ಸಹಕಾರ ಸಪ್ತಾಹ ಅಂಗವಾಗಿ ಆರೋಗ್ಯ ತಪಾಸಣೆ ಹಾಗೂ ಸಹಕಾರ ಜಾಗೃತಿ ಶಿಬಿರ

ಸಹಕಾರ ಸಪ್ತಾಹ ಅಂಗವಾಗಿ ಆರೋಗ್ಯ ತಪಾಸಣೆ ಹಾಗೂ ಸಹಕಾರ ಜಾಗೃತಿ ಶಿಬಿರ  Health check-up and cooperative awareness camp as part of Cooperative Week

ಲೋಕದರ್ಶನ ವರದಿ 

ಗದಗ, ಜು.03: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್ ಧಾರವಾಡ, ಧಾರವಾಡ ಹಾಲು ಒಕ್ಕೂಟ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯ ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ’ಸಹಕಾರ ಸಪ್ತಾಹ’ ಆಚರಿಸಲಾಗುತ್ತಿದೆ.  ಈ ಅಂಗವಾಗಿ ಶುಕ್ರವಾರ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಜಾಗೃತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಪ್ಪ ಯಾವಗಲ್, ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಗ್ರಾಮೀಣ ಸ್ವಾವಲಂಬನೆಗೆ ಪ್ರಮುಖ ಆಧಾರವಾಗಿದ್ದು, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಲಪಡಿಸುವಲ್ಲಿ ಸಹಕಾರ ಚಳವಳಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.  ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಕೆ. ಮಾಳಶೆಟ್ಟಿ ಮಾತನಾಡಿ, ರೈತರಿಗೆ ಕೃಷಿ ಸಾಲ, ನೀರಾವರಿ, ಪಶುಸಂಗೋಪನೆ, ಉಳಿತಾಯ ಖಾತೆ, ಸ್ಥಿರ ಠೇವಣಿ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿದ್ದು, ಸಹಕಾರ ಬ್ಯಾಂಕುಗಳ ಸೇವೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.  

ತಾಲೂಕು ವೈದ್ಯಾಧಿಕಾರಿ ಡಾ. ಪಿ.ಎಂ. ಕಮತಿ ಅವರು ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಉತ್ತಮ ಆರೋಗ್ಯಕ್ಕೆ ಅಗತ್ಯ ಎಂದು ತಿಳಿಸಿದರು.  ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ಕೆ.ವಿ. ಹಾದಿಮನಿ ಅವರು ಹೃದಯಾಘಾತ, ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕಾಗಿ ನಿಯಮಿತ ಆರೋಗ್ಯ ತಪಾಸಣೆ, ಯೋಗ, ವ್ಯಾಯಾಮ ಮತ್ತು ಸಮರ​‍್ಕ ವಿಶ್ರಾಂತಿಯ ಮಹತ್ವವನ್ನು ವಿವರಿಸಿದರು.  ಕೆಸಿಸಿ ಬ್ಯಾಂಕ್ ರೋಣ ಶಾಖೆ ವ್ಯವಸ್ಥಾಪಕ ವಿ.ಎಸ್‌. ಪಾಟೀಲ ಅವರು ಬ್ಯಾಂಕಿನ ವಿವಿಧ ಸಾಲ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ನೀಡಿದರು. ಧಾರವಾಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಿ.ಸಿ. ಸಾಲೋಟಿಮಠ ಅವರು ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನ, ಪಶು ವಿಮೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ವಿವರಿಸಿದರು.