ನೆರೆ ಸಂತ್ರಸ್ತರಿಗೆ ಸರಕಾರದಿಂದ ಬಂದ ಅನುದಾನ ದುರ್ಬಳಕೆಯಾಗಿದೆ: ಅಸ್ನೋಟಿಕರ್ ಆರೋಪ
ಕಾರವಾರ: ಕ್ಷೇತ್ರದಲ್ಲಿ ನೆರೆ ಪ್ರವಾಹದಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ಸರಕಾರದಿಂದ ಬಂದ ಅನುದಾನದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ಗುತ್ತಿಗೆದಾರರಿಂದ ಶೇ.25ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ನೆರೆ ಪ್ರವಾಹದಲ್ಲಿ ಕಳೆದುಕೊಂಡ ಮನೆ, ಸೇತುವೆ, ರಸ್ತೆ, ಕಟ್ಟಡ ಸೇರಿದಂತೆ ಇನ್ನಿತರ ಕಾಮಗಾರಿಗೆ ಜಿಲ್ಲಾ ಪಂಚಾಯತ, ಲೋಕೋಪಯೋಗಿ ಇಲಾಖೆಗೆ ಕೇಂದ್ರ ಪುರಸ್ಕೃತ ಅನುದಾನ ಬಂದಿದ್ದು, ಅದನ್ನು ದುರ್ಬಳಕ್ಕೆ ಮಾಡುತ್ತಿದ್ದಾರೆ.
ನೆರೆ ಪೀಡಿತ ಸ್ಥಳಕ್ಕೆ ಕಾಮಗಾರಿ ಮಾಡದೇ ನೆರೆ ಪ್ರವಾಹದ ಸಂತ್ರಸ್ತರ ಅನುದಾನ ಬೇರೆ ಕಡೆಗೆ ಉಪಯೋಗ ಮಾಡಲಾಗಿದೆ. ಅದಲ್ಲದೇ, ನೆರೆ ಪ್ರವಾಹಕ್ಕೆ ಬಂದ ಅನುದಾನಕ್ಕೆ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ಗುತ್ತಿಗೆದಾರರಿಂದ ಶೇ. 25ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಕೆಲ ಬಿಜೆಪಿಯಲ್ಲಿರುವ ಗುತ್ತಿಗೆದಾರರು ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ರೀತಿ ಶಾಸಕಿ ನೆರೆ ಸಂತ್ರಸ್ತರ ಅನುದಾನದಲ್ಲಿ ಕಮಿಷನ್ ಪಡೆದು ಅಕ್ರಮ ನಡೆಸುತ್ತಿದ್ದಾರೆ, ಇದನ್ನು ನಾನು ಖಂಡಿಸುತ್ತೇನೆ ಎಂದರು.
ಈಗಾಗಲೇ ಸರಕಾರದಿಂದ ನೆರೆ ಸಂತ್ರಸ್ತರಿಗಾಗಿ ಮೂರೂವರೆ ಕೋಟಿ ರೂ. ನಷ್ಟು ಅನುದಾನ ಬಂದಿದ್ದು, ಅದನ್ನು ಜಿಲ್ಲಾ ಪಂಚಾಯತಗೆ ನೀಡಲಾಗಿದೆ. ಇನ್ನೂ ಟೆಂಡರ್ ಕರೆಯದೆ ನೆರೆ ಪ್ರವಾಹದ ಕಾಮಗಾರಿಗೆ ಲ್ಯಾಂಡ್ ಆಮರ್ಿಗೆ ನೀಡಿದ್ದು. ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದರು.
ಈ ರೀತಿ ಶಾಸಕಿ ಅಕ್ರಮ ನಡೆಸುವ ಬಗ್ಗೆ ದೂರು ಬಂದಿದ್ದು, ನೆರೆ ಸಂತ್ರಸ್ತರಿಗೆ ಬಂದ ಹಣ ಸರಿಯಾಗಿ ಸಂತ್ರಸ್ತರಿಗೆ ತಲುಪದೇ ಇದ್ದರೇ ಮುಂದಿನಗಳಲ್ಲಿ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.
ಇನ್ನೂ ಗುತ್ತಿಗೆದಾರರು ಯಾರಾದರೂ ಮುಂದೆ ಬಂದು ಶಾಸಕಿ ಹಾಗೂ ಅವರ ಬೆಂಲಿಗರು ಕಮಿಷನ್ ಪಡೆದುಕೊಂಡಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದರೆ, ಶಾಸಕಿ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧನಾಗಿದ್ದೇನೆ ಎಂದರು. ಸರಕಾರದಿಂದ ಬಂದ ನೆರೆ ಸಂತ್ರಸ್ತರ ಅನುದಾನ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಬೇಕು ಒಂದು ವೇಳೆ ಸರಿಯಾಗಿ ಸದ್ಬಳಕೆಯಾಗದೇ ಇದ್ದರೆ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದ್ದರು.
ಕೈಗಾ ಅಣುವಿದ್ಯುತ್ ಸ್ಥಾವರ 5 ಮತ್ತು 6ನೇ ಘಟಕ ವಿಸ್ತರಣೆ ವಿರೋಧಿಸಿ, ಕಳೆದ ರವಿವಾರ ಬೃಹತ್ ಜನ ಜಾಗೃತಿ ಸಮಾವೇಶ ಜರುಗಿತು. ಆದರೆ ಈ ಸಮಾವೇಶದಲ್ಲಿ ಕಾರವಾರ ಶಾಸಕಿ ಭಾಗವಹಿಸಿರಲಿಲ್ಲ. ಕೂಡಲೇ ಶಾಸಕರು ಕೈಗಾ 5 ಮತ್ತು 6ನೇ ಘಟಕದ ಬಗ್ಗೆ ಅವರ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಕೈಗಾ 5 ಮತ್ತು 6ನೇ ಘಟಕದ ವಿರೋಧಿ ಹೋರಾಟಕ್ಕೆ ಪೇಜಾವರ ಶ್ರೀಗಳು ಬಂದು ಶಕ್ತಿ ತುಂಬಿದ್ದಾರೆ. ಒಂದು ವೇಳೆ ಈ ಹೋರಾಟಕ್ಕೆ ಶಾಸಕರ ಸಮಹಮತವಿದ್ದರೆ ಕ್ಷೇತ್ರ ಜನರ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಬೇಕು.
ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗೆಡೆ ತನ್ನ ಭಾಷಣದಲ್ಲಿ ಯುವಕರ ಕೈಯಲ್ಲಿ ಕತ್ತಿ ನೀಡುವುದನ್ನು ಬಿಟ್ಟರೆ ಬೇರೆ ಏನ್ನು ಮಾಡಿಲ್ಲ, ಜಿಲ್ಲೆಯ ಯುವಕರಿಗೆ ಉದ್ಯೋಗವಕಾಶವಿಲ್ಲ ಈ ಬಗ್ಗೆ ಸಂಸದರು ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಸದಸ್ಯ ರಂಜು ಮಾಳ್ಸೇಕರ್ ಇದ್ದರು.