ಅಫಿಲಿಯೇಷನ್ ಮತ್ತು ಪರೀಕ್ಷಾ ಶುಲ್ಕದ ನಿಧಿಯ ಮೇಲೆ ಸರ್ಕಾರ ಕಣ್ಣು- ಎಐಡಿಎಸ್‌ಓ ತೀವ್ರ ಆಕ್ರೋಶ

Govt Eye on Funding of Affiliation and Examination Fees- AIDSO Strong Rage

ಅಫಿಲಿಯೇಷನ್ ಮತ್ತು ಪರೀಕ್ಷಾ ಶುಲ್ಕದ ನಿಧಿಯ ಮೇಲೆ ಸರ್ಕಾರ ಕಣ್ಣು- ಎಐಡಿಎಸ್‌ಓ ತೀವ್ರ ಆಕ್ರೋಶ

ಬಳ್ಳಾರಿ 10: ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಳಿ ಇರುವ ’600 ಕೋಟಿ ನಿಧಿ’ಯನ್ನು ಸರ್ಕಾರಕ್ಕೆ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ. 1000 ಕೋಟಿ ನಿಧಿಯಲ್ಲಿ ಈಗಾಗಲೇ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಕ್ಯಾಂಪಸ್ ನಿರ್ಮಾಣಕ್ಕೆ ’400 ಕೋಟಿ’ ನೀಡುವಂತೆ ಮಾಡಲಾಗಿದೆ. ಈಗ ಮತ್ತೆ ಉಳಿದ 600 ಕೋಟಿ ನಿಧಿಯನ್ನೂ ವಿಶ್ವವಿದ್ಯಾಲಯದಿಂದ ಪಡೆಯಲು ಮುಂದಾಗಿದೆ. ಮುಖ್ಯಮಂತ್ರಿಗಳು ವಿಶ್ವವಿದ್ಯಾಲಯದ ಕುಲಪತಿಗಳ ಮಾತುಗಳನ್ನೂ ಕೇಳಿಸಿಕೊಳ್ಳದೆ, ’ಆ ನಿಧಿಯನ್ನು ಸರ್ಕಾರಕ್ಕೆ ಕೊಡಿ’ ಎನ್ನುವ ನಡೆಯೇ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಮಾರಕವಾಗಿದೆ. ರಾಜ್ಯ ಸರ್ಕಾರದ ಈ ನಡೆಗೆ ಎಐಡಿಎಸ್‌ಓ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ.  

ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವನ್ನು ಗಣನೀಯವಾಗಿ ಏರಿಸಲಾಗಿದೆ. 5 ವರ್ಷಗಳ ಹಿಂದೆ 15,000 ರೂಪಾಯಿ ಇದ್ದ ವೈದ್ಯಕೀಯ ಶುಲ್ಕವು ಈಗ 65,000 ರೂಪಾಯಿಗೆ ಈ ಏರಿಸಲ್ಪಟ್ಟಿದೆ. ಸಿಬ್ಬಂದಿಗಳ ಸಂಬಳ ಸೇರಿದಂತೆ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ನೇರ ಅನುದಾನವಿಲ್ಲ. ಈಗ ವಿಶ್ವವಿದ್ಯಾಲಯದ ಬಳಿ ಅಫಿಲಿಯೇಷನ್ ಮತ್ತು ಪರೀಕ್ಷಾ ಶುಲ್ಕದ ಮೂಲಕ ಸಂಗ್ರಹವಾಗಿರುವ ನಿಧಿಯ ಮೇಲೆ ಕೂಡ ಸರ್ಕಾರ ಕಣ್ಣು ಹಾಕಿದೆ. ಜನರ ತೆರಿಗೆಯ ಹಣವನ್ನು ಶಿಕ್ಷಣಕ್ಕೆ ವ್ಯಯಿಸುವ ಬದಲಿಗೆ, ವಿದ್ಯಾರ್ಥಿಗಳಿಂದ ಸಂಗ್ರಹವಾಗಿರುವ ಹಣದ ಮೇಲೆ ಸರ್ಕಾರ ಕಣ್ಣು ಹಾಕಿರುವುದು ಯಾವ ನ್ಯಾಯ!? ಈ ನಿಧಿಯ ಮೇಲೆ ಸರ್ಕಾರವು ಯಾವುದೇ ರೀತಿಯ ಹಕ್ಕನ್ನು ಹೊಂದಿಲ್ಲ.  

ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಸರ್ವನಾಶಗೊಳಿಸುವ ಧೋರಣೆ ಇದಾಗಿದೆ. ಸರ್ಕಾರದ ಈ ಅಪ್ರಜಾತಾಂತ್ರಿಕ ಮತ್ತು ನಿರಂಕುಶ ನಡೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸುತ್ತದೆ ಹಾಗೂ ವಿಶ್ವವಿದ್ಯಾಲಯದ ನಿಧಿಯನ್ನು ಅದರ ಸುಪರ್ದಿಗೇ ಬಿಡುವಂತೆ ಸರ್ಕಾರವನ್ನು ಆಗ್ರಹಿಸುತ್ತದೆ. ಒಂದೆಡೆ, ಕೇಂದ್ರ ಬಿಜೆಪಿ ಸರ್ಕಾರವು ಯುಜಿಸಿ ಮೂಲಕ ಕುಲಪತಿಗಳ ನೇಮಕಾತಿಯಲ್ಲಿ ಅಪಾಯಕಾರಿ ಬದಲಾವಣೆಗಳನ್ನು ಜಾರಿಗೊಳಿಸುತ್ತಿದೆ. ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ ಸರ್ಕಾರವು ವಿಶ್ವವಿದ್ಯಾಲಯದ ನಿಧಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಶಿಕ್ಷಣದ ಪ್ರಜಾತಾಂತ್ರಿಕ ಅಡಿಪಾಯವನ್ನೇ ಬುಡಮೇಲು ಮಾಡುವ ಈ ಆಳ್ವಿಕರ ಹುನ್ನಾರದ ವಿರುದ್ಧ, ವಿಶ್ವವಿದ್ಯಾಲಯದ ಹಕ್ಕುಗಳನ್ನು ಮೊಟಕುಗೊಳಿಸುವ ಸರ್ಕಾಗಳ ಈ ದಮನಕಾರಿ ನಡೆಯ ವಿರುದ್ಧ ಪ್ರಬಲ ಪ್ರತಿರೋಧ ಚಳವಳಿಯನ್ನು ಬೆಳೆಸಬೇಕೆಂದು ವಿದ್ಯಾರ್ಥಿ ಸಮೂಹಕ್ಕೆ ಎಐಡಿಎಸ್‌ಓ ಕರೆ ನೀಡುತ್ತದೆ.