ಚಳಿಗಾಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿಗೆ ನಾಯಕರೇ ಧ್ವನಿ ಎತ್ತಿ
ವಿಜಯಪುರ 16: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371ಜೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತುವ ಮೂಲಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಮುಂದಾಗಬೇಕೆಂದು ಜಿಲ್ಲೆಯ ಯುವಮುಖಂಡ ಹಾಗೂ ಸಮಾಜಸೇವಕರೂ ಲೇಖಕ ಮಂಜುನಾಥ.ಎಸ್.ಕಟ್ಟಿಮನಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮುಖಂಡರುಗಳು ವಿಜಯಪುರ ಜಿಲ್ಲೆಗೆ ಈ ಹಿಂದೆ ಕೈತಪ್ಪಿ ಹೋಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಶೈಕ್ಷಣಿಕ ಹಾಗೂ ಓದ್ಯೋಗಿಕ ಮೀಸಲಾತಿಯಾಗಿರುವ 371ಜೆ ಬಗ್ಗೆ ಮಾತನಾಡದೇ ಜಿಲ್ಲೆಯ ಜನತೆಗೆ ಜನಪ್ರತಿನಿಧಿಗಳು ಅನ್ಯಾಯ ಎಸಗುತ್ತಿರುವುದು ಖಂಡನೀಯವಾಗಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಎಚ್ಚೆತ್ತುಕೊಂಡು ಈ ಕೂಡಲೇ ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಾದರೂ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371ಜೆ ಮೀಸಲಾತಿ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ನಂಜುಂಡಪ್ಪ ವರದಿಯ ಪ್ರಕಾರ ವಿಜಯಪುರ ಜಿಲ್ಲೆಯು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಯಾಗಿದೆ. ಈ ಹಿಂದೆ 1724 ವರೆಗೆ ಅಖಂಡ ವಿಜಯಪುರ ಜಿಲ್ಲೆ ಹೈದ್ರಾಬಾದ ನಿಜಾಮನ ಆಡಳಿತದಲ್ಲಿತ್ತು ಎಂಬುದು ಸರ್ಕಾರದ ಗೆಜಿಟಿಯರ್‌ನಲ್ಲಿ ದಾಖಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಜಿಲ್ಲೆಯ ಮಗ್ದ ಜನರ ಮೇಲೆ ರಜಾಕರ ಘೋರ ಹಾವಳಿ ನಡೆದಿರುವ ಬಗ್ಗೆ ಐತಿಹಾಸಿಕ ದಾಖಲೆಗಳು ಸಾರಿ ಹೇಳುತ್ತಿವೆ. ಐತಿಹಾಸಿಕವಾಗಿ ವಿಜಯಪುರ ಜಿಲ್ಲೆ ಅನ್ಯಾಯಕ್ಕೊಳಪಟ್ಟಿದೆ. ಮದ್ರಾಸ್ ಪ್ರಾಂತದಲ್ಲಿರುವ ಬಳ್ಳಾರಿ ಜಿಲ್ಲೆಯನ್ನು ಸೇರಿಸಲು ಅಲ್ಲಿನ ಜನಪ್ರತಿನಿಧಿಗಳು ತಮ್ಮ ರಾಜಕೀಯ ಸ್ವಾರ್ಥ ಮರೆತು ಅಂದಿನ ಸರ್ಕಾರದ ಮೇಲೆ ಒತ್ತಡ ಹೇರಿ ಅಲ್ಲಿನ ಜನತೆಗೆ ಈ ಮೀಸಲಾತಿ ಒದಗಿಸಿ ಯಶಸ್ವಿಯಾಗಿದ್ದಾರೆ. ಇವರಿಂದ ಪಾಠ ಕಲಿಯಬೇಕು. ಅಲ್ಲದೇ ಈ ಮೂಲಕವೂ ಜನಪ್ರತಿನಿಧಿಗಳು ಜಿಲ್ಲೆಯ ಜನರಿಗೆ, ಮತದಾರರಿಗೆ ಐತಿಹಾಸಿಕ ದ್ರೋಹ ಎಸಗುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಮತ್ತು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೆಂಗನಾಳ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರೊ. ರಾಜು ಆಲಗೂರ ಅವರು ತಮ್ಮ ಪ್ರಣಾಳಿಕೆಯಲ್ಲಿ ಜಿಲ್ಲೆಗೆ 371 ಜೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಬಿಜೆಪಿ ಹಿರಿಯ ಮುಖಂಡರು ವಿಜಯಪುರ ನಗರದ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ ಅವರು ಕೂಡ ಮಾಧ್ಯಮ ಹೇಳಿಕೆ ನೀಡಿ ಜಿಲ್ಲೆಗೆ ನ್ಯಾಯಯುತಗಿ ಸಿಗಬೇಕಾದ ಮೀಸಲಾತಿ ಬಗ್ಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದರು. ಚುನಾವಣೆ ಮುಗಿದ ನಂತರ ಇದರ ಬಗ್ಗೆ ಮೌನ ವಹಿಸಿರುವುದು ದುರಂತದ ವಿಷಯವಾಗಿದೆ ಎಂದು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಪಕ್ಷ ಬೇದ ಮರೆತು ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳು ವಿದ್ಯಾರ್ಥಿಗಳ ಹಾಗೂ ಯುವಜನರ ಶೈಕ್ಷಣಿಕ, ಓದ್ಯೋಗಿಕ ಹಿತ ದೃಷ್ಟಿಯಿಂದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 371 ಜೆ ಮೀಸಲಾತಿ ಕುರಿತು ಒಕ್ಕೋರಲಿನ ಧ್ವನಿ ಎತ್ತಬೇಕು. ಜಿಲ್ಲೆಯನ್ನು ಮೀಸಲಾತಿಯಿಂದ ಬಿಟ್ಟು ಹೋದ ಪ್ರದೇಶವೆಂದು ಪರಿಗಣಿಸಿ ಜಿಲ್ಲೆಗೆ ನ್ಯಾಯಯುತವಾಗಿ ಕಲ್ಯಾಣ ಕರ್ನಾಟಕ ಮೀಸಲಾತಿ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಉಗ್ರ ಹಾಗೂ ಕಾನೂನು ಹೋರಾಟ ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.