ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ವಡಗಾವನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ವಡಗಾವನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ Free health check-up camp at Sri Mallikarjuna Temple, Vadagaon a success


  ಬೆಳಗಾವಿ 20: ಆರೋಗ್ಯವೇ ನಿಜವಾದ ಸಂಪತ್ತು. ನಿಯಮಿತ ಆರೋಗ್ಯ ತಪಾಸಣೆ, ಸಮತೋಲನ ಆಹಾರ, ಸಾಕಷ್ಟು ನೀರಿನ ಸೇವನೆ, ದಿನನಿತ್ಯ ವ್ಯಾಯಾಮ ಹಾಗೂ ಒತ್ತಡ ರಹಿತ ಜೀವನಶೈಲಿ ಉತ್ತಮ ಆರೋಗ್ಯಕ್ಕೆ ಅತಿ ಅಗತ್ಯ. ರೋಗ ಬರುವ ಮುನ್ನವೇ ಮುನ್ನೆಚ್ಚರಿಕೆ ವಹಿಸುವುದು ಆರೋಗ್ಯಕರ ಬದುಕಿಗೆ ದಾರಿ ಎಂದು ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ಖ್ಯಾತ ಎಲುಬು ಕೀಲು ತಜ್ಞರಾದ ಡಾ. ಪೂಜಾ ಬರನ್ವಾಲ ಅವರು ಮಾತನಾಡುತ್ತಿದ್ದರು. ಅವರು ನಿನ್ನೆ ಮಾದವಪುರ ವಡಗಾವಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ” ದ ಅಂಗವಾಗಿ ಮಾತನಾಡುತ್ತಿದ್ದರು.  ಸಾರ್ವಜನಿಕರ ಆರೋಗ್ಯ ಜಾಗೃತಿ ಮತ್ತು ಪ್ರಾಥಮಿಕ ಆರೋಗ್ಯ ತಪಾಸಣೆಯ ಉದ್ದೇಶದಿಂದ ಹಮ್ಮಿಕೊಂಡ ಈ ಶಿಬಿರದ ಲಾಭ ಪಡೆಯಿರಿ ಎಂದು ತಿಳಿಸಿದರು. 

ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ. ಸಂಜಯ ಕಂಬಾರ ಅವರು ಮಾತನಾಡುತ್ತ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಡಲು ಅನುಕೂಲ ಮಾಡಿಕೊಟ್ಟಂತಹ ದೇವಸ್ಥಾನ ಟ್ರಸ್ಟನ ಸದಸ್ಯರಿಗೆ ಅಭಿನಂದಿಸಿದರು ಹಾಗೂ ನಾಗರಿಕರಿಗೆ ಆಸ್ಪತ್ರೆಯ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಸೂಚಿಸಿದ್ದಾರೆ.  ಶಿಬಿರದಲ್ಲಿ ಅಸ್ಥಿರೋಗ ತಜ್ಞೆ ಡಾ. ಪೂಜಾ ಬರನ್ವಾಲ, ನೇತ್ರ ತಜ್ಞೆ ಡಾ. ಸ್ಪೂರ್ತಿ ಮೊರ​‍್ಪನವರ, ಚಿಕ್ಕ ಮಕ್ಕಳ ತಜ್ಞ ಡಾ.ಯೋಗೇಶ ರಾವಳ ಹಾಗೂ ಕುಟುಂಬ ವೈದ್ಯಕೀಯ ತಜ್ಞೆ ಡಾ. ದಿಶಾ ಭಾಕರ ಮತ್ತು ಫಿಸಿಯೋಥೆರಪಿ ವಿಭಾಗದ ತಜ್ಞೆ ಡಾ. ಶಿವಾನಿ ಪಾಟೀಲ ಭಾಗವಹಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. 

ಒಟ್ಟು 105 ಜನರು ಈ ಶಿಬಿರದ ಪ್ರಯೋಜನ ಪಡೆದರು. ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ಮೂಳೆ-ಸಂಧಿ ಸಮಸ್ಯೆಗಳು ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಅಗತ್ಯವಿರುವ ರೋಗಿಗಳಿಗೆ ಮುಂದಿನ ಚಿಕಿತ್ಸೆ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಯಿತು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಪ್ರಶಾಂತ ದೇಸಾಯಿ ಅವರು ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಆರೋಗ್ಯ ಶಿಬಿರಗಳನ್ನು ಬೆಳಗಾವಿಯ ವಿವಿಧ ಭಾಗಗಳಲ್ಲಿ ನಡೆಸುವ ಭರವಸೆ ವ್ಯಕ್ತಪಡಿಸಿದರು.