ಹಾನಿಟ್ರ್ಯಪ್ ವಿಚಾರ ದುರದೃಷ್ಟಕರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ 23: ರಾಜ್ಯದ ಸಚಿವರೊಬ್ಬರಿಗೆ ಹಾನಿಟ್ರ್ಯಪ್ ಮಾಡಲು ಯತ್ನಿಸಿರುವುದು ದುರದೃಷ್ಟಕರ ಸಂಗತಿ. ಸದನದಲ್ಲಿ ರಾಜ್ಯದ ಹಿರಿಯ ಸಚಿವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ. ಹಾನಿಟ್ರ್ಯಪ್ ಯತ್ನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು ಇದನ್ನು ನೋಡಿಕೊಳ್ಳುತ್ತಾರೆ. ನಾನು ಅದರ ಕುರಿತು ಹೆಚ್ಚು ಮಾತನಾಡಲ್ಲ ಎಂದರು. ಘರ್ಜಿಸುವ ಹುಲಿಗಳಿಗೆ ಸಿಡಿ ತೋರಿಸಿ ಹೆದರಿಸಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದಕ್ಕೆ ನೀವು ( ಮಾಧ್ಯಮದವರು) ಅವರಿಂದಲೇ ಉತ್ತರ ಪಡೆಯಬೇಕು. ನಾನು ಅದಕ್ಕೆ ಉತ್ತರ ನೀಡುವುದು ಸಮಂಜಸವಲ್ಲ. ಅಲ್ಲದೆ ಇಂತಹ ವಿಚಾರಗಳ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಇಲಾಖೆಯ ಉಪನಿರ್ದೇಶಕ ನಾಗರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.