ಸರ್ಕಾರಿ ಸೌಹಾರ್ದ ಸಲೂನ್ ಜಾರಿಗೆಗೆ : ಕೃಷ್ಣಾ ಹಡಪದ ರಣಕಹಳೆ"

ಸರ್ಕಾರಿ ಸೌಹಾರ್ದ ಸಲೂನ್ ಜಾರಿಗೆಗೆ : ಕೃಷ್ಣಾ ಹಡಪದ ರಣಕಹಳೆ"  Government Friendly Salon Implementation: Krishna Hadapada Ranakahale

ಗದಗ 20: "ಸಮಾಜದ ಕೊಳೆಯನ್ನು ತೊಳೆದು ಅಂದ ನೀಡುವ ಸವಿತಾ ಸಮಾಜದ ಕಾಯಕಯೋಗಿಗಳು ಇಂದು ಬೀದಿಗೆ ಬೀಳುತ್ತಿದ್ದಾರೆ. ಕೇಶ ವಿನ್ಯಾಸದ ವೃತ್ತಿ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ನಮ್ಮ ಸುಶಿಕ್ಷಿತ ಯುವಕರಿಗೆ ಹೆಣ್ಣು ಕೊಡಲು ಪಾಲಕರು ಮುಂದೆ ಬರುತ್ತಿಲ್ಲ. ಇದು 21ನೇ ಶತಮಾನದ ಅತಿ ದೊಡ್ಡ ಸಾಮಾಜಿಕ ದುರಂತ. ಈ ಅಸಮಾನತೆಯ ಬೇರನ್ನು ಕತ್ತರಿಸಲು ಸರ್ಕಾರ ತಕ್ಷಣವೇ ’ಸರ್ಕಾರಿ ಸೌಹಾರ್ದ ಸಲೂನ್‌’ ಯೋಜನೆಯನ್ನು ಜಾರಿಗೆ ತರಲೇಬೇಕು," ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ  ಕೃಷ್ಣಾ ಎಚ್‌. ಹಡಪದ ಅವರು ಗುಡುಗಿದರು.       

ಇಂದು ಗದಗ ಜಿಲ್ಲಾಧಿಕಾರಿಗಳ ಪರವಾಗಿ ತಹಶೀಲ್ದಾರ ಸಂತೋಷ ಹಿರೇಮಠ ಸಾಹೇಬರ ಮೂಲಕ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಕ್ರಾಂತಿಕಾರಿ ವಿಚಾರಗಳನ್ನು ಮಂಡಿಸಿದರು:  ಅಸ್ಪೃಶ್ಯತೆಯ ಕಳಂಕಕ್ಕೆ ಸೌಹಾರ್ದತೆಯ ಮದ್ದು:* "ಜಾತಿಯ ಹೆಸರಿನಲ್ಲಿ ದಲಿತ ಬಾಂಧವರಿಗೆ ಕ್ಷೌರ ಸೇವೆ ನಿರಾಕರಿಸುವ ಅಮಾನವೀಯ ಪದ್ಧತಿ ಅಳಿಯಬೇಕು. ನಮ್ಮ ’ಸೌಹಾರ್ದ ಸಲೂನ್‌’ಗಳಲ್ಲಿ ದಲಿತರಿಗೂ ಹಾಗೂ ಎಲ್ಲಾ ವರ್ಗದವರಿಗೂ ಸಮಾನ ಗೌರವದ ಸೇವೆ ಸಿಗಲಿದೆ. ಇದು ಕೇವಲ ಸಲೂನ್ ಅಲ್ಲ, ಇದು ಜಾತಿ ವ್ಯವಸ್ಥೆಯ ವಿರುದ್ಧದ ಸಮಾನತೆಯ ಕೇಂದ್ರವಾಗಲಿದೆ." 

ಸವಿತಾ ಯುವಕರ ವಿವಾಹ ಭಾಗ್ಯಕ್ಕೆ ಸರ್ಕಾರಿ ಮಾನ್ಯತೆಯೇ ದಾರಿ:* "ನಮ್ಮ ಯುವಕರು ಇಂದು ಅತಂತ್ರರಾಗಿದ್ದಾರೆ. ಸರ್ಕಾರಿ ನೌಕರಿಯ ಮಾನ್ಯತೆ ಸಿಕ್ಕರೆ ಮಾತ್ರ ಸಮಾಜದಲ್ಲಿ ಅವರಿಗೆ ಗೌರವ ಸಿಗುತ್ತದೆ ಮತ್ತು ಹೆಣ್ಣು ಮಕ್ಕಳ ಪಾಲಕರು ಧೈರ್ಯವಾಗಿ ಸಂಬಂಧ ಬೆಳೆಸುತ್ತಾರೆ. ಸರ್ಕಾರವು ನಮ್ಮ ಕಾಯಕಕ್ಕೆ ’ಸರ್ಕಾರಿ ಉದ್ಯೋಗ’ದ ಮುದ್ರೆ ಒತ್ತದಿದ್ದರೆ ಲಕ್ಷಾಂತರ ಯುವಕರ ಬದುಕು ಬರಡಾಗಲಿದೆ."  ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ’ಆರನೇ ಗ್ಯಾರಂಟಿ’ "ಬಡ ಶಾಲಾ ಮಕ್ಕಳಿಗೆ ಮತ್ತು ಅಸಹಾಯಕ ಹಿರಿಯ ನಾಗರಿಕರಿಗೆ ಸರ್ಕಾರಿ ಸೌಹಾರ್ದ ಸಲೂನ್ಗಳಲ್ಲಿ ಉಚಿತವಾಗಿ ಕ್ಷೌರ ಸೇವೆ ನೀಡುವ ಮೂಲಕ ಇದನ್ನು ಸರ್ಕಾರದ ’ಆರನೇ ಗ್ಯಾರಂಟಿ’ ಎಂದು ಘೋಷಿಸಲಿ.

ಜನರ ತೆರಿಗೆ ಹಣವನ್ನು ಹಂಚುವ ಬದಲು, ಇಂತಹ ಜನಪರ ಸೇವೆಗಳಿಗೆ ಸವಿತಾ ಸಮಾಜವನ್ನು ಬಳಸಿಕೊಳ್ಳಲಿ."  ಕಾರ​‍್ೊರೇಟ್ ಹಗಲು ದರೋಡೆಗೆ ಬ್ರೇಕ್‌: "ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಕಾರ​‍್ೊರೇಟ್ ಸಲೂನ್ಗಳ ನಡುವೆ ಕುಲಕಸುಬು ನಂಬಿದ ಕುಟುಂಬಗಳು ಸಾಯುತ್ತಿವೆ. ಸರ್ಕಾರವು ನಮಗೆ ಆಧುನಿಕ ಸೌಲಭ್ಯ ಮತ್ತು ಆರ್ಥಿಕ ಭದ್ರತೆ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಕತ್ತರಿ-ಬಾಚಣಿಗೆ ಹಿಡಿದು ಉಗ್ರ ಹೋರಾಟ ಮಾಡಲಾಗುವುದು," ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ  ಕೃಷ್ಣಾ ಎಚ್‌. ಹಡಪದ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.       

ಈ ಸಂದರ್ಭದಲ್ಲಿ ಹಿರಿಯರಾದ ಹನುಮಂತಪ್ಪ ರಾಂಪೂರ. ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಎನ್ ಕೋಟೆಕಲ್ಲ. ಸಂತ ಸೇನಾ ಮಹಾರಾಜ ನಾಭಿಕ್ ಮರಾಠ (ಸವಿತಾ) ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ. ಜಿಲ್ಲಾ ಖಜಾಂಚಿ ಅರೋಣ ರಾಂಪುರ. ಸಮಾಜದ ಮುಖಂಡರಾದ ಶ್ರೀನಿವಾಸ ಕೋಟೆಕಲ್ಲ. ಹಾಗೂ ಸವಿತಾ ಸಮಾಜದ  ಕ್ರಾಂತಿಕಾರಿ ಯುವಕರು ಪದಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಧ್ವನಿ ಎತ್ತಿದರು.