ಬೆಂಗಳೂರು, ಜೂನ್ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಜಿಯೋ ಸ್ಟೇಷನರಿ ಲಾಂಚ್ ವೆಹಿಕಲ್ (ಜಿಎಸ್ ಎಲ್ ವಿ) ಮಾರ್ಕ್ 3 ಬಾಹ್ಯಾಕಾಶ ನೌಕೆ , ಜುಲೈ 15ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸಂಪೂರ್ಣ ದೇಶಿಯ ತಂತ್ರಜ್ಞಾನದ ಚಂದ್ರಯಾನ -2 ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.
ಇದು ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಸವಾಲಿನ ಯೋಜನೆಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಮೈಲುಗಲ್ಲಾಗಲಿದೆ. ಜಿಎಸ್ ಎಲ್ ವಿ ಮಾರ್ಕ್ 3 ನೌಕೆ ಜುಲೈ 15ರಂದು ಬೆಳಗ್ಗೆ 2.51ಕ್ಕೆ ತನ್ನ ಪಯಣ ಆರಂಭಿಸಲಿದ್ದು, ಒಂದು ಉಪಗ್ರಹ, ಲ್ಯಾಂಡರ್ ಹಾಗೂ ರೋವರ್ ಗಳನ್ನು ಒಳಗೊಂಡಿದೆ. ಇವು ಚಂದ್ರದ ಮೇಲ್ಮೈ ಯಲ್ಲಿನ ಖನಿಜ, ನೀರಿನ ಅಂಶಗಳನ್ನು ಪತ್ತೆಹಚ್ಚಲಿವೆ.
ಉಡಾವಣೆಗೊಂಡ 15 ನಿಮಿಷಗಳಲ್ಲಿ ಜಿಎಸ್ ಎಲ್ ವಿ ಮಾರ್ಕ್ 3, ಚಂದ್ರಯಾನ -2 ಉಪಗ್ರಹವನ್ನು ನಭಕ್ಕೆ ಕೊಂಡೊಯ್ಯಲಿದ್ದು, ಭೂಮಿಯನ್ನು ಸುತ್ತುವರಿಯಲಿದೆ. ನಂತರ, ಸೆಪ್ಟೆಂಬರ್ 6 ಇಲ್ಲವೇ 7ರಂದು ಚಂದ್ರನನ್ನು ತಲುಪಲಿದೆ. ಆಗ ಅದರ ಲ್ಯಾಂಡರ್ ನಿಧಾನವಾಗಿ ಬಾಗಿಲುಗಳನ್ನು ತೆರೆದುಕೊಂಡು ಚಂದ್ರ ಮೇಲೆ ಇಳಿಯಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ. ಕೆ.ಸಿವನ್, ಲ್ಯಾಂಡರ್ ಚಂದ್ರನ ನೆಲದ 30 ಕಿಮೀ ಎತ್ತರದಲ್ಲಿ ಇಳಿಯಲಿದೆ. ಇದೇ ಮೊದಲ ಬಾರಿಗೆ ಇಂತಹ ಕ್ಲಿಷ್ಟಕರ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಸಂಸ್ಥೆಗೆ ಅತ್ಯಂತ ಆತಂಕದ ಕ್ಷಣಗಳಾಗಿರಲಿವೆ ಎಂದರು.
ಚಂದ್ರನ ಮೇಲೆ ಚಂದ್ರಯಾನ -1 ಉಪಗ್ರಹ ಯಶಸ್ವಿಯಾಗಿ ನೆಲೆಯೂರಿದ ಹಿನ್ನೆಲೆಯಲ್ಲಿ ಅದೇ ತಂತ್ರಗಾರಿಕೆಯನ್ನು ಈ ಬಾರಿಯೂ ಬಳಸಲಾಗುತ್ತಿದೆ. ಆದರೆ, ಚಂದ್ರನ ಮೇಲೆ ಮೃದುವಾಗಿ ನೆಲೆಯೂರುವುದೇ ತಮ್ಮೆದುರು ಇರುವ ಬಹುದೊಡ್ಡ ಸವಾಲು ಎಂದರು.
ಈ ಉಪಗ್ರಹವನ್ನು 603 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದ್ದು, ಜಿಎಸ್ ಎಲ್ ವಿ ಬಾಹ್ಯಾಕಾಶ ನೌಕೆಗೆ 375 ಕೋಟಿ ರೂ. ವೆಚ್ಚವಾಗಿದೆ. ಈ ಬಾಹ್ಯಾಕಾಶ ನೌಕೆ ಒಟ್ಟಾರೆಯಾಗಿ 3.8 ಟನ್ ತೂಕವಿದ್ದು, 650 ಕೆಜಿ ಉಪಗ್ರಹವನ್ನು ಒಳಗೊಂಡಿದೆ.
ಈ ಉಪಗ್ರಹದ ಲ್ಯಾಂಡರ್ ಗೆ ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ವಿಕ್ರಮ್ ಸರಾಭಾಯ್ ಅವರ ನೆನಪಿನಲ್ಲಿ 'ವಿಕ್ರಮ್ ' ಎಂದು ಹೆಸರಿಸಲಾಗಿದೆ. ಇದು ಚಂದ್ರದ ಮೇಲೆ ನೆಲೆಯೂರುತ್ತಿದ್ದಂತೆ 15ರಿಂದ 20 ಕ್ಷಣಗಳಲ್ಲಿ ಮೊದಲ ಚಿತ್ರವನ್ನು ಕಳುಹಿಸಲಿದೆ. ರೋವರ್ ಗೆ 'ಪ್ರಗ್ಯಾನ್' ಎಂದು ನಾಮಕರಣ ಮಾಡಲಾಗಿದ್ದು, ಅದು 20 ನಿಮಿಷಗಳ ನಂತರ ಚಿತ್ರಗಳನ್ನು ಕಳುಹಿಸಲಿದೆ.
ರೋವರ್ ನ ಜೀವಿತಾವಧಿ ಒಂದು 'ಚಂದ್ರನ ದಿನ'. ಇದು ಭೂಮಿಯ 14 ದಿನಗಳಿಗೆ ಸಮನಾಗಿದೆ. ಆದರೆ, ಆರ್ಬಿಟರ್ ಮಾತ್ರ ಒಂದು ಪೂರ್ತಿ ವರ್ಷಗಳ ಕಾಲ ಚಂದ್ರನನ್ನು ಸುತ್ತುವರಿಯುತ್ತಿರುತ್ತದೆ.
ಭೂಮಿಯನ್ನು ಬಿಟ್ಟು ಮೇಲೇರುತ್ತಿದ್ದಂತೆ ಉಪಗ್ರಹ ಐದು ದಿನಗಳಲ್ಲಿ ಸರಾಸರಿ 3.5 ಕಿಮೀ ವೇಗದಲ್ಲಿ ಚಲಿಸಲಿದೆ ಎಂದು ಇಸ್ರೋ ಅಧ್ಯಕ್ಷ ಸಿವನ್ ತಿಳಿಸಿದ್ದಾರೆ.