ಫಲ-ಪುಷ್ಪ, ಕೃಷಿ ವಸ್ತು ಪ್ರದರ್ಶನ, ಸ್ವ-ಸಹಾಯ ಸಂಘದ ಮಳಿಗೆಗಳ ಉದ್ಘಾಟನೆ

Inauguration of fruit-flower, agricultural produce display, self-help society shops

ಫಲ-ಪುಷ್ಪ, ಕೃಷಿ ವಸ್ತು ಪ್ರದರ್ಶನ, ಸ್ವ-ಸಹಾಯ ಸಂಘದ ಮಳಿಗೆಗಳ ಉದ್ಘಾಟನೆ 

ಕೊಪ್ಪಳ 15:ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಗಳು ಎಲ್ಲರ ಗಮನ ಸೆಳೆಯುತ್ತಿವೆ.   

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2025ರ ಪ್ರಯುಕ್ತ ಜಾತ್ರಾ ಆವರಣದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆಯ ಕೃಷಿ ವಸ್ತು ಹಾಗೂ ಜಲಾನಯನ ಮಾದರಿಗಳ ಪ್ರದರ್ಶನ, ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಎನ್‌.ಆರ್‌.ಎಲ್‌.ಎಂ. ಮಹಿಳಾ ಸ್ವ-ಸಹಾಯ ಸಂಘಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿ.ಪಂ ಸಿಇಓ ಅವರು ಚಾಲನೆ ನೀಡಿದರು.  

ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿ, ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಎನ್‌.ಆರ್‌.ಎಲ್‌.ಎಂ. ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರದರ್ಶನ, ತೋಟಗಾರಿಕೆಯ ತಂತ್ರಜ್ಞಾನಗಳ ಪ್ರದರ್ಶನ, ವಿವಿಧ ಹಣ್ಣುಗಳ ಪ್ರದರ್ಶ, ಸ್ವ-ಸಹಾಯ ಗುಂಪುಗಳು ಸಿದ್ದಪಡಿಸಲಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು, ಜಾತ್ರೆಗೆ ಬರುವ ಭಕ್ತಾದಿಗಳು ಇವುಗಳನ್ನು ವೀಕ್ಷಿಸಬೇಕೆಂದರು.  

ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಗವಿಸಿದ್ದೇಶ್ವರ ಜಾತ್ರೆಯ ನಿಮಿತ್ತ ಕೃಷಿ. ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳು ರೈತರಿಗೆ ಬೇಕಾಗಿರುವ ಕೃಷಿ ಸಲಕರಣೆ ಬಗ್ಗೆ ಮಾಹಿತಿ ನೀಡುವಂತಹ ಮಳಿಗೆಗಳನ್ನು ಹಮ್ಮಿಕೊಂಡಿವೆ. ಇಲ್ಲಿಗೆ ಜಿಲ್ಲೆಯ ರೈತರು ಭೇಟಿ ನೀಡಿ, ಮಾಹಿತಿಯನ್ನು ಪಡೆದುಕೊಳ್ಳಬೇಕು. ಇದರ ಜೊತೆಗೆ ಸ್ತ್ರೀಶಕ್ತಿ ಸಂಘಗಳು ಯಾವ ರೀತಿ ಸಬಲೀಕರಣವಾಗಬೇಕೆಂಬುವುದರ ಬಗ್ಗೆ ಎನ್‌.ಆರ್‌.ಎಲ್‌.ಎಂ. ಯೋಜನೆಯಡಿ ಜಿಲ್ಲಾ ಪಂಚಾಯತ್ ನಿಂದ ಮಾಹಿತಿ ನೀಡುವ ಕೆಲಸವಾಗುತ್ತಿದೆ. ರಥೋತ್ಸಕ್ಕೆ ಸುಮಾರು 8 ರಿಂದ 10 ಲಕ್ಷ ಜನ ಸೇರಲಿದ್ದು, 15 ದಿನಗಳ ಕಾಲ ನಡೆಯುವ ಈ ಪ್ರದರ್ಶನ ಮಳಿಗೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.  

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನದಂತಹ ವಿನೂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಾವು ಮೇಳದಲ್ಲಿ ಮೀಯಾ ಜಾಕಿ ಎಂಬ ಬೆಲೆಬಾಳುವ ಮಾವಿನ ಹಣ್ಣಿನ ಪ್ರದರ್ಶನವು ರಾಜ್ಯಮಟ್ಟದಲ್ಲಿ ಈ ಹಿಂದೆ ಸದ್ದು ಮಾಡಿದೆ. ಜಿಲ್ಲೆಯಲ್ಲಿ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೋಟಗಾರಿಕೆ ಇಲಾಖೆಯು ಮುಂಚೂಣಿಯಲ್ಲಿದೆ. ಕೃಷಿ ವಸ್ತು ಪ್ರದರ್ಶನದಿಂದಲು ರೈತರಿಗೆ ಅನುಕೂಲವಾಗುವುದಲ್ಲದೇ ವಿಶೇಷವಾಗಿ ಇಂದಿನ ಪಿಳಿಗೆಯವರಿಗೆ ಪಾರಂಪರಿಕ ಕೃಷಿ ಪದ್ಧತಿಗಳ ಬಗ್ಗೆ ತಿಳಿಯುತ್ತದೆ. ಸಂಜೀವಿನಿ ಮತ್ತು ಸ್ವ-ಸಹಾಯ ಗುಂಪುಗಳು ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಜಾತ್ರೆಯಲ್ಲಿ ವಿವಿಧ ಇಲಾಖೆಗಳು ಭಾಗವಹಿಸಿರುವುದು ವಿಶೇಷತೆಗೆ ಸಾಕ್ಷಿಯಾಗಿದೆ ಎಂದರು.  

ಜಿಲ್ಲಾ ಪಂಚಾಯತ ಯೋಜನಾ ನಿರ್ದೆಶಕರಾದ ಪ್ರಕಾಶ ವಡ್ಡರ ಅವರು ಸರಸ್ ಮೇಳದ ಕುರಿತು ಮಾಹಿತಿ ನೀಡಿ, ಗವಿಸಿದ್ದೇಶ್ವರ ಜಾತ್ರೆಯಲ್ಲಿ ನಗರ ಮತ್ತು ಗ್ರಾಮೀಣ ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆ ಮಾಡಲಾಗಿದೆ. ಇದರಲ್ಲಿ ನಮ್ಮ ಜಿಲ್ಲೆಯ 49 ಸ್ವ-ಸಹಾಯ ಸಂಘಗಳು ಮತ್ತು ಇತರೆ 16 ಜಿಲ್ಲೆಯ 29 ಸ್ವ-ಸಹಾಯ ಸಂಘಗಳು ಪಾಲ್ಗೊಂಡಿದ್ದು, ತಮ್ಮ ಆಹಾರ ಮತ್ತು ಕೈಮಗ್ಗದ ವಸ್ತುಗಳ ಮಾರಾಟವನ್ನು ಈ ಜಾತ್ರೆಯಲ್ಲಿ ಮಾಡಲಿದ್ದಾರೆ. ಇದರಲ್ಲಿ ವಿಶೇಷವಾಗಿ ದಾವಣಗೆರೆ ಜಿಲ್ಲೆಯ ಆಯುರ್ವೇ ವನಸ್ಪತಿ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದವರು ಮಾರಾಟ ಮಾಡುವ ಜೇನು ತುಪ್ಪ. ಮಸಾಲೆ ಪದಾರ್ಥಗಳು. ಬಿದರಿನಿಂದ ತೈಯಾರಿಸಿದ ವಸ್ತುಗಳು. ಕಿನ್ನಾಳದ ಗೊಂಬೆಗಳು. ಚನ್ನಪಟ್ಟಣ ಗೊಂಬೆಗಳು. ಗಂಗಾವತಿಯ ಮಣ್ಣಿನಿಂದ ತೈಯಾರಿಸುವ ಮಡಿಕೆಗಳು ವಿಶೇಷವಾಗಿವೆ. 15 ದಿನಗಳ ಕಾಲ ಈ ಮಾರಾಟ ಮೇಳ ನಡೆಯಲಿದೆ ಎಂದು ಹೇಳಿದರು.  

ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಮಾಹಿತಿ ಕೃಷಿ ಮೇಳದ ಕುರಿತು ಮಾಹಿತಿ ನೀಡಿ, ಕೃಷಿ ವಸ್ತು ಹಾಗೂ ಜಲಾನಯನ ಮಾದರಿಗಳ ಪ್ರದರ್ಶನ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮಾದರಿ ಜಲಾನಯನ ಹಾಗೂ ನೀರಿನ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ. ಉದ್ಯೋಗ ಖಾತ್ರಿ ಯೋಜನೆ. ಸಿರಿಧಾನ್ಯಗಳಾದ ನವಣೆ. ಕರಲೆ. ಬರಗು. ಸಜ್ಜೆ ಪ್ರದರ್ಶನ ಜೊತೆಗೆ ಕೃಷಿ ಉಪಕರಣ ಪ್ರದರ್ಶನ ಮತ್ತು ಮಾರಾಟ ಹಾಗೂ ಕೃಷಿ ಇಲಾಖೆಯಿಂದ ನೀಡಲಾಗುವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಇರಲಿದ್ದು ರೈತರು ಈ ಮೇಳದಲ್ಲಿ ಭಾಗವಹಿಸಿ ವಿವಿಧ ಯೋಜನೆಗಳ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.  

ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಕೃಷ್ಣ ಉಕುಂದ್ ಅವರು ಫಲ-ಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿ, ಗವಿಸಿದ್ದೇಶ್ವರ ಜಾತ್ರೆಯಲ್ಲಿ ತೋಟಗಾರಿಕೆ ಫಲ ಪುಷ್ಪ ಪ್ರದರ್ಶನ ಏರಿ​‍್ಡಸಲಾಗಿದ್ದು, ಇದರಲ್ಲಿ ರೈತರು ಬೆಳೆದ ತರಕಾರಿ ಹಣ್ಣು ಹಂಪಲುಗಳ ಪ್ರದರ್ಶನ ಹಾಗೂ ಹೂ-ಗಳಿಂದ ತಯಾರಿಸಿದ ವಿವಿಧ ವಸ್ತುಗಳು. ವಿಶೇಷವಾಗಿ ತೋಟಗಾರಿಕೆ ಉತ್ಪಾದನಗಳ ರಿ​‍್ತನ ಮಾಹಿತಿ, ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಇಲಾಖೆಯ ಕೈಪಿಡಿ, ಕೈತೋಟ ಮತ್ತು ತಾರಸಿ ತೋಟ ಹಾಗೂ ರೈತರು ತಮ್ಮ ಹೊಲದಲ್ಲಿ ಹವಾಮಾನ ಆಧಾರಿತ ಸ್ಟೇಷನ್ ಮಾಡಿಕೊಳ್ಳುವ ಪ್ರಾತ್ಯಕ್ಷಿಕೆ ಜೊತೆಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗುವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಇರಲಿದ್ದು ರೈತರು ಇದರಲ್ಲಿ ಭಾಗವಹಿಸಿ ಮಾಹಿತಿ ಪಡೆಯಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು, ಸಾರ್ವಜನಿಕರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.