ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರ
Godachi Sri Veerbhadreshwar Constituency
ರಾಮದುರ್ಗ 03: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿಯು ಪೌರಾಣಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಉತ್ತರ ಕರ್ನಾಟಕದ ಧರ್ಮಸ್ಥಳವೆಂದೇ ಖ್ಯಾತಿ ಪಡೆದ ವೀರಭದ್ರೇಶ್ವರ ದೇವಸ್ಥಾನವು ನಾಡಿನ ತುಂಬೆಲ್ಲಾ ಭಕ್ತ ಸಮೂಹವನ್ನು ಹೊಂದಿದೆ. ಶ್ರೀ ಗೊಡಚಿ ಕ್ಷೇತ್ರವು ಕಿಲ್ಲಾ ತೊರಗಲ್ಲದ ಶಿಂಧೆ ಮಹಾರಾಜರ ಆಡಳಿತಕ್ಕೆ ಒಳಪಟ್ಟಿದೆ. ದೇವಸ್ಥಾನವನ್ನು ಶಿಂಧೆ ಮನೆತನದ ಪೂರ್ವಜರು ನಿರ್ಮಿಸಿದರು. 1937ರಲ್ಲಿ ದೇವಸ್ಥಾನದ ದ್ವಾರಬಾಗಿಲವನ್ನು ನರೋಜಿರಾವ ಶಿಂಧೆ ಮಹಾರಾಜರು ಕಟ್ಟಿಸಿದರು. ನಂತರದಲ್ಲಿ ಉದಯಸಿಂಗ್ ಶಿಂಧೆ ಮಹಾರಾಜರು ವೀರಭದ್ರ ಗುಡಿಯ ಹಾಗೂ ಭದ್ರ ಕಾಳಿ ಗುಡಿಯ ಮುಂಭಾಗಗಳನ್ನು ಗ್ರಾನೈಟ್ ಕಲ್ಲುಗಳಿಂದ ಕಟ್ಟಿಸಿದರು. ಈ ಐತಿಹ್ಯ ಕ್ಷೇತ್ರವು 12ನೇ ಶತಮಾನಕ್ಕಿಂತಲೂ ಪೂರ್ವದ್ದು ಎಂದು ಹೇಳಲಾಗುತ್ತಿದೆ. ಹಿಂದೆ ಈ ಸ್ಥಳವು ಅಪಾರವಾದ ಗಿಡಕಂಟೆಗಳಿಂದ ಕೂಡಿತ್ತು. ಕೊಡಚಿಕಂಟೆಗಳಿಂದ ತುಂಬಿಕೊಂಡ ಕ್ಷೇತ್ರವು ನಂತರದಲ್ಲಿ ಕೊಡಚಿ ಕ್ಷೇತ್ರವಾಯಿತು. ಕೊಡಚಿಯೇ ಇಂದು ರೂಢಿಯಲ್ಲಿ ಗೊಡಚಿಯಾಗಿ ಮಾರ್ಪಟಟಿದೆ. ಕೊಡಚಿಕಂಟಿಯಲ್ಲಿ ನೆಲೆಸಿದ್ದ ವೀರಭದ್ರ ದೇವರನ್ನು ಕೊಡಚಪ್ಪ ಎಂದು ಕರೆಯುತ್ತಿದ್ದ ಜನ ಇಂದು ಗೊಡಚಪ್ಪನೆಂದು ಕರೆಯುತ್ತಿದ್ದಾರೆ.
ದೇವಾಲಯದಲ್ಲಿ ವಿಜಯನಗರ ಹಾಗೂ ಚಾಲುಕ್ಯರ ವಾಸ್ತುಶಿಲ್ಪ ಮಾದರಿಯನ್ನು ಕಾಣಬಹುದು. ದೇವಸ್ಥಾನದ ಹೆಬ್ಬಾಗಿಲು ಚಾಲುಕ್ಯರ ವಾಸ್ತುಶಿಲ್ಪವನ್ನು ಹಾಗೂ ಗರ್ಭಗುಡಿಯು ವಿಜಯನಗರ ಕಲೆಯ ಶೈಲಿಯನ್ನು ನೆನಪಿಸುತ್ತದೆ. ವೀರಭದ್ರ ದೇವರ ಮೂರ್ತಿ ಪೌರಾಣಿಕವಾದರೆ, ಬಿಜ್ಜಳನು ಸೈನ್ಯದೊಂದಿಗೆ ಶರಣರು ಮಾಡಿದ ಕಾಳಗದಲ್ಲಿ ಮಡಿವಾಳ ಮಾಚಿದೇವ ವೀರಮರಣ ಹೊಂದಿದ್ದು ಐತಿಹಾಸಿಕ ಘಟನೆಯಾಗಿದೆ. ಪರಶಿವನ ಅನುಗ್ರಹದಿಂದ ಅವತರಿಸಿದ ವೀರಭದ್ರೇಶ್ವರ ದಕ್ಷ ಬ್ರಹ್ಮ ಸಂಹಾರಕ್ಕಾಗಿ ರೌದ್ರವತಾರ ತಾಳಿ ಹೋರಾಡಿ ವೀರ ಎಂಬುದನ್ನು ಇತಿಹಾಸ ತಿಳಿಸುತ್ತದೆ.
ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರದ ಪೀಠದ ಮೆಲೆ ವೀರಭದ್ರನ ಮೂರ್ತಿ ಶಿಲ್ಪವಿದೆ. ನಾಲ್ಕು ಮೂಲೆಗಳಲ್ಲಿ ಆರ್ಧಕಂಬಗಳಿವೆ. ವಿತಾನದಲ್ಲಿ ಪದ್ಮಮಂಡಲದ ಅಲಂಕಾರಾಗಿದೆ. ದ್ವಾರಬಂಧ ಪಂಚ ಶಾಖೆಯಿಂದ ಕೂಡಿದ್ದು, ಸ್ತಂಭ ಶಾಖಾ ಪ್ರಮುಖವಾಗಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮೀಯ ಉಬ್ಬುಶಿಲ್ಪವಿದೆ. ಗರ್ಭಗೃಹಕ್ಕೆ ಹೊಂದಿಕೊಂಡು ಅಂತರಾಳವಿದೆ. ಮೇಲ್ಭಾಗದ ವಿತಾನದಲ್ಲಿ ಪದ್ಮಮಂಡಲದ ಅಲಂಕಾರವಿದೆ. ದ್ವಾರಬಂಧವು ಸರಳವಾಗಿದ್ದು, ಅಂತರಾಳಕ್ಕೆ ಹೊಂದಿಕೊಂಡು ನವರಂಗವಿದೆ. ನವರಂಗದ ಮಧ್ಯದಲ್ಲಿ ನಾಲ್ಕು ಸ್ತಂಭಗಳಿವೆ. ಮೇಲ್ಭಾಗದ ವಿತಾನದಲ್ಲಿ ಪದ್ಮಮಂಡಲದ ಅಲಂಕಾರವಿದೆ. ಭಿತ್ತಿಯು ಸಾಧಾರಣವಾಗಿದ್ದು, ಯಾವದೇ ರೀತಿಯ ಅಲಂಕಾರವಾಗಿಲ್ಲ. ಮೇಲ್ಭಾಗದಲ್ಲಿ ಶಿಖರವಿದ್ದು, ಸ್ತೂಪ, ಕಲಶವಿದೆ.
ವೀರಭದ್ರನ ಗುಡಿಯ ಬೆನ್ನಗೋಡೆಯಲ್ಲಿ ಮತ್ತು ಮುದಿ ವೀರಭದ್ರನ ಎದುರಿಗೆ ಸಣ್ಣ ಮಂಟಪದಲ್ಲಿ ಚಿಕ್ಕ ಮೂರ್ತಿ ಇದೆ. ಅದರ ತಲೆಯ ಮೇಲೆ ಕೀರೀಟ ಇದೆ. ಎರಡೂ ಕೈಗಳು ಮೇಲೆತ್ತಿವೆ. ಇನ್ನೆರಡು ಕೈಗಳು ಅಕ್ಕಪಕ್ಕದ ಸಣ್ಣಮೂರ್ತಿಗಳ ತಲೆಯ ಮೇಲೆ ಇವೆ. ಈ ಮೂರ್ತಿಯನ್ನು ‘ಅನಕ್ಯಾ’ ಎಂದು ಕರೆಯುತ್ತಾರೆ. ಗುಗ್ಗಳ ಪೂಜೆಯ ಮುನ್ನ ಈ ಅನಕ್ಯಾನ ಪೂಜೆ ಮಾಡುವ ಪದ್ಧತಿ ಈಗಲೂ ಇದೆ. ವೀರಭದ್ರ ದೇವರ ಗುಡಿಯ ಹಿಂದೆ ಕುಳಿತ ಮುದಿ ವೀರಭದ್ರನ ಮೂರ್ತಿ ಇದೆ. ಮೂರ್ತಿಯ ತಲೆಯ ಮೆಲೆ ಕೀರೀಟ, ಎದೆಯ ಮೇಲೆ ರುದ್ರಾಕ್ಷಿಮಾಲೆ ಮತ್ತು ಗುಂಡಕರಡಿಗೆ, ಸೊಂಟದಲ್ಲಿ ಹೆಡೆಯುಳ್ಳ ಸರ್, ಮುಂಬದಿಯ ಬಲಗೈಯಲ್ಲಿ ನೆಟ್ಟಗಿದ್ದ ಖಡ್ಗ ಹಾಗೂ ಎಡಗೈಯಲ್ಲಿ ಢಾಲುಗಳಿವೆ. ಮಡಚಿದ ಎಡಗಾಲು ಚಾಚಿದ ಬಲಗಾಲು ಇದ್ದರೆ, ಎರಡು ಕಾಲುಗಳಿಗೆ ತೋಡೆ ಮತ್ತು ಆವಿಗೆ ಇವೆ.
ವೀರಭದ್ರ ದೇವರ ಗುಡಿಯ ಎಡಗಡೆ ಭದ್ರಕಾಳಿಯ ಗುಡಿ ಇದೆ. ಇವೆರಡರ ಮಧ್ಯಭಾಗದ ಎದುರಿಗೆ ಅಂದಾಜು 20 ಅಡಿ ಎತ್ತರದ ದೀಪಮಾಲಿ ಕಂಬ ಇದೆ. ಇದರಲ್ಲಿ 110 ಸಣ್ಣ ಪಣತಿಗಳ ಮತ್ತು ಕಂಬದ ಮೇಲೆ ದೊಡ್ಡ ಪಣತಿ ಇಡುವ ವ್ಯವಸ್ಥೆ ಇದೆ. ಮೂರು ಅಂತಸ್ತಿನ ಎತ್ತರದ ಈ ಕಂಬದ ಮೇಲೆ ಟೆಂಗಿನಕಾಯಿ ಒಡೆಯುತ್ತಾರೆ. ಗ್ರಾಮದ ಹೂಗಾರರೆ 2ನೇ ಅಂತಸ್ತಿನವರೆಗೆ ಮೇಲೇರಿ 3ನೇ ಅಂತಸ್ತನ್ನು ಅಲ್ಲಾಡಿಸಿ ಕಾಯಿಯನ್ನು ಕೆಡವುತ್ತಾರೆ. ಆಗ ಮೇಲಿನಿಂದ ದೊಡ್ಡ ಹಾಗೂ ಸಣ್ಣ ಪಣತಿಗಳನ್ನು ಹಚ್ಚಿ ದೀಪಾವಳಿ ಪಾಡ್ಯ ದಿನದಂದು ಕಾರ್ತಿಕೋತ್ಸವನ್ನು ಆಚರಿಸಿ ನಂತರ ಹೊಸ್ತಿಲ ಹುಣ್ಣಿಮೆಯಾದ ಮೂರು ದಿವಸಕ್ಕೆ ಇಳಿಸುತ್ತಾರೆ.
ಇಲ್ಲಿ ದೀಪಮಾಲಿ ಕಂಬವು ಅಲ್ಲಾಡುವದೊಂದು ವಿಶೇಷವಾಗಿದೆ. ಸವದತ್ತಿಯ ಯಲ್ಲಮ್ಮ ವೀರಭದ್ರದ ಸಹೋದರಿ ಎನ್ನೋದು ಪ್ರತೀತಿ. ಸವದತ್ತಿಯಲ್ಲಿ ಪ್ರತಿವರ್ಷ ಮುತ್ತೈದೆ ಹುಣ್ಣಿಮೆ ಸಂದರ್ಭದಲ್ಲಿ ವೀರಭದ್ರರು, ಯಲ್ಲಮ್ಮ ದೇವಿಗೆ ಸೀರೆ, ಕುಪ್ಪಸ, ಹಸಿರುಬಳೆ ಮುಂತಾದವುಗಳನ್ನು ಸಹೋದರತ್ವದ ಕಾಣಿಕೆಯಾಗಿ ಇಂದಿಗೂ ಕೊಡಲಾಗುತ್ತದೆ. ಅದೇ ರೀತಿ ಗೊಡಚಿ ಜಾತ್ರೆಯ ಕಾಲಕ್ಕೆ ವೀರಭದ್ರ ದೇವರಿಗೆ ದೋತರ, ಶಲ್ಯ, ನಂದಿಕೋಲು, ಪೂಜಾ ಸಾಮಗ್ರಿ ಮೊದಲಾದವುಗಳನ್ನು ಸಹೋದರಿಯ ಕಾಣಿಕೆಯಾಗಿ ಕಳುಹಿಸಿಕೊಡುವ ಸಂಪ್ರದಾಯ ಇಂದಿಗೂ ಇದೆ. ದೇವಾಲಯದ ಪೂರ್ವಕ್ಕೆ ದಿಗಂಬರೇಶ್ವರ ಮುನಿಯ ಗದ್ದುಗೆ ಇದೆ. ದಕ್ಷಿಣಕ್ಕೆ ವಿಭೂತಿಮಠ ಗವಿಯೂ ಇದ್ದು, ಈಶಾನ್ಯ ದಿಕ್ಕಿಗೆ 12ನೆಯ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಗೂ ಮತ್ತು ಶಿವಶರಣರಿಗೂ ನಡೆದ ಯುದ್ಧದ ಸ್ಥಳ ರಣಬಾಜಿ ಇದೆ.
ಪ್ರತಿವರ್ಷವು ಹೊಸ್ತಿಲು ಹುಣ್ಣಿಮೆಯೆಂದು ಮಹಾರಥೋತ್ಸವವು ಜರುಗುವದು. ಹೊಸ್ತಿಲ ಹುಣ್ಣಿಮೆಯಂದು ಅಂದರೆ ಗುರುವಾರ ಡಿಸೆಂಬರ್ 4ರಂದು ಸಂಜೆ 5ಗಂಟೆಗೆ ಮಹಾರಥೋತ್ಸವವು ಅತೀ ವಿಜೃಂಭಣೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಲಿದೆ. ಜಾತ್ರೆಯಲ್ಲಿ ಭಕ್ತರು ಮಾಡುವ ಗುಗ್ಗಳ ಪೂಜೆ, ನಾಡಿನ ಅನೇಕ ಕಡೆಗಳಿಂದ ಬರುವ ಪುರವಂತರು, ವೀರಗಚ್ಚಿ ಹಾಕಿ, ಕಾಲಲ್ಲಿ ಗೆಜ್ಜೆಗಳನ್ನು ಕಟ್ಟಿಕೊಂಡು ಕುಣಿಯುತ್ತಲೇ ಹೇಳುವ ಒಡಪುಗಳು. ಶಸ್ತ್ರ ಹಾಕಿಕೊಳ್ಳುವದು, ವೀರಗಾಸೆ ನೃತ್ಯ ಮುಂತಾದವುಗಳು ನಡೆಯುತ್ತವೆ. ಹೀಗೆ ವಿವಿಧ ಭಂಗಿಗಳು, ವೀರಭಾವದ ಅಭಿನಯಗಳು, ಕುಣಿತಗಳು, ವಾದ್ಯಗಳು ನೆರೆದಂಥ ಭಕ್ತರನ್ನು ಸಮ್ಮೋಹನಗೊಳಿಸುತ್ತವೆ. ಪಾದಯಾತ್ರೆಯ ಮೂಲಕ ಬಹಳ ಭಕ್ತರು ಆಗಮಿಸಿ ದೇವರಿಗೆ ತಮ್ಮ ಹರಕೆ ಸಲ್ಲಿಸಿ ಸಂತೃಪ್ತರಾಗುತ್ತಾರೆ. ಸೋಮವಾರ ಡಿಸೆಂಬರ್ 8 ರಂದು ಸಂಜೆ 6ಕ್ಕೆ ಲಕ್ಷದೀಪೋತ್ಸವ ಅದ್ದೂರಿಯಾಗಿ ಜರುಗಲಿದೆ.
ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವವಾಗಿ ಪ್ರಸಿದ್ಧಿ ಪಡೆದಿರುವ ಜಾಗೃತ ದೇವ ವೀರಭದ್ರರ ಜಾತ್ರೆ ನಾಡಿನಲ್ಲಿಯೇ ಖ್ಯಾತಿ ಪಡೆದಿದೆ. ದೇವಾಲಯದಲ್ಲಿ ಭಕ್ತರಿಗಾಗಿ ನಿರಂತರ ಅನ್ನದಾಸೋಹ ನಡೆಸುತ್ತಿದ್ದು, ಉತ್ತರ ಕರ್ನಾಟಕದ ಧರ್ಮಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯಲ್ಲಿ ಬಳುವಳಿಕಾಯಿ ಹಾಗೂ ಬಾರೆಹಣ್ಣಿನ ಮಾರಾಟ ಜೋರಾಗಿ ನಡೆಯುತ್ತದೆ. ಆದ್ದರಿಂದ ಈ ಜಾತ್ರೆಯನ್ನು ಬಳವಳಿಕಾಯಿ ಜಾತ್ರೆ ಎಂದೇ ಕರೆಯುತ್ತಾರೆ. ಹದಿನೈದು ದಿನಗಳವರೆಗೆ ಪ್ರಖ್ಯಾತ ನಾಟಕ ಕಂಪನಿಗಳ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅಲ್ಲದೇ ಅರಣ್ಯ, ಕೃಷಿ, ಆರೋಗ್ಯ ಮುಂತಾದ ಇಲಾಖೆಗಳು ವಸ್ತು ಪ್ರದರ್ಶನಗಳು ಯಶಸ್ವಿಯಾಗಿ ನಡೆಯುತ್ತವೆ. ತಲುಪುವ ಮಾರ್ಗ: ಬೆಳಗಾವಿಯಿಂದ 87 ಕಿ.ಮೀ. ಹಾಗೂ ರಾಮದುರ್ಗದಿಂದ 15 ಕಿ.ಮೀ. ಅಂತರದಲ್ಲಿ ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರ ಇರುತ್ತದೆ. ಎಲ್ಲ ಜಿಲ್ಲಾ ಕೇಂದ್ರ ಸ್ಥಳಗಳಿಂದ ಗೊಡಚಿಗೆ ಉತ್ತಮ ಬಸ್ ಸೌಲಭ್ಯವಿದ್ದು, ಬದಾಮಿಯ ರೇಲ್ವೆ ನಿಲ್ದಾಣವು ಅತೀ ಸನಿಹದಲ್ಲಿ ಇರುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 