ಅರಣ್ಯ ಪುನರುತ್ಪಾದನೆ ಮಾಡುವಲ್ಲಿ ಹಾರ್ನ್ ಬಿಲ್ ಪಕ್ಷಿಯ ಪಾತ್ರ ಪ್ರಮುಖ: ಸಂತೋಷ ಕುಮಾರ್
Hornbill bird plays important role in forest regeneration: Santosh Kumar
ಕಾರವಾರ 16: ಹಾನ್ ಬಿಲ್ ಪಕ್ಷಿಗಳ ಬಗ್ಗೆ ಸ್ಥಳೀಯ ಜನರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ತಿಳುವಳಿಕೆಯಾಗಲಿ ಎಂಬ ಉದ್ದೇಶದಿಂದ ಹಾರ್ನ್ ಬಿಲ್ ಹಬ್ಬ ಆಯೋಜಿಸಲಾಗುತ್ತಿದ್ದು ಹಾರ್ನ್ ಬಿಲ್ ಪಕ್ಷಿಯು ತುಂಬಾ ಆಕರ್ಷಕ ಪಕ್ಷಿಯಾಗಿದ್ದು, ಅರಣ್ಯವನ್ನು ಪುನರುತ್ಪಾದನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅರಣ್ಯ ಇಲಾಖೆ ಯ ಪ್ರಚಾರ ಮತ್ತು ಐಸಿಟಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಹೇಳಿದರು.
ಅವರು ಶುಕ್ರವಾರ ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಹಳಿಯಾಳ ಅರಣ್ಯ ವಿಭಾಗ ವತಿಯಿಂದ ದಾಂಡೇಲಿಯ ಸರ್ಕಾರಿ ಮರಮುಟ್ಟುಗಳ ಕೋಠಿಯ ಹಾರ್ನ ಬಿಲ್ ಭವನದಲ್ಲಿ ನಡೆದ ಹಾರ್ನ್ ಬಿಲ್ ಹಬ್ಬ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಂಡೇಲಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಹಾರ್ನ್ ಬಿಲ್ ಹಬ್ಬ ಆಯೋಜಿಸಲಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಹತ್ವದಾಗಿದ್ದು, ಇದರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯಿಂದ ಸಾಧ್ಯವಿಲ್ಲ. ಇದಕ್ಕೆ ಎಲ್ಲರ ಸಹಭಾಗಿತ್ವ ಬಹು ಮುಖ್ಯವಾಗಿದೆ. ವಿವಿಧ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಮಾತ್ರ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡಲು ಸಾಧ್ಯ. ಹೀಗಾಗಿ ಜನರಲ್ಲಿ ಅರಿವು ಮಾಡುವ ಉದ್ದೇಶದಿಂದ ಹಾರ್ನ್ ಬಿಲ್ ಹಬ್ಬ ಆಯೋಜಿಸಿಕೊಂಡು ಬರಲಾಗುತ್ತಿದೆ. ಜನರಲ್ಲಿ ವನ್ಯಜೀವಿಗಳ ಮತ್ತು ಅರಣ್ಯ ಸಂರಕ್ಷಣೆ ಹೇಗೆ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡುಸಲಾಗುತ್ತಿದ್ದು, ಪ್ರತಿಯೊಬ್ಬರು ಕೈ ಜೋಡಿಸಿದರೆ ಅರಣ್ಯ ಸಂರಕ್ಷಣೆ ಮಾಡಲು ಸಾಧ್ಯ ಎಂದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹರಿಲಾಲ್ ಮಾತನಾಡಿ, ವಿಶ್ವದಲ್ಲಿ ಸುಮಾರು 11,126 ಪ್ರಭೇದಗಳ ಪಕ್ಷಿಗಳಿವೆ, ಭಾರತದಲ್ಲಿ 1,325 ಪ್ರಭೇದದ ಪಕ್ಷಿಗಳಿವೆ, ಕರ್ನಾಟಕ 525 ಪ್ರಭೇದದ ಪಕ್ಷಿಗಳಿವೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಮೊದಲ ಆದ್ಯತೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯೂ ಅತ್ಯಂತ ಸಂಪತ್ತಭರಿತ ಅರಣ್ಯ ಪ್ರದೇಶವನ್ನು ಹೊಂದಿದ್ದು ಇದರ ಜೊತೆಗೆ ನದಿ, ಬೆಟ್ಟ ಗುಡ್ಡು, ಜಲಪಾತ ಉತ್ತರ ಕನ್ನಡ ಜಿಲ್ಲೆಗೆ ಮೆರಗು ತಂದಿದೆ. ದಾಂಡೇಲಿಯಲ್ಲಿ ಸುಂದರವಾದ ಹಕ್ಕಿಗಳ ತಾಣವನ್ನು ಒಳಗೊಂಡಿದೆ. ಹಾರ್ನ ಬಿಲ್ ಕೇವಲ ಪಕ್ಷಿ ಅಲ್ಲ ಅರಣ್ಯ ಸಂಪತ್ತಿನ ಆರೋಗ್ಯದ ಸಂಕೇತವಾಗಿದೆ. ಹಾರ್ನ್ ಬಿಲ್ ಹಕ್ಕಿಯೂ ಅತ್ಯುತ್ತಮ ಆರೋಗ್ಯ ಭರಿತ ಅರಣ್ಯ ಪ್ರದೇಶದಲ್ಲಿ ಮಾತ್ರ ಇರುತ್ತದೆ. ಪ್ರಪಂಚದಲ್ಲಿ ಸುಮಾರು 57 ಪ್ರಭೇದ ಹಕ್ಕಿಗಳು ಇರುವ ಬಗ್ಗೆ ಮಾಹಿತಿ ಇದೆ. ಭಾರತದಲ್ಲಿ 9 ಪ್ರಭೇದಗಳೂ ಹಾಗೂ ದಾಂಡೇಲಿಯಲ್ಲಿ 4 ಪ್ರಭೇದಗಳಿರುವುದು ನಮ್ಮ ಹೆಮ್ಮೆಯಾಗಿದೆ.
ಹಾರ್ನ ಬಿಲ್ ಹಬ್ಬಕ್ಕೆ 8 ವರ್ಷದ ಇತಿಹಾಸವಿದೆ ಇಲ್ಲಿನ ಸಂಕೃತಿ ಮತ್ತು ಪರಿಸರವನ್ನು ಸಮಾಗಮ ಮಾಡಿ ಸಂಗಮ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಸರ ಮತ್ತು ಪಕ್ಷಿ ಪರಿಣಿತರು ನಾಗಲ್ಯಾಂಡ ಮುಂಬೈ, ಮಹಾರಾಷ್ಟೊ ಆಂಧ್ರ, ತಮಿಳುನಾಡಿನಿಂದ ಆಗಮಿಸಿದ್ದು, ಅನೇಕ ಮಾಹಿತಿನ್ನು ನೀಡಲಾಗುತ್ತದೆ. 130 ಜನ ಪಕ್ಷಿ ವೀಕ್ಷಣೆಗೆ ಆಗಮಿಸಿದ್ದು, ಪಕ್ಷಿ ಮತ್ತು ಅರಣ್ಯ ಸಂರಕ್ಷಣೆ ಕುರಿತು ಮುತುವರ್ಜಿ ವಹಿಸಿ ತಿಳಿದುಕೊಂಡು ಪ್ರಪಂಚಾದ್ಯಂತ ಬಿತ್ತರಿಸೋಣ ಎಂದರು.
ಹಳಿಯಾಳದಲ್ಲಿ ವಿನೂತನವಾದ ಹಾರ್ನ ಬಿಲ್ ಇಕೋ ಟೂರಿಸಂ ಮಾಡುವ ಉದ್ದೇಶ ಹೊಂದಲಾಗಿದ್ದು, ಇದರಿಂದ ಸ್ಥಳೀಯ ಸಾರ್ವಜನಿಕರಿಗೆ ಉದ್ಯೋಗವಕಾಶ ಮತ್ತು ಅವರ ಜೀವನ ನಡೆಸಲು ಆಧಾರವಾಗಲಿದೆ ಎಂದರು.
ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಕ್ಕಿಯ 4 ಪ್ರಭೇದಗಳಿದ್ದು, ಅರಣ್ಯ ಇಲಾಖೆಯ ಹಳಿಯಾಳ ವಿಭಾಗದಿಂದ ಹಕ್ಕಿಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶಿದಿಂದ ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವನ್ಯಜೀವಿ ಪ್ರೀಯರು ದಾಂಡೇಲಿಗೆ ಹುಲಿ ವೀಕ್ಷಣೆಗೆ ಬರುವಂತೆ ಹಾರ್ನ್ ಬಿಲ್ ವೀಕ್ಷಣೆಗೂ ಬರುವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಾರ್ನ್ ಬಿಲ್ ಹಕ್ಕಿಗೂ ಕೂಡ ಹುಲಿಗಿರುವಷ್ಟ್ ಪ್ರಾಮುಖ್ಯತೆ ಹಾರ್ನ್ ಬಿಲ್ ಹಕ್ಕಿಗೂ ಕೂಡ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ ಪ್ರಾಸ್ತಾವಿಕ ವಾಗಿ ಮಾತನಾಡಿ, ರಾಜ್ಯದಲ್ಲಿ ಪಕ್ಷಿಗಳ ಸಂರಕ್ಷಣೆ ಕುರಿತು ಹಲವು ಕಾರ್ಯಕ್ರಮಗಳ ಆಯೋಜಿಸಲಾಗುತ್ತದೆ ಆದರೆ ದಾಂಡೆಲಿಯಲ್ಲಿ ನಡೆಯುವ ಹಾರ್ನ್ ಬಿಲ್ ಹಬ್ಬ ವಿಶೇಷ ಕಾರ್ಯಕ್ರಮವಾಗಿದೆ. ಇಲ್ಲಿ ಅರಣ್ಯ, ಪಕ್ಷಿಗಳ ಸಂರಕ್ಷಣೆ, ಶಿಕ್ಷಣದ ಜೊತೆಯಲ್ಲಿ ಸ್ಥಳೀಯ ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳನ್ನು ಈ ವೇದಿಕೆಯ ಮೂಲಕ ಜನರಿಗೆ 8 ವರ್ಷದಿಂದ ಪರಿಚಯಿಸುತ್ತಾ ಬಂದಿದೆ. ಹಾರ್ನ್ ಬಿಲ್ ಕಾರ್ಯಕ್ರಮದ ಅಂಗವಾಗಿ ಹಳಿಯಾಳ, ಜೋಯಿಡಾ, ದಾಂಡೇಲಿ ತಾಲೂಕಿನ ಶಾಲಾ ಮಕ್ಕಳಿಗೆ ಕ್ವೀಜ್, ಚಿತ್ರಕಲೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ದೇಶದಲ್ಲಿ ಒಟ್ಟು 9 ಹಾರ್ನ್ ಬಿಲ್ ಪ್ರಭೇದಗಳಿದ್ದು, ಈಶಾನ್ಯ ಭಾಗದಲ್ಲಿ 4, ಪಶ್ಚಿಮ ಘಟ್ಟಗಳಲ್ಲಿ 4, ಅಂಡಮಾನ್ ಮತ್ತು ನಿಕೋಬರ್ ನಡುಗಡ್ಡೆಯಲ್ಲಿ 1 ಪ್ರಭೇದವನ್ನು ಕಾಣಬಹುದಾಗಿದೆ. ದೇಶದ ಮೂಲೆ ಮೂಲೆಗಳಿಂದ ವಿವಿಧ ಪರಿಣಿತರ ತಂಡ ಆಗಮಿಸಿದ್ದು, ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುವಲ್ಲಿ ಹಾರ್ನ್ ಬಿಲ್ ಹಬ್ಬ ಅನುಕೂಲವಾಗಲಿದೆ. ಆಗಮಿಸಿದ ಪಕ್ಷಿ ಪ್ರೀಯರಿಗೆ ಪಕ್ಷಿ, ಸಫಾರಿ, ದಾಂಡೇಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಇದರ ಸದುಪಯೋಗ ಪಡೆದುಕೊಳ್ಳಿ, ಇಲಾಖೆಯ ಅಧಿಕಾರಿ ಸಿಬ್ಬಂದಿ ಗಳಿಂದ ಮಾತ್ರ ಅರಣ್ಯ ಮತ್ತು ಪಕ್ಷಿಗಳ ಸಂರಕ್ಷಣೆ ಸಾಧ್ಯವಿಲ್ಲ ಪ್ರತಿಯೊಬ್ಬರೂ ಸಹಕರಿಸಿದಾಗ ಮಾತ್ರ ಸಂರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು.
ಹಾರ್ನ್ ಬಿಲ್ ಹಬ್ಬದ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ತುಷಾರ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ, ಜಿ.ಪಿ. ಹರ್ಷಬಾನು, ಸಂದೀಪ ಹಿಂದೂರಾವ ಸೂರ್ಯವಂಶಿ,ಯೋಗೀಶ ಸಿ.ಕೆ, ಮಂಜುನಾಥ ಜಿ ನಾವಿ, ನಾಗಶೆಟ್ಟಿ ಆರ್.ಎಸ್., ದಾಂಡೇಲಿ ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೈನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 