ಭಾರತದ ಸಂವಿದಾನ ನಮಗೆ ಹಲವಾರು ಮೌಲ್ಯಗಳನ್ನು ನೀಡಿದೆ : ಸಾವಿತ್ರಿ ಕವಡಕಿ

ಭಾರತದ ಸಂವಿದಾನ ನಮಗೆ ಹಲವಾರು ಮೌಲ್ಯಗಳನ್ನು ನೀಡಿದೆ : ಸಾವಿತ್ರಿ ಕವಡಕಿ  Indian Constitution has given us many values: Savitri Kavadaki

ಹುಲಕೋಟಿ 27 :   ನಗರದ ಗಂಗಾಪೂರಪೇಟೆಯ ದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ  77ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.   ಶಾಲೆಯ ಆಡಳಿತಾಧಿಕಾರಿ ಸಾವಿತ್ರಿ ಕವಡಕಿ ಅವರು  ಮಾತನಾಡಿ,  ಪ್ರತಿ ವರ್ಷ ಜನವರಿ 26ರಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ದಿನದ ಮಹತ್ವ ಏನೆಂದರೆ, 1950ರ ಜನವರಿ 26ರಂದು ಭಾರತ ಸಂವಿಧಾನವು ಜಾರಿಗೆ ಬಂದು, ಭಾರತವು ಸಂಪೂರ್ಣ ಗಣರಾಜ್ಯ ರಾಷ್ಟ್ರವಾಯಿತು. ಈ ಮಹತ್ವದ ಸಂವಿಧಾನವನ್ನು ರೂಪಿಸುವಲ್ಲಿ ಡಾ. ಬಿ.ಆರ್‌. ಅಂಬೇಡ್ಕರ ಅವರ ನೇತೃತ್ವದಲ್ಲಿ ಅನೇಕ ಮಹಾನ್ ನಾಯಕರು ಅಪಾರ ಶ್ರಮ ವಹಿಸಿದ್ದಾರೆ. 

ನಮ್ಮ ಸಂವಿಧಾನವು ನಮಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ನ್ಯಾಯ ಎಂಬ ಮೌಲ್ಯಗಳನ್ನು ನೀಡಿದೆ. ಈ ಮೌಲ್ಯಗಳೇ ನಮ್ಮ ದೇಶದ ಅಡಿಪಾಯ. ವಿವಿಧ ಭಾಷೆ, ಧರ್ಮ, ಸಂಸ್ಕೃತಿ ಹೊಂದಿದ ಜನರು ಒಂದೇ ರಾಷ್ಟ್ರವಾಗಿ ಬದುಕಲು ನಮ್ಮ ಸಂವಿಧಾನವೇ ಮಾರ್ಗದರ್ಶಿಯಾಗಿದೆ. ಗಣರಾಜ್ಯೋತ್ಸವವು ಕೇವಲ ಒಂದು ಹಬ್ಬವಲ್ಲ, ಇದು ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವೂ ಹೌದು. ಹಕ್ಕುಗಳ ಜೊತೆಗೆ ಕರ್ತವ್ಯಗಳೂ ನಮ್ಮ ಮೇಲಿದೆ. ದೇಶದ ಕಾನೂನುಗಳನ್ನು ಪಾಲಿಸುವುದು, ಶಿಸ್ತು ಕಾಪಾಡುವುದು, ಪರಸ್ಪರ ಗೌರವಿಸುವುದು ಮತ್ತು ದೇಶದ ಏಕತೆಯನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ.

ಇಂದು ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ. ಈ ಪ್ರಗತಿಯಲ್ಲಿ ಯುವಜನಾಂಗದ ಪಾತ್ರ ಅತ್ಯಂತ ಮಹತ್ವದ್ದು. ನಾವು ಪ್ರಾಮಾಣಿಕತೆ, ಶ್ರಮ ಮತ್ತು ದೇಶಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಭಾರತವನ್ನು ಇನ್ನಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬಹುದು.ಈ ಪವಿತ್ರ ಸಂದರ್ಭದಲ್ಲಿ, ನಾವು ಎಲ್ಲರೂ ನಮ್ಮ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ, ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.  

 ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ಇಮರಾಪೂರ, ಕಾರ್ಯದರ್ಶಿ ಕವಿತಾ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಸಾಮಾಜಿಕ ಕಾರ್ಯಕರ್ತ ಹೀರಾಲಾಲ ಸಿಂಗ್ರಿ, ಮುಖ್ಯೋಪಾದ್ಯಾಯನಿ ಎಚ್‌.ಎಂ.ನದಾಫ್, ಸಹಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ಶೋಭಾ ಸಂಬರಗಿಮಠ, ಮಂಜುಳಾ ದಾಸರ, ಅಂಜಲಿ  ಕಲಾಲ, ಸಿಬ್ಬಂದಿ ಸೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.