ ನಿಧನರಾದರೆ 26 ಲಕ್ಷ ಪರಿಹಾರ ನೀಡಬೇಕು. ಫೀಲ್ಡ್‌ ಸಿಬ್ಬಂದಿಗೆ ಸುರಕ್ಷತಾ ಉಪಕರಣ ನೀಡಬೇಕು ಎಂದು ಆಗ್ರಹಿಸಿದರು. ಇಂಡಸ್ ಟವರ್ಸ ಎಲ್ಲಾ ಗುತ್ತಿಗೆದಾರ ಕಾರ್ಮಿಕರಿಗೆ ಕಾನೂನು ಬದ್ಧ ರಕ್ಷಣೆ ನೀಡಬೇಕು ಹಾಗೂ ಬಿಪಿಟಿಎಂಎಸ್ ಸಂಘಟನೆ ಜೊತೆ ಮಾತುಕತೆ ಆರಂಭಿಸಲು ಧರಣಿ ನಿರತರು ಇಂಡಸ್ ಟವರ್ಸ ಸಂಸ್ಥೆಯ ಮಾಲಕರು ಹಾಗೂ ಆಡಳಿತಾಧಿಕಾರಿಯನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಬೇಡಿಕೆಗಳ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮೂಲಕ ಇಂಡಸ್ ಟವರ್ಸ ಸಂಸ್ಥೆಗೆ ಸಲ್ಲಿಸಿದ್ದಾರೆ. ಧರಣಿಯಲ್ಲಿ ಪದಾಧಿಕಾರಿಗಳಾದ ಪ್ರಶಾಂತ ನಾಯ್ಕ, ಲೋಹಿತ್ , ರಾಮಾ ದೇವಾಡಿಗ ಸೇರಿದಂತೆ ನೊಂದ ಕಾರ್ಮಿಕರು ಭಾಗವಹಿಸಿದ್ದಾರೆ. ಧರಣಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.