ಲೋಕದರ್ಶನ ವರದಿ
ಬೆಳಗಾವಿ 02: ವಚನ ಪಿತಾಮಹ ಫ.ಗು.ಹಳಕಟ್ಟಿಯವರು ವಚನಗಳನ್ನು ಸಂಶೋಧಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಕಣ್ಮರೆಯಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದುಕನ್ನಡಕ್ಕೆ ಮಹದುಪಕಾರ ಮಾಡಿದರೆಂದು ಪ್ರೊ.ಶ್ರೀಕಾಂತ ಶಾನವಾಡ ನುಡಿದರು.
ಅವರು ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾಘಟಕ ಆಯೋಜಿಸಿದ್ದ ಅಮವಾಸೆ ಶರಣ ಸತ್ಸಂಗದಲ್ಲಿ ಮಾತನಾಡಿದರು. ಫ.ಗು.ಹಳಕಟ್ಟಿಯವರು ಬಡತನವನ್ನೇಉಂಡುಟ್ಟು ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಗ್ರಹಿಸಿ, ಪರಿಷ್ಕರಿಸಿ, ಪ್ರಕಟಿಸಿ ಮಹದುಪಕಾರ ಮಾಡಿದರು. ಒಂದು ವಿಶ್ವವಿದ್ಯಾಲಯವು ಮಾಡಬೇಕಾಗಿದ್ದ ಕಾರ್ಯವನ್ನು ಒಬ್ಬರೇ ನಿರ್ವಹಿಸಿದ್ದು ಸೂರ್ಯನಷ್ಟೇ ಸತ್ಯವೆಂದು ಹೇಳಿದರು.
ಮುಂದುವರೆದು ಮಾತನಾಡುತ್ತ, ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಸದ್ಬಳಕೆಯಾಗುತ್ತಿಲ್ಲ. ಇದು ಖೇದಕರ ಸಂಗತಿ. ಇನ್ನೊಬ್ಬರ ಮೇಲೆ ಗದಾಪ್ರಹಾರ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಅಂದು ಶರಣರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಜವನ್ನು ಒಗ್ಗೂಡಿಸುವ ನೆಲೆಯಲ್ಲಿ ಬಳಸಿಕೊಂಡರು. ಸಮಾಜ ಹಾಗೂ ಧರ್ಮದಲ್ಲಿ ಅಡಗಿರುವ ನಿಷ್ಠಗಳನ್ನು ತೊಡೆದುಹಾಕಿ ಸಮುದಾಯ ಪ್ರಜ್ಞೆಯನ್ನು ಮೂಡಿಸಿದರು. ಸಾಂಸ್ಥಿಕವಾಗಿದ್ದ ಧರ್ಮವನ್ನು ಸಾಂಸ್ಕೃತಿಕರಣಗೊಳಿಸಿದರು.ಶರಣರ ವಚನಗಳಲ್ಲಿ ತಾತ್ವಿಕ, ಆಧ್ಯಾತ್ಮಿಕ, ವೈಚಾರಿಕತೆ ಮನೆಮಾಡಿಕೊಂಡಿದೆ. ಕಾಯಕ-ದಾಸೋಹ- ಪ್ರಸಾದ ಸಿದ್ಧಾಂತಗಳನ್ನು ಎತ್ತಿಹಿಡಿಯುವ ಮೂಲಕ ಮನುಕುಲಕ್ಕೆ ನಿಜಧರ್ಮದ ಮಾರ್ಗಗಳನ್ನು ತೋರಿಸಿಕೊಟ್ಟವರು ಶರಣರು. ವ್ಯಕ್ತಿಯನ್ನು ಅಂಗತ್ವದಿಂದ ಲಿಂಗತ್ವದೆಡೆಗೆ, ವಿಕಾರದಿಂದ ಆಕರದೆಡೆಗೆ ಕೊಂಡ್ಯೊಯದ ಮಹಾನುಭಾವರು ಶರಣರು. ಅವರ ವಚನಗಳನ್ನು ಕೇವಲ ಓದಿದರೆ ಸಾಲದು ಅದು ನಮ್ಮ ಬದುಕಿನ ಅನುಕರಣೆಯಲ್ಲಿ ಬರುವಂತಾಗಬೇಕು. ವಿಶ್ವಕ್ಕೆ ಬಹುಮೌಲಿಕ ಕೊಡುಗೆ ನೀಡಿರುವ ಶರಣರ ವಚನಗಳನ್ನು ನಮ್ಮ ಯುವಜನಾಂಗಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಪ್ರಧಾನ ಕಾರ್ಯದಶರ್ಿ ಕಲ್ಯಾಣರಾವ್ ಮುಚಳಂಬಿಯವರು ಮಾತನಾಡಿ ಶರಣರು ಕಲ್ಯಾಣ ರಾಜ್ಯವನ್ನು ಕಟ್ಟಿದರು. ಅವರು ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯಕಂದಾಚಾರಗಳನ್ನು ಕಿತ್ತು ಹಾಕಿದರು. ಶರಣರು ಹೇಳಿದ ತತ್ತಾದರ್ಶಗಳನ್ನು ಅನುಕರಣೆ ತರಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಯವಾದಿ ಬಿ.ಎನ್.ಗೌಡರ ಅವರು ಮಾತನಾಡಿ ಇಂದಿನ ಒತ್ತಡದ ಜೀವನಕ್ಕೆ ಶರಣರ ವಚನಗಳು ಸಂಜೀವಿನಿಯೆನಿಸಿವೆ. ಭ್ರಷ್ಟ ವ್ಯವಸ್ಥೆಯಿಂದ ಇಂದು ಸಮಾಜ ಕಲುಷಿತಗೊಳ್ಳುತ್ತಿದೆ. ಸಂಘಟನೆ ಅಗತ್ಯ ಹಾಗು ಅನಿವಾರ್ಯವಾಗಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಬೇಕು. ನಮ್ಮ ನಡೆ ನುಡಿಯಲ್ಲಿ ಏಕತಾನತೆ ಇರಬೇಕೆಂದು ಹೇಳಿದರು.
ಶರಣೆ ದ್ರಾಕ್ಷಾಯಿಣಿ ಪ್ರಾಥರ್ಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿದರು. ಕಾರ್ಯದಶರ್ಿ ಸೋಮಲಿಂಗ ಮಾವಿನಕಟ್ಟಿ ವಂದಿಸಿದರು. ಡಾ.ಎಫ್.ವ್ಹಿ.ಮಾನ್ವಿ, ಆರ್.ಎಂ.ಕರಡಿಗುದ್ದಿ, ಡಾ.ಗುರುದೇವಿ ಹುಲೆಪ್ಪನವರಮಠ, ಬಸವರಾಜತರಗಾರ ಮೊದಲಾದವರು ಉಪಸ್ಥಿತರಿದ್ದರು.