ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮವ್ವ ಶಿಳ್ಳೆಕ್ಯಾತರ ಮನೆಗೆ ಮೇಘಾಲಯದ ಗೌರವಾನ್ವಿತ ರಾಜ್ಯಪಾಲರು ಭೇಟಿ: ಸನ್ಮಾನ
ಕೊಪ್ಪಳ 22 : 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೆಕ್ಯಾತರ ರವರ ಮನೆಗೆ ಶನಿವಾರದಂದು ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ ಅವರು ಭೇಟಿ ನೀಡಿದರು. ಭೀಮವ್ವ ಶಿಳ್ಳೆಕ್ಯಾತರ ರವರಿಗೆ ಗೌರವಾನ್ವಿತ ರಾಜ್ಯಪಾಲರು ಸನ್ಮಾನಿಸಿ, ಅಭಿನಂದಿಸಿದರು. ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಹೇಳುವ ತೊಗಲು ಗೋಂಬೆಯಾಟದ ಕೆಲವು ಹಾಡುಗಳನ್ನು ಭೀಮವ್ವ ಶಿಳ್ಳೆಕ್ಯಾತರ ಕುಟುಂಬದವರು ರಾಜ್ಯಪಾಲರ ಎದುರುಗಡೆ ಹಾಡಿ ಗಮನ ಸೆಳೆದರು. ಈ ಕಲೆಯನ್ನು ನಾವು ಸುಮಾರು ನಾಲ್ಕು ತಲೆಮಾರುಗಳಿಂದ, ನಮ್ಮ ತಾತ, ಮುತ್ತಾತ, ಅಜ್ಜಂದಿರ ಕಾಲದಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ. ನಮ್ಮ ಈ ಕಲೆಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಅತೀವ ಸಂತಸ ತಂದಿದೆ. ಈ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಅಭಿನಂದನೆಗಳು ಎಂದರು. ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳುವ ತೊಗಲು ಗೋಂಬೆಯಾಟದ ಕೆಲವು ಹಾಡುಗಳನ್ನು ವೀಕ್ಷಿಸಿದ ನಂತರ ರಾಜ್ಯಪಾಲು, ಈ ಕಲೆಯ ಪ್ರದರ್ಶನವನ್ನು ಮೇಘಲಾಯದ ರಾಜಭವನದಲ್ಲಿನ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಈ ಕಲಾವಿದರನ್ನು ಆಹ್ವಾನಿಸಿ, ಕಾರ್ಯಕ್ರಮ ಆಯೋಜನೆ ಮಾಡುವಂತೆ ತಮ್ಮ ವಿಶೇಷ ಕರ್ತವ್ಯಾಧಿಕಾರಿಗೆ ನಿರ್ದೇಶನ ನೀಡಿದರು. ನಂತರ ಶಿಳ್ಳೆಕ್ಯಾತರ ಕುಟುಂಬಸ್ಥರೊಂದಿಗೆ ಗ್ರೂಪ್ ಫೋಟೋ ತೆಗೆಹಿಸಿಕೊಂಡು, ಈ ಕಲೆಯನ್ನು ತಮ್ಮ ಮುಂದಿನ ತಲೆಮಾರಿನ ವರೆಗೂ ಹೀಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳು, ಮೋರನಾಳ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.