ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಹಕರಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಹಕರಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು Help prevent mosquito-borne diseases: DHO Dr. Yalla Rameshbabu

       ಬಳ್ಳಾರಿ  23: ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೌಲ್‌ಬಜಾರ್ ಸಹಕಾರದೊಂದಿಗೆ ನಗರದ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಗ್ಯೂ ಹರಡುವ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮನೆಯ ಒಳಗಡೆ ಸ್ವಚ್ಛತೆಗೆ ಎಷ್ಟು ಮಹತ್ವ ನೀಡುತ್ತೇವೆಯೋ, ಅಷ್ಟೇ ಮಹತ್ವ ಮನೆಯ ಹೊರಭಾಗದಲ್ಲಿಯೂ ನೀಡಬೇಕು. ಇದರಿಂದ ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದರು. 

ಅನಗತ್ಯವಾಗಿ ಮಳೆ ನೀರು ನಿಲ್ಲುವ ಬೀಸಾಡಿದ ಟೈರ್, ತಗಡಿನ್ ಟಿನ್, ಪ್ಲಾಸ್ಟಿಕ್ ಕಫ್ ಮತ್ತು ಹೂವಿನ ಕುಂಡಲು, ಫ್ರಿಜ್ ಹಿಂಭಾಗದಲ್ಲಿ 7 ದಿನಗಳಿಗಿಂತ ಹೆಚ್ಚು ಸತತವಾಗಿ ನೀರು ನಿಲ್ಲದಂತೆ ಪ್ರತಿಯೊಬ್ಬರೂ ಮನಃಪೂರ್ವಕವಾಗಿ ಕೈ ಜೋಡಿಸಿದಲ್ಲಿ ಮಾತ್ರ ಇದು ಸಾಧ್ಯವಾಗಲಿದೆ ಎಂದರು. 

ನೀರಿನಲ್ಲಿ ಉತ್ಪತ್ತಿಯಾಗುವ ಡೆಂಗ್ಯೂ, ಚಿಕಿನ್ ಗುನ್ಯಾ ಹರಡುವ ಈಡೀಸ್ ಇಜಿಪ್ಟೈ ಸೊಳ್ಳೆಯ ಮರಿ 5ಎಮ್‌.ಎಲ್ ಹಾಗೂ 10 ಎಮ್‌.ಎಲ್ ನೀರಿನಲ್ಲಿ ಉತ್ಪತ್ತಿಯಾಗದಂತೆ ತಡೆಯುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು. 

ಮನೆಯ ಬಳಕೆಗಾಗಿ ಸಂಗ್ರಹಿಸುವ ನೀರಿನಲ್ಲಿ ಮುಚ್ಚಳ ಮುಚ್ಚದೇ ಇದ್ದರೆ ಅಂತಹ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಈಡೀಸ್ ಸೊಳ್ಳೆ ತನ್ನ ಸಂತತಿಯನ್ನು ವೃದ್ದಿ ಮಾಡಿಕೊಳ್ಳುತ್ತದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡುವ ಜೊತೆಗೆ ಬಳಕೆಗಾಗಿ ನೀರು ತುಂಬುವ ಈ ಎಲ್ಲಾ ಪರಿಕರಗಳನ್ನು ವಾರಕ್ಕೊಮ್ಮೆ ತಿಕ್ಕಿ ತೊಳೆದು ಒಣಗಿಸಿ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳವನ್ನು ಮುಚ್ಚಬೇಕು. ಪರಿಕರಗಳನ್ನು ವಾರಕ್ಕೊಮ್ಮೆ ಪರೀಕ್ಷಿಸಿ ಸೊಳ್ಳೆ ಮರಿ ಉಂಟಾಗದಂತೆ ತಡೆಯುವ ಮೂಲಕ ಸಮುದಾಯದ ಆರೋಗ್ಯ ಕಾಪಾಡುವ ಇಲಾಖೆಯ ಕಾರ್ಯಕ್ಕೆ ಕೈ ಜೋಡಿಸಲು ಕೋರಿದರು. 

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಮಾತನಾಡಿ ರಾಜ್ಯ ಸರ್ಕಾರ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ಕಾಯ್ದೆಗೆ ಒಳಪಡಿಸಿದ್ದು, ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಲಕ್ಷ್ಯವಹಿಸಿದರೆ 200 ರೂ. ಗಳಿಂದ 2000 ರೂ. ಗಳ ವರೆಗೆ ದಂಡ ವಿಧಿಸುವ ಕಾನೂನು ಅನುಷ್ಟಾನ ಮಾಡಿದೆ. ಆದರೆ ಕಾನೂನುನಿಂದ ಮಾತ್ರ ಸೊಳ್ಳೆ ನಿಯಂತ್ರಣ ಮಾಡದೇ ಪ್ರತಿಯೊಬ್ಬರ ಸಹಭಾಗಿತ್ವದೊಂದಿಗೆ ಸೊಳ್ಳೆಗಳ ನಿಯಂತ್ರಣ ಅವಶ್ಯಕತೆಯಿದೆ ಎಂದು ಹೇಳಿದರು. 

ಅಲ್ಲದೇ ಸಾರ್ವಜನಿಕರು ಡೆಂಗ್ಯೂ ಕಾಯಿಲೆಯಲ್ಲಿ ಕಂಡುಬರುವ ಲಕ್ಷಣಗಳಾದ ಜ್ವರ, ಕಣ್ಣು ಕೆಂಪಾಗುವಿಕೆ, ಕಣ್ಣಿನ ಹಿಂಭಾಗದಲ್ಲಿ ನೋವು, ವಾಂತಿ, ಕಾರಣವಿಲ್ಲದೇ ಮೈ ತುರಿಕೆ, ತಲೆನೋವು, ಗಂಧೆಗಳು, ಕೀಲುಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ತಪ್ಪದೇ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಅಗತ್ಯ ಓಷದೋಪಚಾರವನ್ನು ಕೈಗೊಳ್ಳಲು ಮತ್ತು ಹೆಚ್ಚು ದಿನಗಳ ಕಾಲ ನೀರು ಸಂಗ್ರಹವಿರುವ ಸ್ಥಳಗಳಲ್ಲಿ ಗಪ್ಪಿ ಮತ್ತು ಗಾಂಬೋಷಿಯ ಮೀನುಗಳನ್ನು ಬಿಡಲು ಅವಕಾಶವಿದ್ದು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮೀನುಗಳನ್ನು ಪಡೆದು ನೀರಿನ ತಾಣಗಳಲ್ಲಿ ಬಿಡಬಹುದು ಎಂದು ಸಲಹೆ ನೀಡಿದರು. 

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆರ್‌. ಅಬ್ದುಲ್ಲಾ ಮಾತನಾಡಿ, ಕುಡಿಯದ ಮತ್ತು ಕೇವಲ ಮನೆ ಬಳಕೆಗಾಗಿ ಬಳಸುವ ನೀರನ್ನು ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ ಮುಂತಾದವುಗಳಲ್ಲಿ ಸಂಗ್ರಹಿಸಿದಾಗ ಅವುಗಳಿಗೆ ಸರಿಯಾದ ಮುಚ್ಚಳ ಮುಚ್ಚದಿದ್ದಾಗ ಅಧಿಕ ಪ್ರಮಾಣದಲ್ಲಿ ನೀರು ಇದ್ದರೆ ಅಂತಹ ನೀರಿನಲ್ಲಿ ಆರೋಗ್ಯಕ್ಕೆ ಹಾನಿಕಾರವಲ್ಲದ ಕೇವಲ ಸೊಳ್ಳೆ ಮರಿಗಳನ್ನು ನಾಶ ಮಾಡುವ ಟೆಮಿಫಾಸ್ ದ್ರಾವಣವನ್ನು ತಮ್ಮ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಲಾರ್ವಾ ಸಮೀಕ್ಷೆಗೆಂದು ಭೇಟಿ ನೀಡಿದಾಗ ಹಾಕಿಸುವುದರಿಂದ ಸೊಳ್ಳೆ ಉತ್ಪತ್ತಿ ತಡೆಯಲು ಸಹಕಾರಿಯಾಗುವುದು ಎಂದರು. 

ಈ ಸಂದರ್ಭದಲ್ಲಿ ಸಹಾಯಕ ಕೀಟ ಶಾಸ್ತ್ರಜ್ಞರಾದ ಡಾ.ಮುಜಮಿಲ್ ಫಿರ್‌ದೋಸ್, ಡಾ.ನವೀದ್ ಆಲಂ, ನಂದಿನಿ, ಜಿಲ್ಲಾ ಸಲಹೆಗಾರ ಪ್ರತಾಪ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್ ಸೇರಿದಂತೆ ಪ್ರಾಥಮಿಕ ಸುರಕ್ಷಾಧಿಕಾರಿಗಳು, ಆರೋಗ್ಯ ನೀರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.