ಐಎಂಎ ಮುಖ್ಯಸ್ಥರ ಜತೆ ತಾವು ಬಿರಿಯಾನಿ ತಿಂದಿಲ್ಲ, ಖರ್ಜುರ ತಿಂದಿದ್ದೇನೆ: ಕುಮಾರ ಸ್ವಾಮಿ

 ಬೆಂಗಳೂರು, ಜು 22  ಐಎಂಎ ಮುಖ್ಯಸ್ಥ ಮನ್ಸೂರ್ ಖಾರ್ ಅವರ ಜತೆ ತಾವು ಬಿರಿಯಾನಿ ತಿಂದಿಲ್ಲ ಖರ್ಜುರ ತಿಂದಿದ್ದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ ಐಎಂಎ ಮುಖ್ಯಸ್ಥರ ಜತೆ ಕುಳಿತು ತಾವು ಬಿರಿಯಾನಿ ತಿಂದಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸದನದಲ್ಲೂ ತಮ್ಮನ್ನೇ ಉದ್ದೇಶಿಸಿ ಟೀಕೆ ಮಾಡಲಾಗಿದೆ. ಆದರೆ ತಮಗೆ ಅವರು ಐಎಂಎ ಮುಖ್ಯಸ್ಥರು ಎಂಬುದೇ ಗೊತ್ತಿರಲಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ತಮ್ಮನ್ನು  ಬಲವಂತ ಮಾಡಿ ಕರೆದೊಯ್ದಿದ್ದರು. ಹೃದಯ ಸಮಸ್ಯೆ ಕಾಣಿಸಿಕೊಂಡ ನಂತರ ಮಾಂಸಹಾರ ತ್ಯಜಿಸಿದ್ದೇನೆ. ಅವರ ಜತೆ ತಿಂದಿದ್ದು ಒಂದೆರಡು ಖರ್ಜುರ ಮಾತ್ರ ಎಂದು ಸ್ಪಷ್ಟಪಡಿಸದರು.  ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು ಚರ್ಚೆ  ನಡೆಸುತ್ತಿದ್ದ ಸಂದರ್ಭದಲ್ಲಿ ಐಎಂಎ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದರು. ಆ ಸಂಸ್ಥೆಯಿಂದ ರಾಜೀನಾಮೆ ಕೊಟ್ಡಿರುವ ಶಾಸಕರು 450ಕೋಟಿ ರೂ ಪಡೆದು ವಂಚಿಸಿದ್ದಾರೆ  ಎಂದು ಆ ಸಂಸ್ಥೆಯ ಮುಖ್ಯಸ್ಥರೇ ಸ್ಪಷ್ಟಪಡಿಸಿದ್ದಾರೆ. ಇದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಶಾಸಕರು ತಾವು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ ಎಂದರು.  ಆಗ  ಬಿಜೆಪಿಯ ಮಾಧುಸ್ವಾಮಿ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಇಲ್ಲಿ ಆ ವಿಚಾರವನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಆಕ್ಷೇಪವನ್ನು ಸ್ಪೀಕರ್ ರಮೇಶ್ ಕುಮಾರ್ ತಳ್ಳಿಹಾಕಿದರು.  ಆಗ ಬಿಜೆಪಿಯ ಸಿ.ಟಿ.ರವಿ, ಗುಪ್ತದಳ ಆಡಳಿತ ಪಕ್ಷದ ಕೈಯಲ್ಲಿದೆ. ಅದರ ಜತೆಗೆ ಆ ಸಂಸ್ಥೆಯ ಮುಖ್ಯಸ್ಥರ ಜತೆಗೆ ಬಿರಿಯಾನಿ ತಿಂದರಲ್ಲ. ಆ ಪಾಪದ ಹಣದಲ್ಲಿ ಚುನಾವಣೆ ನಡೆಸಿದರಲ್ಲ. ಆ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಿ. ಸರ್ಕಾರ ನಿಮ್ಮ ಜತೆಗಿದೆ ಬನ್ನಿ ಎಂದು ಕಳ್ಳನ ರಕ್ಷಣೆಗೆ ಮುಂದಾಗಿದ್ದನ್ನೂ ಹೇಳಿ ಎಂದು ಕುಟುಕಿದರು.  ಆಗ ಕುಮಾರ ಸ್ವಾಮಿ ಪ್ರತಿಕ್ರಿಯೆ ನೀಡಿ, ತಮ್ಮನ್ನೇ ಗುರಿಯಾಗಿಸಿ ಸಿಟಿ ರವಿ ಬಿರಿಯಾನಿ ತಿಂದಿದ್ದಾಗಿ ಹೇಳಿದ್ದಾರೆ. ಐಎಂಎ ವಂಚನೆ ಪ್ರಕರಣದ ಬಗ್ಗೆ ತನಿಖೆಗೆ ಈಗಾಗಲೇ ವಿಶೇಷ ತನಿಖಾ ತಂಡ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ತಮಗೆ ಐಎಂಎ ಸಂಸ್ಥೆಯ ಮುಖ್ಯಸ್ಥರ ಪರಿಚಯವಿಲ್ಲ. ಈಗ ರಾಜೀನಾಮೆ ಕೊಟ್ಟಿರುವ ಶಾಸಕರೇ ನನ್ನನ್ನು ತೀವ್ರ ಒತ್ತಾಯ ಮಾಡಿ ರಂಜಾನ್ ಹಬ್ಬದ ಔತಣಕೂಟಕ್ಕೆ ಕರೆದುಕೊಂಡು ಹೋದರು. ನಾನು ಅಲ್ಲಿ ಖಂಡಿತ ಬಿರಿಯಾನಿ ತಿಂದಿಲ್ಲ. ಎರಡನೆ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಆದ ನಂತರ ಮಾಂಸಹಾರ ಸೇವನೆ ತ್ಯಜಿಸಿದ್ದೇನೆ. ಅಲ್ಲಿ ನಾನು ಒಂದು ಖರ್ಜುರ ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೆ ಎಂದರು.  ಆ ವ್ಯಕ್ತಿಯ ಕಚೇರಿಯಲ್ಲಿ ಈ ದೇಶದ ಪ್ರಧಾನಿಯ ಫೋಟೋ ಹಾಕಿಕೊಂಡಿದ್ದಾರೆ. ಅತ್ಯುತ್ತಮ ಉದ್ಯಮಿ ಎಂದು ಕೇಂದ್ರ ಸಕರ್ಾರದಿಂದ ಬಹುಮಾನವನ್ನೂ ಕೊಡಲಾಗಿದೆ. ಈ ಹಗರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಕೊಡುವಂತೆ ಶಿಫಾರಸ್ಸು ಮಾಡಿದ್ದೇ ನಾನು. ಬಡವರ ಹಣ ದುರುಪಯೋಗ ಮಾಡಿಕೊಂಡವರನ್ನು ಖಂಡಿತ ಬಿಡುವುದಿಲ್ಲ. ಆ ವ್ಯಕ್ತಿಯನ್ನು ಬಂಧಿಸಿದ್ದು ನಮ್ಮ ಎಸ್ಐಟಿ ಪೊಲೀಸರು. ಈಗ ಇಡಿಯವರು ವಿಚಾರಣೆಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡಿದ್ದಾರೆ ಎಂದರು.  ಆಗ ರಮೇಶ್ ಕುಮಾರ್ ಮಧ್ಯ ಪ್ರವೇಶಿಸಿ ಕುಮಾರ ಸ್ವಾಮಿ ಅವರನ್ನು ಉದ್ದೇಶಿಸಿ " ಹಾಗೆಲ್ಲ ಪೂರ್ತಿಯಾಗಿ ಮಾಂಸಹಾರ ಬಿಡಬಾರದು. ಮೀನು, ನಾಟಿಕೋಳಿಯಾದರೂ ತಿನ್ನಬೇಕು. ಇಲ್ಲ ಎಂದರೆ ಜನ ತಿನ್ನೋರೇ ಬಿಟ್ಟುಬಿಟ್ಟುಬಿಟ್ಟಿದ್ದಾರೆ. ತಿನ್ನಬಾರದವರೆಲ್ಲಾ ಶುರುಮಾಡಿಕೊಂಡಿದ್ದಾರೆ ಎಂದು ನಮ್ಮ ಮೇಲೆ ತಪ್ಪುತಿಳಿದುಕೊಳ್ಳುತ್ತಾರೆ" ಎಂದು ಚಟಾಕಿ ಹಾರಿಸಿದರು.