ಐಗಳಿಯಲ್ಲಿ ದ್ರಾಕ್ಷಿ ಬೆಳೆಗಾರರ ಸಭೆ: ಬೆಂಬಲ ಬೆಲೆ ಘೋಷಿಸಲು ಆಗ್ರಹ
ಅಥಣಿ 27: ರಾಜ್ಯದ ದ್ರಾಕ್ಷಿ ಬೆಳೆಗಾರರು ಕಳೆದ ಅನೇಕ ವರ್ಷಗಳಿಂದ ಸಂಕಷ್ಟದಲ್ಲಿದ್ದು, ಸಂಕಷ್ಟದಿಂದ ಹೊರ ಬರಲು ಬೆಂಬಲ ಬೆಲೆ ಘೋಷಿಸಬೇಕು ಮತ್ತು ಶೆಡ್ಡದಲ್ಲಾಗುವ ಹಾನಿಗೆ ವಿಮಾ ಸೌಲಭ್ಯ ಕಲ್ಪಿಸಬೇಕು ಮತ್ತು ಒಣ ದ್ರಾಕ್ಷಿಯನ್ನು ಆಹಾರದ ವಸ್ತು ಎಂದು ಪರಿಗಣಿಸಲು ಕೇಂದ್ರದ ಮೇಲೆ ಒತ್ತಡ ತರೋಣ ಎಂದು ಮಾಜಿ ಶಾಸಕ, ಅಥಣಿ ರೆಜಿನ್ ಪ್ರೋಸೆಸಿಂಗ ಕ್ಲಸ್ಟರ್ ಅಧ್ಯಕ್ಷ ಶಹಜಹಾನ ಡೊಂಗರಗಾಂವ ಹೇಳಿದರು.
ಅವರು ಐಗಳಿಯಲ್ಲಿ ನಡೆದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಮಾತನಾಡುತ್ತಿದ್ದರು. ಅಥಣಿ ತಾಲೂಕಿನಲ್ಲಿ ಸುಮಾರು 15 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ ಹವಾಮಾನ ವೈಪರಿತ್ಯ, ಬೆಲೆ ಕುಸಿತದ ಪರಿಣಾಮ ಕೋಟ್ಯಾಂತರ ರೂಪಾಯಿ ಹಾನಿಯಾಗುತ್ತಿದೆ ಇದರಿಂದ ರೈತರು ಕಣ್ಣೀರಿನಲ್ಲಿಯೇ ಕೈ ತೊಳೆಯುವಂತಾಗಿದೆ ಎಂದ ಅವರು ಅಂಗನವಾಡಿ ಮಕ್ಕಳಿಗೆ ಮತ್ತು ಬಿಸಿಯೂಟ ಯೋಜನೆಯಡಿ ಬರುವ ವಿದ್ಯಾಥಿಗಳಿಗೆ, ಸರಕಾರಿ ಆಸ್ಪತ್ರೆಗಳ ರೋಗಿಗಳಿಗೆ ಪೌಷ್ಟಿಕಾಂಶಗಳ ಆಗರವಾಗಿರುವ ಒಣ ದ್ರಾಕ್ಷಿ ಪೂರೈಕೆ ಮಾಡುವ ನಿರ್ಧಾರ ರಾಜ್ಯ ಸರಕಾರ ಮಾಡಬೇಕು. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ದ್ರಾಕ್ಷಿ ಬೆಳೆಗಾರರ ನಿಯೋಗ ನವ ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡಿ ದ್ರಾಕ್ಷಿ ಮಾರಾಟದ ಮೇಲೆ ವಿಧಿಸುವ ಶೇ.5ಅ ಜಿ.ಎಸ್.ಟಿ ರದ್ದು ಮಾಡಬೇಕು ಮತ್ತು ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದ ಪರಿಣಾಮ ದ್ರಾಕ್ಷಿ ಮಾರಾಟದ ಮೇಲಿನ ಶೇ.5 ಜಿ.ಎಸ್.ಟಿ ತೆರವುಗೊಳಿಸಿ ಆದೇಶ ಹೊರಡಿಸಿರುವುದು ನಮ್ಮ ಪ್ರಯತ್ನದ ಮೊದಲ ಗೆಲುವು ಎಂದ ಅವರು ಅಥಣಿ ಸೇರಿದಂತೆ ಹೆಚ್ಚು ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ತಾಲೂಕುಗಳಲ್ಲಿ ಮಾರಾಟ ಕೇಂದ್ರಗಳನ್ನು ಮತ್ತು ಕೊಲ್ಡ ಸ್ಟೋರೆಜ್ ಪ್ರಾರಂಭಿಸಬೇಕು ಆಗ ಸಹಜವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಮಾರಾಟ ಮಾಡಲು ಸಾಧ್ಯವಾಗುತ್ತದೆ ಇದಕ್ಕಾಗಿ ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕು ಎಂದರು.
ಇಲ್ಲಿಯವರೆಗೂ ದ್ರಾಕ್ಷಿಯನ್ನು ಆಹಾರ ಪದಾರ್ಥವನ್ನಾಗಿ ಪರಿಗಣಿಸಿಲ್ಲ ಹೀಗಾಗಿ ನಾವು ಇತ್ತೀಚಿಗೆ ದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿಯವರನ್ನು ಭೇಟಿ ಮಾಡಿ ದ್ರಾಕ್ಷಿಯನ್ನು ಆಹಾರ ಪದಾರ್ಥ ಎಂದು ಪರಿಗಣಿಸಿ ನಮ್ಮ ನಿಯೋಗ ಆಗ್ರಹಿಸಿದ ಪರಿಣಾಮ ಅವರು ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು ದ್ರಾಕ್ಷಿಗೆ ತಗಲುವ ಒಟ್ಟು ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ಘೋಶಿಸಬೇಕು ಎಂದು ಕೇಂದ್ರ ಹಣಕಾಸು ಸಚಿವರಿಗೆ ಆಗ್ರಹಿಸಿದ್ದೇವೆ ಎಂದರು.
ದ್ರಾಕ್ಷಿ ಬೆಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆದಲ್ಲಿ ಒಂದು ವರ್ಷಕ್ಕೆ ಕನಿಷ್ಠ ಏಳನೂರಿಂದ ಎಂಟನೂರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ ಹೀಗೆ 15000 ಎಕರೆಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತದೆ ಹೀಗಾಗಿ ದ್ರಾಕ್ಷಿ ಬೆಳೆಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದ ಅವರು ನಮ್ಮ ದೇಶಕ್ಕೆ ಆಮದಾಗುವ ಒಣ ದ್ರಾಕ್ಷಿಗೆ ಹೆಚ್ಚು ತೆರಿಗೆ ವಿಧಿಸಿದಲ್ಲಿ ಮಾತ್ರ ನಮ್ಮ ಒಣ ದ್ರಾಕ್ಷಿಗೆ ಹೆಚ್ಚು ಬೆಲೆ ಕೊಡಲು ಸಾಧ್ಯ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಮತ್ತು ದ್ರಾಕ್ಷಿ ಬೆಳೆಗಾರ ಎಸ್.ಎ.ಮುದಕಣ್ಣವರ ಮಾತನಾಡಿ, ದ್ರಾಕ್ಷಿ ಬೆಳೆಗಾರರಾದ ನಾವು ಅಸಂಘಟಿತರಾಗಿದ್ದೇವೆ ಹೀಗಾಗಿಯೇ ನಮ್ಮ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಸಾಧ್ಯವಾಗುತ್ತಿಲ್ಲ ಎಂದ ಅವರು ನಾವು ಸಂಘಟಿತರಾಗಿ ನಮ್ಮ ನಮ್ಮ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಅಧಿವೇಶನದಲ್ಲಿ ಮಾತನಾಡುವಂತೆ ಆಗ್ರಹಿಸಬೇಕಿದೆ ಎಂದು ಹೇಳಿದರು.
ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಶ್ರೀಕಾಂತ್ ಮಕಾಣಿ, ನೂರಹಮದ ಡೋಂಗರಗಾಂವ, ಸಿ ಎಸ್. ನೇಮಗೌಡ್, ಗೀರೀಶ ಬಸರ್ಗಿ, ಸುರೇಶ್ ಅವಟಿ, ಅಪ್ಪಾಸಾಬ ತೇರದಾಳ, ಯುರೋಪಿಯನ್ ಪಾಟಿಲ, ಪ್ರಕಾಶ್ ಪಾಟಿಲ, ಆರ್ ಆರ್ ತೆಲಸಂಗ, ಕಾಶಿನಾಥ್ ಕುಂಬಾರ್ಕರ್, ಮಹಾರಾಷ್ಟ್ರದ ವ್ಯಾಪಾರಿ ವಿನಯ್ ಹಿಂಗಮೇರೆ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.