ಈ ಭಾಗದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಒತ್ತು: ಸಚಿವ ವಿ.ಸೋಮಣ್ಣ
ಕೊಪ್ಪಳ 16: ರೈಲ್ವೆ ಇಲಾಖೆಯಿಂದ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟ ಭಾಗದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ ಎಂದು ಜಲ ಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ಹೇಳಿದರು.
ಅವರು ಮಂಗಳವಾರ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿ ನೈಋತ್ಯ ರೈಲ್ವೆ ವತಿಯಿಂದ ಆಯೋಜಿಸಲಾಗಿದ್ದ ರೈಲ್ವೆ ಮೇಲ್ಸೇತುವೆಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಡಿದರು.
ದೇಶದ ವಿವಿಧೆಡೆ 10, 15, 20 ವರ್ಷದ ಬಹುತೇಕ ರೈಲ್ವೆ ಕಾಮಗಾರಿಗಳು ನೆನಗುದಿಗೆ ಬಿದ್ದಿದ್ದವು. ನರೇಂದ್ರ ಮೋದಿಜಿಯವರು ಪ್ರಧಾನ ಮಂತ್ರಿಗಳಾದ ಬಳಿಕ ಎಲ್ಲಾ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳುವುದಲ್ಲದೇ ಅನೇಕ ಹೊಸ-ಹೊಸ ಯೋಜನೆ ಮತ್ತು ಕಾಮಗಾರಿಗಳು ಲೋಕಾರೆ್ಣಯಾಗಿ ಜಾರಿಯಾಗುತ್ತಿವೆ. ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡಬೇಕೆಂಬ ಸುಮಾರು 50 ವರ್ಷಗಳ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿಜಿ ರವರು ಈಡೇರಿಸಿದ್ದು, ದೇಶದ 10 ರಾಜ್ಯ ಭಾಷೆಗಳಲ್ಲಿ ರೈಲ್ವೆ ಪರೀಕ್ಷೆ ಬರೆಯಬಹುದಾಗಿದೆ. ಕೇಂದ್ರ ಸರ್ಕಾರವು 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದ ಅನೇಕ ರೈಲು ನಿಲ್ದಾಣಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಇದರಲ್ಲಿ ನಮ್ಮ ರಾಜ್ಯಕ್ಕೆ 2000 ಕೋಟಿ ರೂ.ಗಳನ್ನು ರೈಲು ನಿಲ್ದಾಣಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಸಾಮಾನ್ಯ ಜನರು ಓಡಾಡುವ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಅವುಗಳಲ್ಲಿ ಅಗತ್ಯ ಕುಡಿಯುವ ನೀರು, ಶೌಚಾಲಯ, ನೀರೀಕ್ಷಣಾ ಕೊಠಡಿ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕೆಂಬ ಉದ್ದೇಶದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದರು.
ರಾಯದುರ್ಗಾ-ತುಮಕೂರು, ತುಮಕೂರು-ಚಿತ್ರದುರ್ಗಾ-ದಾವಣಗೇರೆ, ಗದಗ-ವಾಡಿ, ತುಮಕೂರು-ಚಿತ್ರದುರ್ಗಾ, ಕಡೂರು-ಚಿಕ್ಕಮಂಗಳೂರು-ಬೇಲೂರು ಸೇರಿದಂತೆ ರಾಜ್ಯದ ವಿವಿಧ ರೈಲು ಮಾರ್ಗಗಳಿಗಾಗಿ 29 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾವು ನೀಡಿದ್ದು, ಎಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಈ ಕೆಲಸಗಳು ಪೂರ್ಣಗೊಳಿಸುತ್ತೇವೆ. ರೈಲ್ವೆ ಸಂಪರ್ಕದಿಂದ ಕರ್ನಾಟಕದಲ್ಲಿ ಹೊಸ ಯುಗ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿ, ಕುಷ್ಟಗಿ ರಸ್ತೆಯ ರೈಲ್ವೆ ಮೇಲ್ಸೇತುವೆಯು ಅತ್ಯವಶ್ಯಕವಾಗಿತ್ತು. ಇದರ ಉದ್ಘಾಟನೆಯಿಂದ ದಕ್ಷೀಣ ಭಾರತ ಕುಂಭಮೇಳ ಎಂದು ಹೆಸರಾದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಸಂಚಾರಕ್ಕೂ ಅನುಕೂಲವಾಗಿದೆ. ಈ ಸೇತುವೇ ನಿರ್ಮಾಣಕ್ಕಾಗಿ ಮಾಜಿ ಸಂಸದರಾದ ಕರಡಿ ಸಂಗಣ್ಣನವರ ಪ್ರಯತ್ನ ಬಹಳಷ್ಟಿದೆ. ಈ ಸೇತುವೆಗೆ ವೀರರಾಣಿ ಕಿತ್ತೂರು ಚೆನ್ನೆಮ್ಮನವರ ಹೆಸರಿಡಬೇಕೆಂಬುದು ಬಹು ಜನರ ಬೇಡಿಕೆಯಾಗಿದ್ದು, ಇದಕ್ಕೆ ಅನುಕೂಲ ಮಾಡಿಕೊಡಬೇಕು. ಬಾಗಲಕೋಟೆ-ಗಂಗಾವತಿ ಮತ್ತು ಗಂಗಾವತಿ-ದರೋಜಿ ರೈಲು ಮಾರ್ಗಗಳನ್ನು ಮಂಜೂರು ಮಾಡಿಕೊಡಬೇಕು. ಕೊಪ್ಪಳ ನಗರದ ಗಂಗಾವತಿ ರಸ್ತೆಯ ಮೆಡಿಕಲ್ ಕಾಲೇಜು ಹತ್ತಿರದ ಕಿಡಿದಾಳ ಗೇಟ್‌ನಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿದರೆ, ಜನರಿಗೆ ಅನುಕೂಲವಾಗುತ್ತದೆ. ಹನುಮನ ಜನ್ಮಸ್ಥಳವಾದ ಅಂಜನಾದ್ರಿಯಿಂದ ಅಯೋಧ್ಯೆಗೆ ವಂದೇ ಭಾರತ್ ರೈಲಿನ ವ್ಯವಸ್ಥೆ ಮಾಡಿಕೊಡಬೇಕೆಂದು ಹೇಳಿದರು.
ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚಿವರು ಕಾರ್ಯಕ್ರಮಕ್ಕೂ ಮುಂಚೆ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು. ಕಾರ್ಯಕ್ರಮದ ನಂತರ ಕೊಪ್ಪಳ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಮೃತ ಭಾರತ್ ಸ್ಟೇಶನ್ ಕಾಮಗಾರಿಗಳ ಪರೀಶೀಲನೆ ನಡೆಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಮಾಜಿ ಸಂಸದ ಶಿವರಾಮೆಗೌಡ, ನೈರುತ್ಯ ರೈಲ್ವೆ ಹುಬ್ಬಳ್ಳಿಯ ವಿಭಾಗೀಯ ವ್ಯವಸ್ಥಾಪಕರಾದ ಬೇಲಾ ಮೀನಾ, ಕನ್ಸ್‌ಸ್ಟ್ರಕ್ಷನ್ ಸಿಇಓ ಬೆಂಗಳೂರಿನ ಅಜಯ್ ಶರ್ಮಾ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.