ಮಹಿಳಾ ಸಾಂಸ್ಕೃತಿಕ ಹಬ್ಬ-2025” ಕಾರ್ಯಕ್ರಮವನ್ನು ಉದ್ಘಾಟನೆ

Inauguration of the “Women's Cultural Festival-2025” program

ಮಹಿಳಾ ಸಾಂಸ್ಕೃತಿಕ ಹಬ್ಬ-2025” ಕಾರ್ಯಕ್ರಮವನ್ನು ಉದ್ಘಾಟನೆ 

ವಿಜಯಪುರ, 08; ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಧ್ಯ. ಮಹಿಳೆ ಒಂದೇ ಕ್ಷೇತ್ರ ಅಲ್ಲದೇ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಇಂದು ಇಡೀ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ  ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು  ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ “ಮಹಿಳಾ ಸಾಂಸ್ಕೃತಿಕ ಹಬ್ಬ-2025” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಮಹಿಳಾ ವಿಶ್ವವಿದ್ಯಾನಿಲಯ ಮಹಿಳೆಯರ ಶಕ್ತಿಯನ್ನು ಗುರುತಿಸುವ ಹಾಗೂ ಅವರ ಸೌಭಾಗ್ಯವನ್ನು ಬೆಳೆಸುವ ಪ್ರಮುಖ ಕೇಂದ್ರವಾಗಿದೆ. ಇದು ಕೇವಲ ಶಿಕ್ಷಣ ನೀಡುವ ಕೇಂದ್ರವಷ್ಟೇ ಅಲ್ಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾಯತ್ತತೆ ಮತ್ತು ನಾಯಕತ್ವ ಗುಣಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಬೆಳೆಸುವ ಈ ಸಂಸ್ಥೆ, ಮಹಿಳೆಯರನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆೆ ಎಂದರು. ಸರ್ಕಾರವು ಈ ಮಹಿಳಾ ವಿಶ್ವವಿದ್ಯಾನಿಲಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಇನ್ನೂ ಹೆಚ್ಚಿನ ಹೆಣ್ಣುಮಕ್ಕಳು ಗುಣಾತ್ಮಕ ಶಿಕ್ಷಣ ಪಡೆದು, ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಲು ಸಾಧ್ಯ. ಸಮಗ್ರ ಸಮಾಜದ ಬೆಳೆವಣಿಗೆಗೆ ಮಹಿಳೆಯರ ಶಿಕ್ಷಣ ಅತ್ಯಗತ್ಯವಾಗಿರುವುದರಿಂದ, ಈ ವಿಶ್ವವಿದ್ಯಾನಿಲಯ ಮತ್ತಷ್ಟು ಬಲಪಡಿಸಲು ನಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.  ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಮಾತನಾಡಿ, ಮಹಿಳಾ ಸಬಲೀಕರಣವನ್ನು ವೃದ್ಧಿಸಲು ನಮ್ಮ ವಿಶ್ವವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ವರ್ಗ ನಿರಂತರ ಶ್ರಮವಹಿಸುತ್ತಿದ್ದು, ವಿದ್ಯಾರ್ಥಿನಿಯರು ನೀಡಲಾಗುವ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಮಗ್ರ ಅಭಿವೃದ್ಧಿಯತ್ತ ಮುಂದುವರಿಯಬೇಕು. ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಾ, ಮಹಿಳಾ ಶಕ್ತಿಯ ಮಹತ್ವವನ್ನು ಮತ್ತಷ್ಟು ದೃಢಪಡಿಸುತ್ತಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಜಿಲ್ಲಾ ಉಸ್ತುವಾರಿ ಸಚಿವರ ಮಾಧ್ಯಮ ಸಲಹೆಗಾರ ಮಹಾಂತೇಶ ಬಿರಾದಾರ, ಪತ್ರಕರ್ತ ಮಹೇಶ ಶೆಟಗಾರ, ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ, ಸಿಂಡಿಕೇಟ್ ಸದಸ್ಯೆ ಮಮತಾ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್‌.ಎಂ.ಚಂದ್ರಶೇಖರ, ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಲಕ್ಷ್ಮೀದೇವಿ ವೈ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಮತ್ತು ಹೋರಾಟ ಗೀತೆೆಯನ್ನು ಹಾಡಿದರು. ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಸ್ವಾಗತಿಸಿದರು. ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ.ಲಕ್ಷ್ಮೀದೇವಿ ವೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸರೋಜಾ ಸಂತಿ ವರದಿ ವಾಚನ ಮಾಡಿದರು. ಡಾ.ಭಾಗಶ್ರೀ ದೊಡ್ಡಮನಿ ಸಾಧಕಿಯರಿಗೆ ಸನ್ಮಾನ ಮಾಡಿದರು. ಪ್ರೊ.ರೇಣುಕಾ ಮೇಟಿ ಕಾರ್ಯಕ್ರಮ ನಿರೂಪಿಸಿದರು. ಡಾ.ಶಶಿಕಲಾ ರಾಠೋಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ಪಟ್ಟಿ ಪ್ರಸ್ತುತಪಡಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ ವಂದಿಸಿದರು.